ADVERTISEMENT

ಬೆಂಗಳೂರು: ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 14:33 IST
Last Updated 19 ಜುಲೈ 2024, 14:33 IST

ಬೆಂಗಳೂರು: ರಕ್ಷಣಾ ಸಚಿವಾಲಯದ ಪುನರ್ವಸತಿ ಮಹಾನಿರ್ದೇಶನಾಲಯ (ಡಿಜಿಆರ್), ಮಾಜಿ ಸೈನಿಕರ ಕಲ್ಯಾಣ ಇಲಾಖೆ ಮತ್ತು ರಕ್ಷಣಾ ಸಚಿವಾಲಯ ವತಿಯಿಂದ ಮಾಜಿ ಯೋಧರಿಗಾಗಿ ಶುಕ್ರವಾರ ಜಾಲಹಳ್ಳಿಯ ವಾಯುಪಡೆ ನಿಲ್ದಾಣ (ಎಂಟಿ ಕಾಂಪ್ಲೆಕ್ಸ್)ದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. 

ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ 1,662 ಮಾಜಿ ಸೈನಿಕರು ತಮ್ಮ ಇಎಸ್ಎಂ ಗುರುತಿನ ಚೀಟಿ ಮತ್ತು ಸ್ವವಿವರದೊಂದಿಗೆ ಹೆಸರು ನೋಂದಾಯಿಸಿಕೊಂಡರು. 48 ಕಂಪನಿಗಳು ಭಾಗವಹಿಸಿದ್ದು, 1,125 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ. 

ಕಂಪನಿಯ ಪ್ರತಿನಿಧಿಗಳು ದಾಖಲೆಗಳ ಪರಿಶೀಲನೆ ನಡೆಸಿದರು. ಬಳಿಕ ಅಂತಿಮ ಪಟ್ಟಿಯಲ್ಲಿರುವವರ ಸಂದರ್ಶನ ನಡೆಸಿ, ಹಿರಿಯ ಮೇಲ್ವಿಚಾರಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವರು. ಬಿಇಎಲ್ ಕಂಪನಿ ಪ್ರತಿನಿಧಿಗಳು ಸ್ಥಳದಲ್ಲೇ ನೇಮಕಾತಿ ಪತ್ರ ನೀಡಿದರು.

ADVERTISEMENT

ಮೇಳವನ್ನು ಕಾರ್ಯದರ್ಶಿ (ಇಎಸ್‌ಡಬ್ಲ್ಯು) ಡಾ.ನಿತಿನ್ ಚಂದ್ರ ಉದ್ಘಾಟಿಸಿದರು. ಸಿಐಐ ಕರ್ನಾಟಕ ರಾಜ್ಯ ಕೌನ್ಸಿಲ್ ಉಪಾಧ್ಯಕ್ಷ ರವೀಂದ್ರ ಶ್ರೀಕಂಠನ್ ಗೌರವ, ವಾಯುಪಡೆಯ ಆರ್‌.ವಿ. ರಾಮ್ ಕಿಶೋರ್, ರಕ್ಷಣಾ ಸಚಿವಾಲಯದ ಪುನರ್ವಸತಿ ಮಹಾನಿರ್ದೇಶನಾಲಯದ ಮೇಜರ್‌ ಜನರಲ್‌ ಎಸ್‌ಬಿಕೆ ಸಿಂಗ್‌, ಬ್ರಿಗೇಡಿಯರ್‌ ರೋಹಿತ್ ಮೆಹ್ತ್‌, ಜಾಲಹಳ್ಳಿಯ ಎಒಸಿ ವಾಯುಪಡೆ ನಿಲ್ದಾಣದ ಏರ್ ಕಮಾಂಡರ್ ಸಂತೋಷ್ ಕೆ.ಪಿ.ಹೆಗ್ಡೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.