ಬೆಂಗಳೂರು: ಸ್ನೇಹಿತನ ಜನ್ಮದಿನಾಚರಣೆಗೆ ತೆರಳಿದ್ದ ವ್ಯಕ್ತಿಯೊಬ್ಬ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಮೂಡಿಸಿದ್ದ ಘಟನೆ ಜಯನಗರದಲ್ಲಿ ಇತ್ತೀಚೆಗೆ ನಡೆದಿದೆ.
ಈ ಸಂಬಂಧ ಸೈಯದ್ ಅಲ್ತಾಫ್ ಅಹ್ಮದ್ ಎಂಬಾತನ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಜಯನಗರದ ನಿವಾಸಿ ಮೊಯಿನ್ಖಾನ್ ಅವರ ಜನ್ಮದಿನಾಚರಣೆಗೆ ತೆರಳಿದ್ದ ಆರೋಪಿ, ಪಿಸ್ತೂಲ್ನಿಂದ ಸಾರ್ವಜನಿಕ ಸ್ಥಳದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಮೂಡಿಸಿದ್ದ. ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ ನಿರ್ಲಕ್ಷ್ಯತನದಿಂದ ಗಾಳಿಯಲ್ಲಿ ಗುಂಡು ಹಾರಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಆರೋಪಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಜುಬೇರ್ ಖಾನ್ ಲಿಂಪಾ ಎಂಬುವರ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ತುಣುಕು ಹಂಚಿಕೊಳ್ಳಲಾಗಿತ್ತು. ಆ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡುತ್ತಿದ್ದ ದೃಶ್ಯ ಸೆರೆ ಆಗಿತ್ತು. ಜಯನಗರ, ಬಸವನಗುಡಿ, ಹನುಮಂತನಗರ, ಸಿದ್ದಾಪುರ, ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗೆ ಹುಡುಕಾಟ ನಡೆಸಲಾಗಿತ್ತು. ಜುಬೇರ್ ಖಾನ್ ಅವರನ್ನು ವಿಚಾರಣೆ ನಡೆಸಿದಾಗ ಗುಂಡು ಹಾರಿಸಿದ್ದು ಬೊಮ್ಮನಹಳ್ಳಿಯ ಮೂರನೇ ಕ್ರಾಸ್ನ ನಿವಾಸಿ ಸೈಯದ್ ಅಲ್ತಾಫ್ ಎಂಬುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.