ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತು ಅಡುಗೆ ಅನಿಲ ಬೆಲೆ ಕಡಿಮೆಯಾದರೂ ದೇಶದಲ್ಲಿ ಅವುಗಳ ಬೆಲೆ ಇಳಿಕೆಯಾಗುತ್ತಿಲ್ಲ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ದೂರಿದೆ.
ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಪಿ.ಸಿ. ರಾವ್, ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 134 ಡಾಲರ್‌ನಿಂದ 72 ಡಾಲರ್‌ಗೆ ಸಿಗುತ್ತಿದೆ. ಹೀಗಿದ್ದರೂ ದೇಶದಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಕಡಿಮೆಯಾಗಿಲ್ಲ. ಸದ್ಯ ಪ್ರತಿ ಲೀಟರ್‌ಗೆ ₹102 ಪಡೆಯಲಾಗುತ್ತಿದ್ದು, ಇದರಲ್ಲಿ ಸುಮಾರು ₹58 ತೆರಿಗೆ ಪಡೆಯಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಹಾಗೂ ಉದ್ಯಮಿಗಳಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಅಡುಗೆ ಅನಿಲದ ದರ ಕಡಿಮೆಯಾಗಿದೆ. ಆದರೆ ದೇಶದಲ್ಲಿ ಅಡುಗೆ ಅನಿಲ ದರದಲ್ಲಿ ಕಡಿಮೆಗೊಳಿಸುತ್ತಿಲ್ಲ. ವಾಣಿಜ್ಯ ಅಡುಗೆ ಅನಿಲ ದರದ ಮೇಲೆ 18ರಷ್ಟು ಜಿಎಸ್‌ಟಿ ಹಾಕಲಾಗುತ್ತಿದೆ. ಇದನ್ನು ಶೇ 5ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾಲು, ನೀರು, ಜುಲೈ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಎಷ್ಟು ಹೆಚ್ಚಿಗೆ ಮಾಡುತ್ತಾರೆ ಎನ್ನುವುದನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಹೋಟೆಲ್ ತಿಂಡಿ–ತಿನಿಸುಗಳ ಬೆಲೆ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರ ಕೂಡಲೇ ಅಕ್ಕಿ, ಬೆಲೆಕಾಳು, ಜೀರಿಗೆ, ಮೆಣಸು ತರಕಾರಿ ಬೆಲೆ ಹತೋಟಿಗೆ ತರಬೇಕು ತರಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.