ಪೀಣ್ಯ ದಾಸರಹಳ್ಳಿ: ಗುಂಡಿ ಬಿದ್ದಿರುವ ರಸ್ತೆಗಳು, ಮಳೆ ಬಂದರೆ ಕೆಸರು ಗದ್ದೆ, ಬಿಸಿಲಿದ್ದರೆ ದೂಳು ಮಯ, ವಾಹನ ಸವಾರರ ಪರದಾಟ, ದಿನನಿತ್ಯ ಅಪಘಾತಗಳ ಸರಮಾಲೆ...
ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಸಣ್ಣ ಕೈಗಾರಿಕೆಗಳನ್ನು ಹೊಂದಿರುವ ಪ್ರದೇಶವೆಂದೇ ಖ್ಯಾತಿ ಪಡೆದಿರುವ ಪೀಣ್ಯ ಕೈಗಾರಿಕಾ ಪ್ರದೇಶದ ದುಸ್ಥಿತಿ ಇದು.
ಪೀಣ್ಯ 2ನೇ ಹಂತದಲ್ಲಿರುವ ಈ ಕೈಗಾರಿಕಾ ಪ್ರದೇಶ, ತಿಂಗಳಪಾಳ್ಯ, ಕೆಂಪಯ್ಯ ಗಾರ್ಡನ್‌ನ ಚಿಕ್ಕರಂಗಯ್ಯ ಇಂಡಸ್ಟ್ರಿಯಲ್ ಏರಿಯಾ, ಕಿಯೋನಿಕ್ಸ್ ಲೇಔಟ್, ಎಸ್‌ಎಲ್‌ವಿ ಲೇಔಟ್‌ಗಳಲ್ಲಿ ವಿಸ್ತರಿಸಿಕೊಂಡಿದೆ. ಸುಮಾರು 15 ಸಾವಿರ ಕೈಗಾರಿಕೆಗಳು, 12 ಲಕ್ಷಕ್ಕೂ ಹೆಚ್ಚು ದುಡಿಯುವ ಜನರಿರುವ ಈ ಪ್ರದೇಶದಲ್ಲಿ ರಸ್ತೆಗಳಷ್ಟೇ ಅಲ್ಲದೇ, ಬೀದಿ ದೀಪ, ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಇದೆ. ‘ಸುಮಾರು12 ವರ್ಷಗಳಿಂದ ಇದೇ ಪರಿಸ್ಥಿತಿ ಇದೆ’ ಎಂದು ಕೈಗಾರಿಕೋದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.
‘ಇಲ್ಲಿ ಎಲ್ಲ ರೀತಿಯ ಉದ್ಯಮಗಳಿವೆ. ಪುಣೆ, ಮುಂಬೈ ಸೇರಿದಂತೆ ಹೊರ ರಾಜ್ಯಗಳಿಗೆ ಅಗತ್ಯವಾದ ಕಚ್ಚಾವಸ್ತುಗಳು ಇಲ್ಲಿಂದ ರಫ್ತಾಗುತ್ತವೆ. ವಸ್ತುಗಳನ್ನು ಸಾಗಿಸುವ ವಾಹನಗಳು ಸಂಚರಿಸಲು ಉತ್ತಮ ರಸ್ತೆ ಇಲ್ಲ. ಹೀಗಾಗಿ, ಕೈಗಾರಿಕೆಗಳ ಪ್ರಗತಿಗೆ ಹಿನ್ನಡೆಯಾಗಿದೆ’ ಎಂದು ಪೀಣ್ಯಾ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಎಂ.ಎಂ.ಗಿರಿ ಬೇಸರ ವ್ಯಕ್ತಪಡಿಸುತ್ತಾರೆ.
‘ನಮ್ಮದು ಆಕ್ಸಿಜನ್ ಪೂರೈಕೆ ಕಂಪನಿ. ಕಂಪನಿಯೊಂದಿಗೆ ವ್ಯವಹರಿಸಲು ಹೊರದೇಶಗಳಿಂದ ಉದ್ಯಮಿಗಳು ಬರುತ್ತಾರೆ. ಅವರನ್ನು ಕರೆತರಲು ನಮಗೆ ಮುಜುಗರವಾಗುತ್ತದೆ. ಮಳೆ ಬಂದರಂತೂ ರಸ್ತೆಗಳು ಕೆಸರುಮಯವಾಗುತ್ತವೆ’ ಎಂದು ದೂರುತ್ತಾರೆ ಅಕ್ಸಿಪ್ಲಾಂಟ್ ಕಂಪನಿಯ ಎಂ.ಡಿ.ರಮೇಶ್.
ಎಸ್‌ಎಲ್‌ವಿ ಲೇಔಟ್ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 150 ಕೈಗಾರಿಕೆಗಳಿವೆ. ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕ ರಿದ್ದಾರೆ. ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಾರೆ. ಬೀದಿ ದೀಪವಿಲ್ಲದ ಕಾರಣ, ಮಹಿಳೆಯರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ’ ಎಂದು ಉದ್ಯಮಿ ಸ್ಮಿತಾ ಲಕ್ಮೀಕಾಂತ್ ಬೇಸರ ವ್ಯಕ್ತಪಡಿಸುತ್ತಾರೆ.
ಸರ್ಕಾರ ‘ಬ್ರಾಂಡ್ ಬೆಂಗಳೂರು’ ಯೋಜನೆ ರೂಪಿಸಿದೆ. ಅದೇ ರೀತಿ ‘ಬ್ರಾಂಡ್ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ’ ಎಂದು ಮಾಡಿ. ₹500 ಕೋಟಿ ಅನುದಾನ ಬಿಡುಗಡೆ ಮಾಡಿ, ಮೂಲಸೌಕರ್ಯಗಳನ್ನು ಒದಗಿಸಿದರೆ, ನಾವು ಸರ್ಕಾರಕ್ಕೆ ಇನ್ನಷ್ಟು ಆದಾಯ ತಂದು ಕೊಡುತ್ತೇವೆ. ಮಾತ್ರವಲ್ಲ, ಮೂರು ಲಕ್ಷದಷ್ಟು ಉದ್ಯೋಗಾವಕಾಶ ಕಲ್ಪಿಸಬಹುದು’ ಎಂದು ಪೀಣ್ಯ ಕೈಗಾರಿಕಾ ಪ್ರದೇಶಗಳ ಸಂಘದ ಅಧ್ಯಕ್ಷ ಆರ್.ಶಿವಕುಮಾರ್.
* ರಸ್ತೆಗಳು ಸರಿ ಇಲ್ಲ, ಬೀದಿ ದೀಪವಿಲ್ಲ
* ಸೌಕರ್ಯದ ಕೊರತೆಯಿಂದ ವಹಿವಾಟಿಗೆ ಏಟು
* ‘ಬ್ರ್ಯಾಂಡ್ ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾ ಮಾಡಿ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.