ADVERTISEMENT

ಬೆಂಗಳೂರು: ನಿರ್ವಹಣೆ ಕೊರತೆ; ತುಕ್ಕು ಹಿಡಿಯುತ್ತಿರುವ ಸ್ಕೈವಾಕ್!

* ಬಳ್ಳಾರಿ ರಸ್ತೆಯಲ್ಲಿ ಹೆಚ್ಚಿರುವ ಪಾದಚಾರಿಗಳ ಓಡಾಟ * ಎಲ್ಲೆಂದರಲ್ಲಿ ಕಸದ ರಾಶಿ

ಸಂತೋಷ ಜಿಗಳಿಕೊಪ್ಪ
Published 16 ನವೆಂಬರ್ 2023, 20:21 IST
Last Updated 16 ನವೆಂಬರ್ 2023, 20:21 IST
<div class="paragraphs"><p>ಹೆಬ್ಬಾಳದ ಎಸ್ಟೀಮ್ ಮಾಲ್‌ ಬಳಿಯ ಸ್ಕೈವಾಕ್‌ನಲ್ಲಿ ಹೆಜ್ಜೆ ಹಾಕಿದ ಪಾದಚಾರಿಗಳು – ಪ್ರಜಾವಾಣಿ ಚಿತ್ರ / ಕೃಷ್ಣಕುಮಾರ್ ಪಿ.ಎಸ್</p></div>

ಹೆಬ್ಬಾಳದ ಎಸ್ಟೀಮ್ ಮಾಲ್‌ ಬಳಿಯ ಸ್ಕೈವಾಕ್‌ನಲ್ಲಿ ಹೆಜ್ಜೆ ಹಾಕಿದ ಪಾದಚಾರಿಗಳು – ಪ್ರಜಾವಾಣಿ ಚಿತ್ರ / ಕೃಷ್ಣಕುಮಾರ್ ಪಿ.ಎಸ್

   

ಬೆಂಗಳೂರು: ತುಕ್ಕು ಹಿಡಿಯುತ್ತಿರುವ ಕಬ್ಬಿಣ. ಲಿಫ್ಟ್‌ ಇಲ್ಲದಿದ್ದರಿಂದ ಹತ್ತಿ ಇಳಿಯಲು ಕಷ್ಟಪಡುತ್ತಿರುವ ವೃದ್ಧರು. ಭದ್ರತಾ ಸಿಬ್ಬಂದಿ ಇಲ್ಲದೇ ಆತಂಕದಲ್ಲಿ ಸಂಚರಿಸುವ ಪಾದಚಾರಿಗಳು. ಅಲ್ಲಲ್ಲಿ ಬಿರುಕು ಬಿಟ್ಟು ಕಳಚಿ ಬೀಳುವಂತಹ ಸ್ಥಿತಿಯಲ್ಲಿರುವ ತಗಡಿನ ಶೀಟ್‌ಗಳು...

ಸದಾ ವಾಹನಗಳ ದಟ್ಟಣೆ ಕಂಡುಬರುವ ಬಳ್ಳಾರಿ ರಸ್ತೆಯ (ರಾಷ್ಟ್ರೀಯ ಹೆದ್ದಾರಿ–44) ಎಸ್ಟೀಮ್ ಮಾಲ್‌–ಮಿಲಿಟರಿ ಡೇರಿ ಫಾರ್ಮ್ ಬಸ್ ತಂಗುದಾಣ ನಡುವೆ ಇರುವ ಸ್ಕೈವಾಕ್‌ ಸ್ಥಿತಿ ಇದು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಮಿಸಿರುವ ಸ್ಕೈವಾಕ್, ನಿರ್ವಹಣೆ ಕೊರತೆಯಿಂದ ದಿನದಿಂದ ದಿನಕ್ಕೆ ಹಾಳಾಗುತ್ತಿದೆ.

ADVERTISEMENT

ಮಣಿಪಾಲ್ ಆಸ್ಪತ್ರೆ, ಮಿಲಿಟರಿ ಡೇರಿ ಫಾರ್ಮ್, ಎಸ್ಟೀಮ್ ಮಾಲ್, ಪ್ರೆಸಿಡೆನ್ಸಿ ಕಾಲೇಜು, ಎಂಬೆಸ್ಸಿ ಅಪಾರ್ಟ್‌ಮೆಂಟ್ ಸಮುಚ್ಚಯ ಸೇರಿದಂತೆ ಹಲವು ಸ್ಥಳಗಳು ಸ್ಕೈವಾಕ್‌ನ ಅಕ್ಕ–ಪಕ್ಕದಲ್ಲಿವೆ. ಪ್ರತಿದಿನ 30 ಸಾವಿರಕ್ಕೂ ಹೆಚ್ಚು ಪಾದಚಾರಿಗಳು ಸ್ಕೈವಾಕ್ ಬಳಸುತ್ತಿದ್ದಾರೆ.

ಇದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ನಿತ್ಯವೂ ಸಾವಿರಾರು ವಾಹನಗಳ ಸಂಚಾರವಿರುತ್ತದೆ. ಹೆಬ್ಬಾಳ ಕೆಂಪಾಪುರದ ಚಿರಂಜೀವಿ ಬಡಾವಣೆಯಲ್ಲಿರುವ ಈ ರಸ್ತೆಯಲ್ಲಿ ಪಾದಚಾರಿಗಳ ಅನುಕೂಲಕ್ಕೆಂದು ಸ್ಕೈವಾಕ್ ನಿರ್ಮಿಸಲಾಗಿದೆ. ಸ್ಕೈವಾಕ್ ಬಳಸುವವರ ಸಂಖ್ಯೆಯೂ ಹೆಚ್ಚಿದ್ದು, ಅವ್ಯವಸ್ಥೆಯಿಂದಾಗಿ ಅವರೆಲ್ಲರೂ ಆತಂಕದಲ್ಲಿ ಓಡಾಡುತ್ತಿದ್ದಾರೆ.

ಈಡೇರದ ಲಿಫ್ಟ್‌ ಭರವಸೆ: ‘ಅಪಘಾತಗಳ ವೃತ್ತವೆಂದು ಗುರುತಿಸಿಕೊಂಡಿದ್ದ ಎಸ್ಟೀಮ್ ಮಾಲ್ ವೃತ್ತದಲ್ಲಿ 2017ರಲ್ಲಿ ಲಿಫ್ಟ್‌ ಅಳವಡಿಸದೇ ಸ್ಕೈವಾಕ್ ನಿರ್ಮಿಸಲಾಗಿದೆ. ಲಿಫ್ಟ್‌ ಅಳವಡಿಸುವಂತೆ ಸ್ಥಳೀಯರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ‘ಲಿಫ್ಟ್‌ ಅಳವಡಿಸುವುದಾಗಿ ಎನ್‌ಎಚ್‌ಎಐ ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದೆ. ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ಹೀಗಾಗಿ ಸ್ಕೈವಾಕ್ ಹತ್ತಿ ಇಳಿಯಲು ವೃದ್ಧರು, ಮಕ್ಕಳು ಕಷ್ಟಪಡುತ್ತಿದ್ದಾರೆ’ ಎಂದು ಕೆಂಪಾಪುರ ನಿವಾಸಿ ವಿಘ್ನೇಶ್ ಹೇಳಿದರು.

‘ದಿನದ 24 ಗಂಟೆಯೂ ವಾಹನಗಳ ದಟ್ಟಣೆ ಇರುತ್ತದೆ. ದಟ್ಟಣೆ ನಡುವೆ ರಸ್ತೆ ದಾಟಲು ಸಾಧ್ಯವೇ ಇಲ್ಲ. ಎಲ್ಲರೂ ಸ್ಕೈವಾಕ್ ಬಳಸುತ್ತಿದ್ದಾರೆ. ಬಳಕೆದಾರರ ಅನುಕೂಲಕ್ಕೆ ಲಿಫ್ಟ್‌ ನಿರ್ಮಿಸಬೇಕು’ ಎಂದು ಅವರು ಆಗ್ರಹಿಸಿದರು.

ತುಕ್ಕು ಹಿಡಿಯುತ್ತಿರುವ ಕಬ್ಬಿಣ: ‘ಪೂರ್ಣ ಕಬ್ಬಿಣದಿಂದ ಸ್ಕೈವಾಕ್‌ ನಿರ್ಮಿಸಿದ್ದು, ನಿರ್ವಹಣೆ ಕೊರತೆಯಿಂದಾಗಿ ಹಲವು ಸ್ಥಳಗಳಲ್ಲಿ ತುಕ್ಕು ಹಿಡಿಯುತ್ತಿದೆ. ಸ್ಕೈವಾಕ್‌ನ ಎರಡೂ ಬದಿಗಳಲ್ಲಿ ತಗಡಿನ ಶೀಟ್‌ಗಳನ್ನು ಹಾಕಲಾಗಿದೆ. ಇವು ಸಹ ತುಕ್ಕು ಹಿಡಿದು ಅಲ್ಲಲ್ಲಿ ರಂಧ್ರಗಳಾಗಿದ್ದು, ಕಳಚಿ ಬೀಳುವ ಆತಂಕವೂ ಇದೆ’ ಎಂದು ಕಂಪನಿಯೊಂದರ ಉದ್ಯೋಗಿ ರಾಜೇಶ್ ಹೇಳಿದರು.

‘ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಸ್ಕೈವಾಕ್ ಬಳಸುತ್ತೇನೆ. ಕಬ್ಬಿಣದ ಭಾಗಗಳು ಪಾದಚಾರಿಗಳ ಕಾಲಿಗೆ ತಾಗಿ ರಕ್ತ ಬಂದಿರುವ ಘಟನೆಗಳೂ ನಡೆದಿವೆ. ಸ್ಕೈವಾಕ್‌ ಸಮಸ್ಯೆಗಳ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬ ಫಲಕವೂ ಇಲ್ಲಿಲ್ಲ. ಹೀಗಾಗಿ, ಪಾದಚಾರಿಗಳು ಏನು ಮಾಡಬೇಕೆಂದು ತಿಳಿಯದೇ ಸುಮ್ಮನಿದ್ದಾರೆ’ ಎಂದು ಅವರು ತಿಳಿಸಿದರು.

ಭದ್ರತೆ, ಸ್ವಚ್ಛತೆ ಇಲ್ಲದ ಸ್ಥಳ: ‘ನಗರದ ಹಲವು ಕಡೆ ಸ್ಕೈವಾಕ್‌ಗಳಲ್ಲಿ ಭದ್ರತೆಗೆಂದು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ಇಲ್ಲಿ ಅಂಥ ವ್ಯವಸ್ಥೆ ಇಲ್ಲ. ಸ್ಕೈವಾಕ್‌ ಬಳಿ ಕೆಲವರು ಕಸ ಸುರಿದು ಹೋಗುತ್ತಿದ್ದು, ಸ್ವಚ್ಛತೆಯೂ ಇಲ್ಲದಂತಾಗಿದೆ’ ಎಂದು ಸ್ಥಳೀಯ ಕಾಲೇಜು ವಿದ್ಯಾರ್ಥಿ ಆರ್. ಸೌಮ್ಯಾ ಹೇಳಿದರು.

‘ಸ್ಕೈವಾಕ್ ಹತ್ತುವ ಹಾಗೂ ಇಳಿಯುವ ಮೆಟ್ಟಿಲುಗಳ ಕೆಳ ಭಾಗದಲ್ಲಿ ಖಾಲಿ ಜಾಗವಿದೆ. ಕೆಲವರು ಅಲ್ಲಿಯೇ ಕಸ ಎಸೆದು ಹೋಗುತ್ತಾರೆ. ಇನ್ನು ಹಲವರು, ಮೆಟ್ಟಿಲುಗಳ ಮೇಲೆ ಕುಳಿತು ಸಿಗರೇಟ್‌ ಸೇದುತ್ತಾರೆ. ಗುಟ್ಕಾ ತಿಂದು, ಸ್ಕೈವಾಕ್‌ ಮೇಲೆಯೇ ಉಗುಳುತ್ತಾರೆ’ ಎಂದು ದೂರಿದರು.

ಬಸ್‌ಗಳ ನಿಲುಗಡೆ: ‘ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ವಾಹನಗಳು, ಎಸ್ಟೀಮ್ ಮಾಲ್ ಬಳಿ ಪ್ರಯಾಣಿಕರನ್ನು ಇಳಿಸುತ್ತವೆ. ಜೊತೆಗೆ, ಪ್ರಯಾಣಿಕರು ಹತ್ತುವ ಸ್ಥಳವೂ ಇದಾಗಿದೆ. ಹೀಗಾಗಿ, ನಿತ್ಯವೂ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುತ್ತದೆ’ ಎಂದು ಸ್ಥಳೀಯರು ಹೇಳಿದರು.

‘ಒಂದು ಬಸ್‌ನಿಂದ ಇಳಿದು ಮತ್ತೊಂದು ಬಸ್‌ ಹತ್ತಲು ಪ್ರಯಾಣಿಕರು, ಸ್ಕೈವಾಕ್‌ ಮೂಲಕ ರಸ್ತೆ ದಾಟುತ್ತಾರೆ. ಅಶುಚಿತ್ವ, ಅಭದ್ರತೆಯಂತಹ ಸಮಸ್ಯೆಗಳನ್ನು ಪ್ರಯಾಣಿಕರು ಎದುರಿಸುತ್ತಾರೆ’ ಎಂದರು.

‘ರಾತ್ರಿ ವೇಳೆ ಸ್ಕೈವಾಕ್‌ನಲ್ಲಿ ಓಡಾಡುವುದು ಅಪಾಯಕಾರಿ ಎನ್ನುವ ಸ್ಥಿತಿ ಇದೆ. ಕೆಲವರು ರಾತ್ರಿ ಸ್ಕೈವಾಕ್‌ನಲ್ಲಿ ಕುಳಿತುಕೊಂಡು ಪಾದಚಾರಿಗಳನ್ನು ಬೆದರಿಸುತ್ತಿದ್ದಾರೆ. ಮಹಿಳೆಯರು ಓಡಾಡುವಾಗ ಕಿಡಿಗೇಡಿಗಳು ಚುಡಾಯಿಸುತ್ತಿರುವ ಘಟನೆಗಳೂ ನಡೆದಿವೆ’ ಎಂದು ಸ್ಥಳೀಯರು ದೂರಿದರು.

‘ತುರ್ತಾಗಿ ಲಿಫ್ಟ್‌ ಅಳವಡಿಸಬೇಕು. ಭದ್ರತೆಗೆ ಸಿಬ್ಬಂದಿ ನಿಯೋಜಿಸಬೇಕು. ತುಕ್ಕು ಹಿಡಿದಿರುವ ಕಬ್ಬಿಣವನ್ನು ಬದಲಾಯಿಸಬೇಕು’ ಎಂದು ಅವರು ಆಗ್ರಹಿಸಿದರು.

ಹೆಬ್ಬಾಳದ ಎಸ್ಟೀಮ್‌ ಮಾಲ್ ಬಳಿಯ ಸ್ಕೈವಾಕ್‌ನ ಕಬ್ಬಿಣ ತುಕ್ಕು ಹಿಡಿದಿರುವುದು – ಪ್ರಜಾವಾಣಿ ಚಿತ್ರ / ಕೃಷ್ಣಕುಮಾರ್ ಪಿ.ಎಸ್ 
ಕಬ್ಬಿಣದ ಕಂಬಿಯ ಆಸರೆಯೊಂದಿಗೆ ಕಷ್ಟಪಟ್ಟು ಮೆಟ್ಟಿಲು ಏರುತ್ತಿರುವ ದೃಶ್ಯ. 

ಸ್ಕೈವಾಕ್‌ ನಿರ್ಮಿಸಿದರೆ ಸಾಲದು. ಇದರ ನಿರ್ವಹಣೆಗೂ ಎನ್‌ಎಚ್‌ಎಐ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು

-ಪದ್ಮನಾಭನ್ ಪಾದಚಾರಿ

ಕಾಲೇಜು ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ಹೆಚ್ಚಾಗಿ ಸ್ಕೈವಾಕ್ ಬಳಸುತ್ತಾರೆ. ಇವರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಬೇಕು

-ಮುರುಳಿ ಸ್ಥಳೀಯ ನಿವಾಸಿ

‘ವಿದ್ಯಾರ್ಥಿನಿ ಸಾವು ಖಂಡಿಸಿ ನಡೆದಿದ್ದ ಹೋರಾಟ’

‘2017ಕ್ಕೂ ಮುನ್ನ ಎಸ್ಟ್ರೀಮ್‌ ಮಾಲ್‌ ಬಳಿ ಸಿಗ್ನಲ್‌ ಅಳವಡಿಸಲಾಗಿತ್ತು. ಸಿಗ್ನಲ್‌ಗಳಿಗೆ ಅನುಸಾರವಾಗಿ ಪಾದಚಾರಿಗಳು ರಸ್ತೆ ದಾಟುತ್ತಿದ್ದರು. 2015ರ ಫೆಬ್ರುವರಿ 26ರಂದು ಸಂಚಾರ ಸಿಗ್ನಲ್‌ ಜಂಪ್‌ ಮಾಡಿದ್ದ ತೈಲ ಸಾಗಣೆ ಟ್ಯಾಂಕರ್ ರಸ್ತೆ ದಾಟುತ್ತಿದ್ದ 19 ವರ್ಷದ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿತ್ತು’ ಎಂದು ಸ್ಥಳೀಯರು ಹೇಳಿದರು. ‘ವಿದ್ಯಾರ್ಥಿನಿ ಸಾವು ಖಂಡಿಸಿದ್ದ ಸಹಪಾಠಿಗಳು ಹಾಗೂ ಸ್ಥಳೀಯರು ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದರು. ಇದೇ ಪ್ರತಿಭಟನೆ ಹೋರಾಟದ ಸ್ವರೂಪ ಪಡೆದುಕೊಂಡಿತ್ತು. ನಗರದ ಹಲವು ಕಡೆ ಪ್ರತಿಭಟನೆಗಳು ನಡೆದಿದ್ದವು. ಇದರಿಂದ ಎಚ್ಚೆತ್ತ ಎನ್‌ಎಚ್‌ಎಐ ಸ್ಕೈವಾಕ್‌ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. 2017ರಲ್ಲಿ ಸ್ಕೈವಾಕ್ ನಿರ್ಮಾಣ ಪೂರ್ಣಗೊಂಡು ಬಳಕೆಗೆ ಲಭ್ಯವಾಯಿತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.