ಬೆಂಗಳೂರು: ನಗರದಾದ್ಯಂತ ಇಂದು ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ ಎಂದು ವರದಿಯಾಗಿದೆ.
ಹಲವಡೆ ರಸ್ತೆಗಳು ತಾತ್ಕಾಲಿಕ ಚಿಕ್ಕ ಕೆರೆಗಳಾಗಿ ಮಾರ್ಪಟ್ಟಿರುವುದರಿಂದ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಮತ್ತು ನೌಕರರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮಡಿವಾಳ, ರೂಪನ ಅಗ್ರಹಾರ ಹಾಗೂ ಜಯದೇವ ಅಂಡರ್‌ಪಾಸ್‌ನಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಮಳೆ ನೀರು ಸಂಗ್ರಹಗೊಂಡು ಹೊರ ವರ್ತುಲ ರಸ್ತೆಯಾದ ನಾಗಾವರ ಜಂಕ್ಷನ್‌ನಿಂದ ಹೆಬ್ಬಾಳದ ತನಕ ಹಾಗೂ ಎಸ್ಟೀಂ ಮಾಲ್‌ನಿಂದ ಮೇಕ್ರಿ ವೃತ್ತದ ವರೆಗೆ (ಮೇಲ್ಸೇತುವೆ) ವಾಹನ ಸಂಚಾರಕ್ಕೆ ಅಡಚಣೆ ಆಗಿದೆ. ವಾಹನ ಸಂಚಾರ ನಿಧಾನಗತಿಯಲ್ಲಿ ಇದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರದ ಎತ್ತರಿಸಿದ ರಸ್ತೆಯಲ್ಲೂ ವಾಹನ ಸಂಚಾರಕ್ಕೆ ಅಡಚಣೆ ಆಗಿದೆ. ಪುಟ್ಟೇನಹಳ್ಳಿ ಹಾಗೂ ವರ್ತೂರು ಜಂಕ್ಷನ್ ನಲ್ಲಿ ನೀರು ಸಂಗ್ರಹವಾಗಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
ಸಿಲ್ಕ್ ಬೋರ್ಡ್ ಮೇಲ್ಸೇತುವೆಯ ಎಲ್ಲಾ ಲೇನ್‌ಗಳಲ್ಲಿ ಕಣ್ಣು ಹಾಯಿಸಿದಷ್ಟು ವಾಹನಗಳು ನಿಂತಿದ್ದವು. ಡೈರಿ ಸರ್ಕಲ್‌ನಿಂದ ಕೋನಪ್ಪನ ಅಗ್ರಹಾರದವರೆಗೆ ಸಂಚರಿಸಲು ಅರ್ಧ ಗಂಟೆ ಸಮಯ ಬೇಕಾಯಿತು ಎಂದು ಸವಾರರೊಬ್ಬರು ತಿಳಿಸಿದ್ದಾರೆ.
ವರ್ತೂರು-ಪಣತ್ತೂರು ಮುಖ್ಯರಸ್ತೆಯಲ್ಲಿ ನೀರು ತುಂಬಿತ್ತು. ಸರ್ಜಾಪುರ ಮುಖ್ಯರಸ್ತೆಯ ಅಗರ ದೇವಸ್ಥಾನದಿಂದ ರೈನ್‌ಬೋ ಡ್ರೈವ್ ಲೇಔಟ್‌ವರೆಗೂ ಇದೇ ಪರಿಸ್ಥಿತಿ ಕಂಡುಬಂದಿದೆ.
ಮಾರತ್ತಹಳ್ಳಿ, ವರ್ತೂರು ಕೋಡಿ, ಕಲ್ಯಾಣನಗರ ಮತ್ತು ಕಸ್ತೂರಿನಗರ ಅಂಡರ್‌ಪಾಸ್, ಪುಟ್ಟೇನಹಳ್ಳಿ, ಎಂಎಸ್ ಪಾಳ್ಯ, ಬೆಳ್ಳಂದೂರು ರಸ್ತೆಗಳು ಕೂಡ ಜಲಾವೃತವಾಗಿದ್ದು, ಸಂಚಾರ ದಟ್ಟಣೆ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.