ADVERTISEMENT

104 ವಿದೇಶಿಗರ ಅಕ್ರಮವಾಸಕ್ಕೆ ನೆರವು: ಆರೋಪಿ ಸೆರೆ

ಪ್ರವೇಶಾತಿ ಹೆಸರಿನಲ್ಲಿ ನಗರಕ್ಕೆ ಕರೆಸುತ್ತಿದ್ದ ಸಮೀರ್ ಖಾನ್ | ಸಿಸಿಬಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2023, 19:27 IST
Last Updated 21 ಏಪ್ರಿಲ್ 2023, 19:27 IST
ಸಮೀರ್ ಖಾನ್
ಸಮೀರ್ ಖಾನ್   

ಬೆಂಗಳೂರು: ಕಾಲೇಜು ಪ್ರವೇಶಾತಿ ಹೆಸರಿನಲ್ಲಿ ವಿದೇಶಿ ಪ್ರಜೆಗಳನ್ನು ನಗರಕ್ಕೆ ಕರೆಸಿ ಅಕ್ರಮ ವಾಸಕ್ಕೆ ನೆರವು ನೀಡುತ್ತಿದ್ದ ಆರೋಪಿ ಸಮೀರ್ ಖಾನ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ನಿವಾಸಿ ಸಮೀರ್ ಖಾನ್, ಸಂಜಯನಗರದ ಸವಿತಾ ಮಹರ್ಷಿ ಪದವಿ ಕಾಲೇಜು ಪ್ರವೇಶಾತಿ ಹೆಸರಿನಲ್ಲಿ 104 ವಿದೇಶಿ ಪ್ರಜೆಗಳನ್ನು ನಗರಕ್ಕೆ ಕರೆಸಿದ್ದ. ಅವರಿಗೆ ಯಾವುದೇ ಪ್ರವೇಶಾತಿ ಕೊಡಿಸಿರಲಿಲ್ಲ. ಎಲ್ಲ ಪ್ರಜೆಗಳು ನಗರದಲ್ಲಿ ಅಕ್ರಮವಾಗಿ ವಾಸವಿದ್ದರು. ಹಲವು ಅಪರಾಧ ಚಟುವಟಿಕೆ ಹಾಗೂ ವ್ಯಾಪಾರದಲ್ಲಿ ತೊಡಗಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಯೆಮನ್, ಸೌದಿ ಅರೇಬಿಯಾ, ಇರಾನ್ ಸೇರಿದಂತೆ ಇತರೆ ದೇಶಗಳ ಪ್ರಜೆಗಳು ಅಕ್ರಮವಾಗಿ ವಾಸವಿದ್ದ ಬಗ್ಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಅವರೇ ಪ್ರಾಥಮಿಕ ವರದಿ ಸಮೇತ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಎಫ್‌ಎಸ್‌ಐಎಸ್ ಕಾರ್ಡ್‌ ಹೊಂದಿದ್ದ ಆರೋಪಿ: ‘ಸವಿತಾ ಮಹರ್ಷಿ ಕಾಲೇಜಿನ ಪ್ರತಿನಿಧಿ ಎಂದು ಹೇಳಿಕೊಂಡಿದ್ದ ಆರೋಪಿ ಸಮೀರ್ ಖಾನ್, ಎಫ್‌ಆರ್‌ಆರ್‌ಒ ಕಚೇರಿಯಿಂದ ವಿದೇಶಿ ವಿದ್ಯಾರ್ಥಿಗಳ ಮಾಹಿತಿ ವ್ಯವಸ್ಥೆಯ (ಎಫ್‌ಎಸ್‌ಐಎಸ್) ಗುರುತಿನ ಚೀಟಿ ಪಡೆದಿದ್ದ. ಅದನ್ನು ಬಳಸಿಕೊಂಡು ಏಜೆನ್ಸಿ ಮೂಲಕ ವಿದೇಶಿ ವಿದ್ಯಾರ್ಥಿಗಳನ್ನು ಆರೋಪಿ ಸಂಪರ್ಕಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಕಾಲೇಜಿನಲ್ಲಿ ಪದವಿ ವ್ಯಾಸಂಗಕ್ಕೆ ಪ್ರವೇಶಾತಿ ಪಡೆದಿರುವುದಾಗಿ ಪತ್ರ ನೀಡುತ್ತೇವೆ. ಅದೇ ಪತ್ರ ಬಳಸಿಕೊಂಡು ವೀಸಾ ಪಡೆದು ಭಾರತಕ್ಕೆ ಬರಬಹುದು. ಜತೆಗೆ, ನಿಮಗೆ ತಿಳಿದಷ್ಟು ದಿನ ವಾಸವಿರಬಹುದು’ ಎಂದು ಆರೋಪಿ ಹೇಳುತ್ತಿದ್ದ. ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಉದ್ದೇಶಿಸುತ್ತಿದ್ದ ವಿದ್ಯಾರ್ಥಿಗಳು, ಆರೋಪಿಯನ್ನು ಸಂಪರ್ಕಿಸುತ್ತಿದ್ದರು.’

‘ಪ್ರತಿಯೊಬ್ಬ ವಿದ್ಯಾರ್ಥಿಯಿಂದ ₹25 ಸಾವಿರದಿಂದ ₹ 1 ಲಕ್ಷವರೆಗೂ ಹಣ ಪಡೆಯುತ್ತಿದ್ದ ಆರೋಪಿ, ಕಾಲೇಜು ಲೆಟರ್‌ಹೆಡ್‌ನಲ್ಲಿ ಪ್ರವೇಶಾತಿ ಪತ್ರ ನೀಡುತ್ತಿದ್ದ. ಅದೇ ಪತ್ರ ಬಳಸಿಕೊಂಡು ವಿದ್ಯಾರ್ಥಿಗಳು ವೀಸಾ ಪಡೆದು ಭಾರತಕ್ಕೆ ಬರುತ್ತಿದ್ದರು. ಆದರೆ, ಯಾರೊಬ್ಬರೂ ಕಾಲೇಜಿಗೆ ಹೋಗುತ್ತಿರಲಿಲ್ಲ.

‘ಕಾಲೇಜು ಪ್ರವೇಶಾತಿ ಹೆಸರಿನಲ್ಲಿ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಈ ಪೈಕಿ ಕೆಲವರು, ಡ್ರಗ್ಸ್ ಪ್ರಕರಣದಲ್ಲೂ ಭಾಗಿಯಾಗಿದ್ದರು. ಕೃತ್ಯದಲ್ಲಿ ಕಾಲೇಜು ಆಡಳಿತ ಮಂಡಳಿ ಶಾಮೀಲಾಗಿರುವ ಅನುಮಾನವಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಪ್ರಸಕ್ತ ವರ್ಷದಿಂದ ಪದವಿ: ‘ಸವಿತಾ ಮಹರ್ಷಿ ಕಾಲೇಜಿನಲ್ಲಿ ಇದುವರೆಗೂ ದ್ವಿತೀಯ ಪಿಯಸಿ ತರಗತಿ ನಡೆಸಲು ಅವಕಾಶವಿತ್ತು. 2022–23ನೇ ಸಾಲಿಗೆ ಪದವಿ ತರಗತಿಗೆ ಅನುಮತಿ ದೊರಕಿತ್ತು. ಇದೇ ವರ್ಷವೇ ಆರೋಪಿ ಸಮೀರ್ ಖಾನ್, ಕಾಲೇಜು ಹೆಸರಿನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ನಗರಕ್ಕೆ ಕರೆಸಿದ್ದ’ ಎಂದು ಪೊಲೀಸರು ಹೇಳಿದರು.

‘ಒಂದೇ ಕಾಲೇಜು ಹೆಸರಿನಲ್ಲಿ 104 ವಿದೇಶಿ ಪ್ರಜೆಗಳು ವೀಸಾ ಪಡೆದ ಬಗ್ಗೆ ಎಫ್‌ಆರ್‌ಆರ್‌ಒ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಕಾಲೇಜಿನಲ್ಲಿ ಪರಿಶೀಲಿಸಿದಾಗ, ವಿದೇಶಿ ಪ್ರಜೆಗಳು ಅಲ್ಲಿರಲಿಲ್ಲ. ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ಹೊರಬಿದ್ದಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.