ADVERTISEMENT

ಬೆಂಗಳೂರು: ವಿಶ್ರಾಂತಿಯ ತಾಣಗಳಾಗಲಿವೆ ಜಂಕ್ಷನ್‌

25 ಸ್ಥಳಗಳಲ್ಲಿ ಮಾಲಿನ್ಯ ತಡೆ, ನಾಗರಿಕ–ಪರಿಸರ ಸ್ನೇಹಿ ಜಂಕ್ಷನ್‌, ಜನರ ಓಟಾಟಕ್ಕಿಲ್ಲ ಬೇಲಿ

ಆರ್. ಮಂಜುನಾಥ್
Published 25 ಮೇ 2023, 0:10 IST
Last Updated 25 ಮೇ 2023, 0:10 IST
ಟೌನ್‌ಹಾಲ್‌ ಜಂಕ್ಷನ್‌ನ ಮಾದರಿ ನಕ್ಷೆ
ಟೌನ್‌ಹಾಲ್‌ ಜಂಕ್ಷನ್‌ನ ಮಾದರಿ ನಕ್ಷೆ   

ಬೆಂಗಳೂರು: ನಗರದ ವಿವಿಧ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆಯ ಸಮಸ್ಯೆಗೆ ಸಮಗ್ರ ಪರಿಹಾರ ಇನ್ನೂ ಸಿಗದಿದ್ದರೂ, ಆ ಜಂಕ್ಷನ್‌ಗಳ ಸೌಂದರ್ಯೀಕರಣ ಆರಂಭವಾಗಿದೆ. 25 ಜಂಕ್ಷನ್‌ಗಳು ಕಲ್ಲಿನ ಹಾಸು, ವಿದ್ಯುತ್‌ ದೀಪ, ಕಾರಂಜಿಗಳಿಂದ ನಳನಳಿಸಲಿವೆ.

ದೂಳು, ಕಸ, ಮುರಿದುಬಿದ್ದ ಕಲ್ಲು, ಬೇಲಿಯಿಂದ ಬೇಸರ ಮೂಡಿಸುತ್ತಿದ್ದ ಜಂಕ್ಷನ್‌ಗಳ ಸ್ವರೂಪವೇ ಬದಲಾಗಲಿದೆ. ಜಂಕ್ಷನ್‌ಗಳ ಸೌಂದರ್ಯವನ್ನು ಸವಿಯುವ ಜೊತೆಗೆ, ಕಾರಂಜಿಯ ಸೊಬಗಿನಲ್ಲಿ ಅಲ್ಲೊಂದಷ್ಟು ಹೊತ್ತು ವಿರಮಿಸಿಕೊಳ್ಳುವ ಅವಕಾಶವೂ ಲಭ್ಯವಾಗಲಿದೆ.

ಜಂಕ್ಷನ್‌ಗಳು ಸೌಂದರ್ಯೀಕರಣಗೊಳ್ಳುವ ಜೊತೆಗೆ ನಾಗರಿಕರು ವಿರಮಿಸಲು ಅವಕಾಶವನ್ನೂ ಕಲ್ಪಿಸಲಾಗಿದೆ. ವಿಶಾಲ ಕಲ್ಲಿನಹಾಸಿನ ಜೊತೆಗೆ ಅಲ್ಲಲ್ಲಿ ಕಲ್ಲಿನ ಕುರ್ಚಿಗಳನ್ನೂ ಅಳವಡಿಸಲಾಗುತ್ತದೆ. ಗಿಡ–ಮರಗಳನ್ನು ಉಳಿಸಿಕೊಂಡು ಅಂದಗೊಳಿಸಲಾಗುತ್ತಿದೆ. 25ರಲ್ಲಿ 23 ಜಂಕ್ಷನ್‌ಗಳಲ್ಲಿ ಕಾರಂಜಿಗಳನ್ನು ಸೃಷ್ಟಿಸಲಾಗುತ್ತಿದೆ. ಇದು ಆಹ್ಲಾದಕರ ವಾತಾವರಣ ನೀಡುವ ಜೊತೆಗೆ ವಾಯುಮಾಲಿನ್ಯವನ್ನು ಅಲ್ಪಮಟ್ಟಿಗೆ ತಡೆಯುತ್ತದೆ.

ADVERTISEMENT

ಇಂತಹ ಸುಧಾರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಬಿಬಿಎಂಪಿ ಸಂಚಾರ ಎಂಜಿನಿಯರಿಂಗ್ ಘಟಕದಿಂದ (ಟಿಇಸಿ) ಕೈಗೊಳ್ಳಲಾಗಿದೆ. ಈ ಜಂಕ್ಷನ್‌ಗಳ ಅಭಿವೃದ್ಧಿಗೆ ₹23.80 ಕೋಟಿ ವೆಚ್ಚವಾಗಲಿದೆ. ಎಲ್ಲ ಜಂಕ್ಷನ್‌ಗಳ ಕಾಮಗಾರಿ ನಡೆಯುತ್ತಿದ್ದು, 10 ತಿಂಗಳಲ್ಲಿ ಮುಗಿಯಲಿವೆ. ಕೆಲವೊಂದು ಜಂಕ್ಷನ್‌ ಶೀಘ್ರವೇ ನಾಗರಿಕರ ಬಳಕೆಗೆ ಲಭ್ಯವಾಗಲಿವೆ.

ಟೌನ್‌ಹಾಲ್‌, ಶೇಷಾದ್ರಿ ರಸ್ತೆಯ ಮೌರ್ಯ ವೃತ್ತ, ಹಡ್ಸನ್‌ ವೃತ್ತ, ಎನ್‌.ಆರ್‌.ಸ್ಕ್ವೇರ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ.

‘ಟೌನ್‌ಹಾಲ್‌–ರವೀಂದ್ರ ಕಲಾಕ್ಷೇತ್ರದ ನಡುವಿನ ಹೆಚ್ಚಿನ ಸ್ಥಳವನ್ನು ಬಳಸಿಕೊಂಡು ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈ ಜಂಕ್ಷನ್‌ಗಳ ಅಭಿವೃದ್ಧಿ ಹಿಂದಿಗಿಂತ ಭಿನ್ನವಾಗಿದೆ. ಇದಕ್ಕೆ ಬೇಲಿ ಹಾಕುವುದಿಲ್ಲ. ಗೇಟ್‌ ಅಳವಡಿಸುವುದಿಲ್ಲ. ಒಂದೇ ಕಡೆ ಪ್ರವೇಶ, ಒಂದೇ ನಿರ್ಗಮನ ಎಂಬುದಿಲ್ಲ. ಎಲ್ಲೆಡೆಯಿಂದ ಪ್ರವೇಶ, ನಿರ್ಗಮನವಿರುವಂತೆ ವಿನ್ಯಾಸಗೊಳಿಸಲಾಗಿದೆ. ಇದೇ ರೀತಿ ನಗರದ ಎಲ್ಲ ಜಂಕ್ಷನ್‌ಗಳನ್ನೂ ಅಲ್ಲಿನ ಸ್ಥಳಕ್ಕೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ’ ಎಂದು ಟಿಇಸಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಜಯಸಿಂಹ ಮಾಹಿತಿ ನೀಡಿದರು.

‘ಜಂಕ್ಷನ್‌ಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಪೂರ್ಣಗೊಂಡ ನಂತರದ ಎರಡು ವರ್ಷದ ನಿರ್ವಹಣೆಯನ್ನು ಆಯಾ ಗುತ್ತಿಗೆದಾರರಿಗೇ ವಹಿಸಲಾಗಿದೆ. ಪ್ರತಿ ಜಂಕ್ಷನ್‌ ನಿರ್ವಹಣೆಗೆ ಒಬ್ಬ ಸಿಬ್ಬಂದಿ ನೇಮಿಸಲಾಗುತ್ತದೆ’ ಎಂದು ಟಿಇಸಿ ವಿಭಾಗದ ಪ್ರದೀಪ್‌ ತಿಳಿಸಿದರು.

ಬಹುತೇಕ ಪೂರ್ಣಗೊಂಡಿರುವ ಮೌರ್ಯ ಜಂಕ್ಷನ್‌
ಬಹುತೇಕ ಪೂರ್ಣಗೊಂಡಿರುವ ಮೌರ್ಯ ಜಂಕ್ಷನ್‌
ಹಡ್ಸನ್‌ ವೃತ್ತದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ
ಹಡ್ಸನ್‌ ವೃತ್ತದ ಮಾದರಿ

75 ಜಂಕ್ಷನ್‌ಗಳಿಗೆ ಅನುಮೋದನೆ ಸಿಕ್ಕಿಲ್ಲ!

ನಗರದ ಜಂಕ್ಷನ್‌ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿರಿಸಲು ವಾಯುಮಾಲಿನ್ಯ ನಿಯಂತ್ರಿಸಲು 75 ಜಂಕ್ಷನ್‌ಗಳನ್ನು ಕಾರಂಜಿ ಸಹಿತ ಅಭಿವೃದ್ಧಿಪಡಿಸುವ ‘ಸುರಕ್ಷ 75 –ಮಿಷನ್ 2023’ ಯೋಜನೆಗೆ ಚಾಲನೆ ನೀಡಲಾಗಿದ್ದರೂ ಅದಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಈ ಯೋಜನೆಗೆ ಚಾಲನೆ ನೀಡಿದ್ದರು. ಬಿಬಿಎಂಪಿ ಬಜೆಟ್‌ನಲ್ಲೂ ಅದರ ಪ್ರಸ್ತಾಪವಾಗಿತ್ತು. ಯೋಜನೆಗೆ ಸರ್ಕಾರದಿಂದ ಅನುಮತಿ ಸಿಗಬೇಕಿದೆ. ಆ ನಂತರ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕಿದೆ. ₹ 150 ಕೋಟಿ ವೆಚ್ಚದ ಯೋಜನೆಗೆ ವಲಯವಾರು ಜಂಕ್ಷನ್‌ಗಳನ್ನು ಗುರುತಿಸಲಾಗಿದೆ. ಪೂರ್ವ ವಲಯದಲ್ಲಿ ಹೆಚ್ಚು ಅಂದರೆ 13 ಮಹದೇವಪುರ– ದಕ್ಷಿಣ ವಲಯದಲ್ಲಿ ತಲಾ 12 ಪೂರ್ವ ವಲಯದಲ್ಲಿ 11 ಜಂಕ್ಷನ್‌ ಅಭಿವೃದ್ಧಿಪಡಿಸುವ ಯೋಜನೆ ಇದೆ.

ಜಂಕ್ಷನ್‌ಗಳು;ಎಷ್ಟು ವೆಚ್ಚ?

ಹಡ್ಸನ್‌ ವೃತ್ತ;₹2.44 ಕೋಟಿ ಎನ್‌.ಆರ್.ಸ್ಕ್ವೇರ್‌;₹2.69 ಕೋಟಿ ಟೌನ್‌ಹಾಲ್‌;₹96.46 ಲಕ್ಷ ಬ್ರಿಗೇಡ್ ರಸ್ತೆ;₹73.13 ಲಕ್ಷ ಮೆಯೊ ಹಾಲ್‌;₹1.76 ಕೋಟಿ ಕೆ.ಎಚ್.ವೃತ್ತ;₹1.74 ಕೋಟಿ ಅಶೋಕ ಪಿಲ್ಲರ್‌;₹1.36 ಕೋಟಿ ಡೇರಿ ವೃತ್ತ;₹55.50 ಲಕ್ಷ ಹಡ್ಸನ್‌ ಪೊಲೀಸ್‌ ಪಾರ್ಕ್;₹77.50 ಲಕ್ಷ ಕಾರ್ಲೆ;₹52.97 ಲಕ್ಷ ಗುಬ್ಬಿ ತೋಟದಪ್ಪ ಛತ್ರ ರಸ್ತೆ;₹59.41 ಲಕ್ಷ ಎಂಟಿಆರ್‌ ಗೇಟ್‌;₹61.57 ಲಕ್ಷ ಸರ್ಕಲ್‌ ಮಾರಮ್ಮ;₹58.93 ಲಕ್ಷ ವಿಧಾನಸೌಧ;₹87.95 ಲಕ್ಷ ಗಾಲ್ಫ್‌ ಕೋರ್ಸ್‌;₹1.08 ಕೋಟಿ ಉಪ್ಪಾರಪೇಟೆ;₹68.77 ಲಕ್ಷ ಸುಮನಹಳ್ಳಿ;₹40.63 ಲಕ್ಷ ಮಾಧವನ್‌ ಪಾರ್ಕ್‌;₹31.01 ಲಕ್ಷ ಬಿಇಎಲ್‌;₹30.93 ಲಕ್ಷ ಹೆಬ್ಬಾಳ;₹41.85 ಲಕ್ಷ ಕಂಟೋನ್ಮೆಂಟ್‌;₹97.12 ಲಕ್ಷ ಜ್ಞಾನಭಾರತಿ;₹47.85 ಲಕ್ಷ ಗುಟ್ಟಹಳ್ಳಿ;₹1.71 ಕೋಟಿ ದೊಮ್ಮಲೂರು;₹84.94 ಲಕ್ಷ ಸುರಂಜನ್‌ ದಾಸ್‌;₹32.18 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.