ಬೆಂಗಳೂರು: ನಗರದ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಹಣ ಕಳವು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಟ್ರಸ್ಟಿ ಹಾಗೂ ಅರ್ಚಕರ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಸ್ಟಿಗಳು ಹಾಗೂ ಅರ್ಚಕರು ಹುಂಡಿ ಹಣ ಕದ್ದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ದೇವಾಲಯದ ಭಕ್ತ ಮೋಹನ್ ಎಂಬವರು ನೀಡಿದ ದೂರು ಆಧರಿಸಿ, ದೇವಸ್ಥಾನದ ಟ್ರಸ್ಟಿಗಳಾದ ಹನುಮಂತಪ್ಪ, ನಾಗರಾಜ್, ಶ್ರೀನಿವಾಸ್ ರಾಮಾನುಜ, ಗೋಪಿನಾಥ್, ರಾಮಾನುಜ ಭಟ್ಟಾಚಾರ್ಯ ಮತ್ತು ಸುರೇಶ್ ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೇವಾಲಯದ ಹುಂಡಿ ಹಣ ಎಣಿಸುವಾಗ ನೋಟಿನ ಕಂತೆಗಳನ್ನು ಅರ್ಚಕರು ಹಾಗೂ ಟ್ರಸ್ಟಿಗಳೇ ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಕೆಲವು ವರ್ಷಗಳ ಹಿಂದೆ ನಡೆದಿರುವ ಕೃತ್ಯ ಎಂದು ಹೇಳಲಾಗಿದೆ.
‘1984ರಲ್ಲಿ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ರಚನೆಯಾಗಿತ್ತು. ಆರೋಪಿಗಳೆಲ್ಲರೂ ಟ್ರಸ್ಟಿಗಳಾಗಿದ್ದಾರೆ. ಭಕ್ತರಿಂದ ಬರುವ ದೇಣಿಗೆ ಹಣ ಹಾಗೂ ಬೆಳ್ಳಿ ಸಾಮಗ್ರಿಯನ್ನು ದೇವಾಲಯದ ಅಭಿವೃದ್ಧಿಗೆ ಬಳಸದೇ ಸ್ವಂತ ಲಾಭಕ್ಕಾಗಿ ಉಪಯೋಗಿಸಿಕೊಂಡು ದೇವಸ್ಥಾನದ ಪ್ರಗತಿಗೆ ನಷ್ಟ ಉಂಟು ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
‘ಹೊಸದಾಗಿ ಪರಿಚಯಿಸಲಾಗಿರುವ ಕ್ಯೂಆರ್ ಕೋಡ್ ಮೂಲಕ ಭಕ್ತರು ನೀಡುವ ಹಣವನ್ನು ಟ್ರಸ್ಟ್ನ ಖಾತೆಗೆ ಲಿಂಕ್ ಮಾಡದೇ ಅರ್ಚಕರ ಖಾತೆಗಳಿಗೆ ಲಿಂಕ್ ಮಾಡಿಕೊಂಡು ಹಣವನ್ನು ಸ್ವಂತ ಬಳಕೆಗೆ ವಿನಿಯೋಗಿಸಿದ್ದಾರೆ. ಇದನ್ನು ಪ್ರಶ್ನಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಮೋಹನ್ ಉಲ್ಲೇಖಿಸಿದ್ದಾರೆ.
‘ಹುಂಡಿ ಹಣ ಕಳವು ಮಾಡಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರ ದೇವಸ್ಥಾನದ ಟ್ರಸ್ಟಿಗಳು ಹಾಗೂ ಪ್ರಧಾನ ಅರ್ಚಕರನ್ನು ಕರೆಸಿ ವಿಚಾರಣೆ ಮಾಡಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.