ಬೆಂಗಳೂರು: ದಾಸರಹಳ್ಳಿ ಹೋಬಳಿಯ ಹುಸ್ಕೂರು ಎಂಬ ಗ್ರಾಮದಲ್ಲಿರುವ ನೆಡುತೋಪನ್ನು ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ ಸ್ಮಶಾನವಾಗಿ ಪರಿವರ್ತನೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹುಸ್ಕೂರು ಗ್ರಾಮದಲ್ಲಿರುವ 2.22 ಎಕರೆ ನೆಡುತೋಪಿನಲ್ಲಿ ಸ್ಥಳೀಯ ಯುವಕರು ವಿವಿಧ ಜಾತಿಯ 130ಕ್ಕೂ ಹೆಚ್ಚು ಗಿಡ–ಮರಗಳನ್ನು ಬೆಳೆಸಿದ್ದಾರೆ. ನೆಡುತೋಪಿನ ಅಭಿವೃದ್ಧಿಗೆ ₹2 ಲಕ್ಷ ಖರ್ಚು ಮಾಡಿದ್ದಾರೆ. ಆದರೆ ಗ್ರಾಮದ ಕೆಲವರ ಒತ್ತಡದ ಮೇರೆಗೆ ಶಾಸಕರು, ಜಿಲ್ಲಾಧಿಕಾರಿಗಳು ನೆಡುತೋಪನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿರುವುದು ಖಂಡನೀಯ ಎಂದು ಗ್ರಾಮದ ಶಿವಕುಮಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಪ್ರಕರಣದ ಕುರಿತು ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ ಅವರಿಗೆ ಮನವರಿಕೆ ಮಾಡಲಾಗಿತ್ತು. ಆದರೂ ಅವರು ರಾಜಕೀಯ ಒತ್ತಡದಿಂದ ಮಾರ್ಚ್ 8, 2022ರಲ್ಲಿ ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡಿದ್ದಾರೆ. ಗ್ರಾಮದಲ್ಲಿ ಈಗಾಗಲೇ ಸ್ಮಶಾನವಿದೆ. ಮತ್ತೆ ಅದೇ ಉದ್ದೇಶಕ್ಕೆ ಜಮೀನು ಮಂಜೂರು ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಆದೇಶವನ್ನು ಹಿಂಪಡೆದು, ನೆಡುತೋಪಿನ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಾಗಭೂಷಣ ಕುಮಾರ್ ಎಚ್.ಎನ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.