ADVERTISEMENT

ಬೆಂಗಳೂರು | ಪಟಾಕಿ ಅವಘಡ: 40ಕ್ಕೂ ಹೆಚ್ಚು ಮಂದಿಗೆ ಗಾಯ

ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲು, ಹಲವರ ಕಣ್ಣಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 15:39 IST
Last Updated 1 ನವೆಂಬರ್ 2024, 15:39 IST
<div class="paragraphs"><p>ಪಟಾಕಿ&nbsp;</p></div>

ಪಟಾಕಿ 

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದಲ್ಲಿ ಸಂಭವಿಸಿದ ಪಟಾಕಿ ಅವಘಡಗಳಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಕಣ್ಣಿಗೆ ಗಂಭೀರ ಹಾನಿ ಮಾಡಿಕೊಂಡವರು ಶಂಕರ ಆಸ್ಪತ್ರೆ, ನಾರಾಯಣ ನೇತ್ರಾಲಯ ಹಾಗೂ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕೆಲವರಿಗೆ ಮೈ, ಕೈಗೆ ಸುಟ್ಟ ಗಾಯಗಳಾಗಿವೆ.

‘ಪಟಾಕಿ ಸಿಡಿಸುವಾಗ ಕಿಡಿಯೊಂದು ತಗುಲಿ ಬಾಲಕನೊಬ್ಬನ ಕಣ್ಣಿಗೆ ಗಂಭೀರ ಗಾಯವಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಆತಂಕವಿದೆ. ಮಕ್ಕಳು, ವಯಸ್ಕರು ಸೇರಿದಂತೆ 23 ಮಂದಿ ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಎಂಟು ಮಕ್ಕಳ ಕಣ್ಣಿನ ಕಾರ್ನಿಯಾಗೆ ಹಾನಿಯಾಗಿದೆ. ಐದು ವರ್ಷದ ಬಾಲಕಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಹತ್ತು ವರ್ಷದ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ’ ಎಂದು ಶಂಕರ್‌ ಕಣ್ಣಿನ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಪಟಾಕಿ ಸಿಡಿಸುತ್ತಿರುವುದನ್ನು ನೋಡುತ್ತಿದ್ದ ಮೂರು ವರ್ಷದ ಹೆಣ್ಣು ಮಗುವಿಗೆ ಬೆಂಕಿಯ ಕಿಡಿ ತಗುಲಿ, ಕಣ್ಣಿನ ಕಾರ್ನಿಯಾಗೆ ಹಾನಿಯಾಗಿದೆ. ಮತ್ತೊಂದೆಡೆ 10 ವರ್ಷದ ಬಾಲಕನೊಬ್ಬ ಸಿಡಿಯದ ಪಟಾಕಿಯನ್ನು ಪರಿಶೀಲಿಸಲು ಮುಂದಾದ ವೇಳೆ ಸ್ಫೋಟಗೊಂಡು ಕಣ್ಣಿಗೆ ಗಾಯವಾಗಿದೆ.

‘ಆನೆ ಪಟಾಕಿ ಸ್ಫೋಟದಿಂದಾಗಿ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರ ಕಣ್ಣಿನ ಕಾರ್ನಿಯಾಗೆ ತೀವ್ರವಾಗಿ ಹಾನಿಯಾಗಿದೆ. ಹಲವರಿಗೆ ಕಾರ್ನಿಯಾ ಸವೆತ ಉಂಟಾಗಿದೆ. ಮೂವರು ಮಹಿಳೆಯರು, ಆರು ಮಕ್ಕಳು ಸೇರಿ ಹದಿನಾಲ್ಕು ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ರೋಹಿತ್ ಶೆಟ್ಟಿ ತಿಳಿಸಿದ್ದಾರೆ .

ಮಿಂಟೋ ಆಸ್ಪತ್ರೆಯಲ್ಲಿ ಶುಕ್ರವಾರ ಎಂಟು ಮಂದಿ ದಾಖಲಾಗಿದ್ದಾರೆ. ಪಟಾಕಿ ಸಿಡಿಸುವ ವೇಳೆ 17 ವರ್ಷದ ಬಾಲಕನ ಕಣ್ಣಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಪಟಾಕಿ ಕಿಡಿ ತಗುಲಿ 40 ವರ್ಷದ ವ್ಯಕ್ತಿಯ ಕಣ್ಣಿನ ಕಾರ್ನಿಯಾಗೆ ಗಾಯವಾಗಿದೆ.

‘ಪಟಾಕಿ ಸಿಡಿಸುವುದನ್ನು ನೋಡುತ್ತಿರುವ ವೇಳೆ ಕಣ್ಣಿಗೆ ಕಿಡಿ ತಗುಲಿ ಗಾಯಗೊಂಡಿರುವ 18 ವರ್ಷದ ಬಾಲಕ ಮತ್ತು 5 ವರ್ಷದ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಬಾಲಕನ ಎಡಗಣ್ಣಿನ ಕಾರ್ನಿಯಾಗೆ ಗಂಭೀರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎರಡು ವಾರಗಳ ನಂತರ ಎಷ್ಟು ಪ್ರಮಾಣದಲ್ಲಿ ದೃಷ್ಟಿ ಹೋಗಿದೆ ಎಂಬುದು ತಿಳಿಯಲಿದೆ’ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಅಗರವಾಲ್ ಕಣ್ಣಿನ ಆಸ್ಪತ್ರೆಯಲ್ಲಿ 9 ಮಂದಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. 

ಪಟಾಕಿ ಸಿಡಿಸುವ ವೇಳೆ ಸಾರ್ವಜನಿಕರು ಎಚ್ಚರ ವಹಿಸಬೇಕು ಹಾಗೂ ಮಕ್ಕಳ ಕಣ್ಣಿಗೆ ಹಾನಿ ಆಗದಂತೆ ಕನ್ನಡಕ ಧರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.