ADVERTISEMENT

ಬೆಂಗಳೂರು: ನಕಲಿ ನೇಮಕಾತಿ ಪತ್ರ ನೀಡಿ ವಂಚನೆ, ಆಕಾಂಕ್ಷಿಗಳಿಗೆ ₹49 ಲಕ್ಷ ಮೋಸ

ಉದ್ಯೋಗ ಆಕಾಂಕ್ಷಿಗಳಿಗೆ ₹49 ಲಕ್ಷ ಮೋಸ: ಸಿಸಿಬಿ ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 0:25 IST
Last Updated 4 ಆಗಸ್ಟ್ 2024, 0:25 IST
<div class="paragraphs"><p>ಕೇಂದ್ರ ಅಪರಾಧ ವಿಭಾಗ</p></div>

ಕೇಂದ್ರ ಅಪರಾಧ ವಿಭಾಗ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನಲ್ಲಿ ಏಳು ಮಂದಿ ಉದ್ಯೋಗ ಆಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರ ನೀಡಿ ₹49 ಲಕ್ಷ ವಂಚಿಸಿದ್ದ ಆರೋಪದ ಅಡಿ ಇಬ್ಬರ ವಿರುದ್ಧ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ADVERTISEMENT

ಸಹಕಾರ ನಗರದ ನಿವಾಸಿ ಸಿದ್ದಲಿಂಗಯ್ಯ ಹಿರೇಮಠ್‌ ಹಾಗೂ ಲವೀನಾ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆರ್‌.ಟಿ ನಗರ ಕೌಸರ್ ಬಡಾವಣೆಯ ಅಬ್ದುಲ್ ರಜಾಕ್‌ ಅವರು ದೂರು ನೀಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.  

ಆರೋಪಿಗಳು ಏಳು ಮಂದಿಗೆ ವಂಚಿಸಿರುವ ಮಾಹಿತಿಯಿದೆ. ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡ ಬಳಿಕ ಎಷ್ಟು ಮಂದಿಗೆ ವಂಚಿಸಿದ್ದಾರೆ ಎಂಬುದು ತಿಳಿಯಲಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಕೊಪ್ಪಳದ ಸಿದ್ದಲಿಂಗಯ್ಯ ಹಿರೇಮಠ್‌ ಕೆಲವು ವರ್ಷಗಳಿಂದ ಸಹಕಾರ ನಗರದಲ್ಲಿ ವಾಸಿಸುತ್ತಿದ್ದಾರೆ. ತನಗೆ ನ್ಯಾಯಮೂರ್ತಿಗಳ ಪರಿಚಯವಿದ್ದು, ನೇರ ನೇಮಕಾತಿ ಮೂಲಕ ನ್ಯಾಯಾಲಯದಲ್ಲಿ ಕೆಳ ಹಂತದ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಂದ ಹಂತಹಂತವಾಗಿ ಹಣ ಪಡೆದು ವಂಚಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರ ಅಬ್ದುಲ್ ರಜಾಕ್‌ ಅವರು ನಾಗರಬಾವಿಯ ಪಾಪರೆಡ್ಡಿಪಾಳ್ಯದಲ್ಲಿ ಗೋಲ್ಡನ್ ಹ್ಯಾಂಡ್ಸ್ ಹೆಸರಿನಲ್ಲಿ ಮಹಿಳಾ ಪಿ.ಜಿ ನಡೆಸುತ್ತಿದ್ದಾರೆ. ಅಲ್ಲದೇ ಸ್ವಯಂ ಸೇವಾ ಸಂಸ್ಥೆ (ಎನ್​​ಜಿಒ) ನಡೆಸುತ್ತಿದ್ದಾರೆ. ಇವರಿಗೆ ಆರೋಪಿ ಸಿದ್ದಲಿಂಗಯ್ಯ ಪರಿಚಯವಾಗಿ, ಚಿಕ್ಕಬಳ್ಳಾಪುರದ ಕೆರೆಯೊಂದರಲ್ಲಿ ಹೂಳು ತೆಗೆಯುವ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ಇದಾದ ಒಂದು ತಿಂಗಳ ಬಳಿಕ ಸಹಕಾರ ನಗರದಲ್ಲಿರುವ ಆತನ ಕಚೇರಿಗೆ ತೆರಳಿದ್ದಾಗ ‘ಸರ್ಕಾರದಲ್ಲಿ ಈಗ ಅಗತ್ಯ ಹಣ ಇಲ್ಲ; ಅನುದಾನ ನೀಡಿದ ಬಳಿಕ ಕೆಲಸ ಕೊಡಿಸುವುದಾಗಿ ಹೇಳಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ತಮ್ಮಲ್ಲಿ ಯಾರಿಗಾದರೂ ಕೆಲಸದ ಅಗತ್ಯವಿದ್ದರೆ ತಿಳಿಸಿ. ನನಗೆ ನ್ಯಾಯಮೂರ್ತಿ ಪರಿಚಯವಿದ್ದು, ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಸಿದ್ಧಲಿಂಗಯ್ಯ ನಂಬಿಸಿದ್ದರು. ಇದನ್ನು ನಂಬಿದ ದೂರುದಾರ, ಸರ್ಕಾರಿ ಹುದ್ದೆಗಳು ಆನ್​​ಲೈನ್ ಮೂಲಕ ಪ್ರಕ್ರಿಯೆ ಆಗಲಿದ್ದು, ಹೇಗೆ ಕೆಲಸ ಕೊಡಿಸುತ್ತೀರಾ ಎಂದು ಆರೋಪಿ ಪ್ರಶ್ನಿಸಿದ್ದರು. ನ್ಯಾಯಾಧೀಶರು ತಮಗೆ ಪರಿಚಯ ಇರುವುದರಿಂದ ನೇರ ನೇಮಕಾತಿ ಮೂಲಕ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು‘ ಎಂದು ಪೊಲೀಸರು ಹೇಳಿದರು. 

ಅಬ್ದುಲ್‌ ರಜಾಕ್‌ ಅವರು ತನ್ನ ಚಿಕ್ಕಪ್ಪನ ಪುತ್ರ ಜಾವೀದ್ ಅವರಿಗೆ ಕೆಲಸ ಕೊಡಿಸುವಂತೆ ಆರೋಪಿಯೊಂದಿಗೆ ಮಾತುಕತೆ ನಡೆಸಿದ್ದರು. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದ ಜಾವೀದ್​ಗೆ ಸರ್ವರ್ ಹುದ್ದೆ ಕೊಡಿಸುವುದಾಗಿ ಹೇಳಿ ಸಿದ್ದಲಿಂಗಯ್ಯ ಅವರು ಹಂತಹಂತವಾಗಿ ₹ 7 ಲಕ್ಷ ಹಣ ಪಡೆದುಕೊಂಡಿದ್ದರು. ಅಲ್ಲದೇ ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನ ನಕಲಿ ಸಹಿಯುಳ್ಳ ನೇಮಕಾತಿ ಪತ್ರ ನೀಡಿದ್ದರು. ಜಾವೀದ್ ಜತೆಗೆ ಇನ್ನೂ ಆರು ಮಂದಿಗೆ ಇದೇ ರೀತಿಯಲ್ಲಿ ವಂಚಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

‘ಉದ್ಯೋಗ ಆಕಾಂಕ್ಷಿಗಳು ಕಲಬುರಗಿ ಕೋರ್ಟ್​​ಗೆ ತೆರಳಿ ನೇಮಕಾತಿ ಪತ್ರ ತೋರಿಸಿದಾಗ ಅಲ್ಲಿನ ಸಿಬ್ಬಂದಿ ಇದು ನಕಲಿ ಪತ್ರ ಎಂದು ತಿಳಿಸಿದರು. ಆಗ ವಂಚನೆ ಬಯಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.