ADVERTISEMENT

ಬೆಂಗಳೂರು: ಬಾಲಕಿ ಮೇಲೆ ನಾಲ್ವರಿಂದ ಆರು ದಿನ ಅತ್ಯಾಚಾರ; 6 ಮಂದಿಯ ಬಂಧನ

ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರಿಂದ 6 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 14:20 IST
Last Updated 11 ಮಾರ್ಚ್ 2022, 14:20 IST
   

ಬೆಂಗಳೂರು: ಹೊಲಿಗೆ ತರಬೇತಿಗೆ ಹೋಗುತ್ತಿದ್ದ 15 ವರ್ಷದ ಬಾಲಕಿ ಮೇಲೆ ನಾಲ್ವರು ಆರು ದಿನ ಅತ್ಯಾಚಾರ ನಡೆಸಿದ್ದು, ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್‌ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

‘ಬಂಡೇಪಾಳ್ಯದ ರಾಜೇಶ್ವರಿ ಹಾಗೂ ಕಲಾವತಿ, ಹೊಸೂರಿನ ಕೇಶವಮೂರ್ತಿ, ಬೇಗೂರಿನ ರಫೀಕ್‌, ಯಲಹಂಕದ ಶರತ್‌ ಹಾಗೂ ಕೋರಮಂಗಲದ ಸತ್ಯರಾಜು ಬಂಧಿತರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಲಾವತಿ ಹಾಗೂ ರಾಜೇಶ್ವರಿ ಟೈಲರಿಂಗ್ ಕಲಿಸುವ ನೆಪದಲ್ಲಿ ಹಲವು ವರ್ಷಗಳಿಂದ ಬಂಡೇಪಾಳ್ಯದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ನೆರೆಹೊರೆಯವರಿಗೆ ಇದು ತಿಳಿದಿರಲಿಲ್ಲ. ಅಕ್ಕಪಕ್ಕದವರ ಜೊತೆ ಮಹಿಳೆಯರು ಉತ್ತಮ ಬಾಂಧವ್ಯ ಹೊಂದಿದ್ದರಿಂದ ಪೋಷಕರು ತಮ್ಮ ಮಗಳನ್ನು ಅವರ ಬಳಿ ಹೊಲಿಗೆ ತರಬೇತಿಗೆ ಸೇರಿಸಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಫೆಬ್ರುವರಿ 28ರ ಮಧ್ಯಾಹ್ನ ಮನೆಯಲ್ಲಿ ಮಲಗಿದ್ದೆ. ಪೋಷಕರು ಕೆಲಸದ ಮೇಲೆ ಹೊರಗೆ ಹೋಗಿದ್ದರು. ಈ ವೇಳೆ ಮನೆಗೆ ಬಂದಿದ್ದ ರಾಜೇಶ್ವರಿ ನನ್ನ ತಾಯಿ ಕರೆಯುತ್ತಿದ್ದಾರೆ ಎಂದು ಹೇಳಿ ಆಕೆಯ ಮನೆಗೆ ಕರೆದುಕೊಂಡು ಹೋದಳು. ಅಲ್ಲಿ ಹಣ್ಣಿನ ಜ್ಯೂಸ್‌ ನೀಡಿದಳು. ಅದನ್ನು ಕುಡಿದ ಬಳಿಕ ಪ್ರಜ್ಞೆ ತಪ್ಪಿತು. ಕೆಲ ಸಮಯದ ಬಳಿಕ ಕಣ್ಣು ಬಿಟ್ಟು ನೋಡಿದಾಗ ಹಾಸಿಗೆ ಮೇಲೆ ಅಂಗಾತ ಮಲಗಿದ್ದೆ. ಕಾಲು ಹಾಗೂ ದೇಹದ ಇತರ ಭಾಗಗಳಿಗೆ ರಕ್ತದ ಕಲೆ ಮೆತ್ತಿಕೊಂಡಿತ್ತು. ಆಗ ನನ್ನ ಬಳಿ ಬಂದಿದ್ದ ರಾಜೇಶ್ವರಿ ಅತ್ಯಾಚಾರವಾಗಿರುವ ವಿಷಯವನ್ನು ಯಾರಿಗೂ ಹೇಳದಂತೆ ಹೆದರಿಸಿದ್ದಾಗಿ ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ’ ಎಂದು ವಿವರಿಸಿದ್ದಾರೆ.

‘ಮರುದಿನ ರಾಜೇಶ್ವರಿ ನನ್ನನ್ನು ಕಲಾವತಿ ಮನೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಮತ್ತೊಬ್ಬ ವ್ಯಕ್ತಿ ಬಲಾತ್ಕಾರ ನಡೆಸಿದ್ದ. ನನ್ನನ್ನು ಬೆದರಿಸಿದ ಅವರಿಬ್ಬರೂ ನಿತ್ಯವೂ ತಮ್ಮ ಮನೆಗೆ ಬರುವಂತೆ ಸೂಚಿಸಿದ್ದರು. ಹೀಗೆ ಸತತ ಆರು ದಿನ ನನ್ನ ಮೇಲೆ ನಾಲ್ವರು ಬಲಾತ್ಕಾರ ನಡೆಸಿದ್ದರು. ಅದರಿಂದ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿಹೋಗಿದ್ದೆ ಎಂದೂ ಆಕೆ ತಿಳಿಸಿದ್ದಾಳೆ’ ಎಂದರು.

‘ಮಾರ್ಚ್‌ 6ರಂದು ಬಾಲಕಿಗೆ ಕರೆ ಮಾಡಿದ್ದ ರಾಜೇಶ್ವರಿ ಮನೆಗೆ ಬರುವಂತೆ ಹಿಂಸಿಸಿದ್ದಳು. ಮಗಳು ಗಾಬರಿಗೊಂಡಿದ್ದನ್ನು ಗಮನಿಸಿದ್ದ ತಾಯಿ ಕರೆದು ವಿಚಾರಿಸಿದ್ದರು. ಆಗ ಆಕೆ ನಡೆದಿದ್ದೆಲ್ಲವನ್ನೂ ತಿಳಿಸಿದ್ದಳು. ಬಟ್ಟೆಯ ಮೇಲೆ ರಕ್ತದ ಕಲೆಗಳಾಗಿರುವುದನ್ನು ಗಮನಿಸಿದ್ದ ಅವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದರು’ ಎಂದೂ ಮಾಹಿತಿ ನೀಡಿದ್ದಾರೆ.

ಆರೋಪಿಗಳಿಂದ ಹಣ ಪಡೆದಿದ್ದ ಮಹಿಳೆಯರು

‘ಆರೋಪಿ ಕೇಶವಮೂರ್ತಿ ಹೊಸೂರಿನ ಆಟೊಮೊಬೈಲ್‌ ಕಂಪನಿಯೊಂದರಲ್ಲಿ ಪ್ರಧಾನ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ಸತ್ಯರಾಜು ಗುತ್ತಿಗೆದಾರನಾಗಿದ್ದು, ಶರತ್‌ ಮತ್ತು ರಫೀಕ್‌ ಉದ್ಯಮಿಗಳು. ಲೈಂಗಿಕ ಕಾರ್ಯಕರ್ತೆಯರಾಗಿರುವ ಮಹಿಳೆಯರು ಈ ನಾಲ್ವರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದರು. ವಿಚಾರಣೆ ವೇಳೆ ಇದನ್ನು ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.