ADVERTISEMENT

Bengaluru Kambala | ಬೆಂಗಳೂರಿನಲ್ಲಿ ಕೋಣಗಳ ಮಿಂಚಿನ ಓಟ

ರೆಬಲ್‌ ಸ್ಟಾರ್‌ಗಳಾದ ಕೋಣಗಳೊಂದಿಗೆ ಸೆಲ್ಫಿ, ಫೋಟೊಗಳಿಗೆ ಮುಗಿಬಿದ್ದ ಜನರು

ಬಾಲಕೃಷ್ಣ ಪಿ.ಎಚ್‌
Published 26 ನವೆಂಬರ್ 2023, 0:30 IST
Last Updated 26 ನವೆಂಬರ್ 2023, 0:30 IST
<div class="paragraphs"><p>ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ‘ಬೆಂಗಳೂರು ಕಂಬಳ ನಮ್ಮ ಕಂಬಳ’ದಲ್ಲಿ ಓಡಲು ಸಜ್ಜಾಗುತ್ತಿರುವ ಕೋಣಗಳು </p></div>

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ‘ಬೆಂಗಳೂರು ಕಂಬಳ ನಮ್ಮ ಕಂಬಳ’ದಲ್ಲಿ ಓಡಲು ಸಜ್ಜಾಗುತ್ತಿರುವ ಕೋಣಗಳು

   

–ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ಬಹು ನಿರೀಕ್ಷೆಯ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ಶನಿವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಕರಾವಳಿಯ ಗದ್ದೆಗಳಲ್ಲಿ, ನದಿ ತೀರಗಳಲ್ಲಿ ನೀರು ಚಿಮ್ಮಿಸುತ್ತಿದ್ದ ಕೋಣಗಳು ಶನಿವಾರ ಬೆಂದಕಾಳೂರಿನಲ್ಲಿ ಬೇಯಿಸಿ, ರುಬ್ಬಿದ ಹುರುಳಿ ಕಾಳು ತಿಂದು ‘ಕರೆ’ಗಿಳಿದು ಮಿಂಚಿನ ಓಟ ನಡೆಸಿದವು. 178 ಜೋಡಿ ಕೋಣಗಳು ಕಂಬಳದ ಸಂಭ್ರಮವನ್ನು ರಾಜಧಾನಿಯಲ್ಲಿ ಹರಡಿದವು.

ADVERTISEMENT

ಅರಮನೆ ಮೈದಾನದಲ್ಲಿ ನಿರ್ಮಿಸಿರುವ ‘ರಾಜ–ಮಹಾರಾಜ’ ಕರೆಗಳಿಗೆ ಬೆಳಿಗ್ಗೆ ಚಾಲನೆ ನೀಡಲಾಯಿತು. ಕೋಣಗಳ ಕಂಬಳ ಓಟ ಶುರುವಾಯಿತು. ಹಗ್ಗದ ಓಟ, ನೇಗಿಲು ಓಟ, ಅಡ್ಡ ಹಲಗೆ, ಕಣೆ ಹಲಗೆ ಓಟಗಳು ರೋಮಾಂಚನಗೊಳಿಸಿದವು. 14 ಸೆಕೆಂಡ್ಸ್‌ ಒಳಗೆ ಗುರಿ ತಲುಪದ ಜೋಡಿಗಳು ಮುಖ್ಯಸ್ಪರ್ಧೆಯಿಂದ ಹೊರಬಿದ್ದವು. ಸಂಜೆವರೆಗೆ ಈ ಓಟಗಳು ನಡೆದವು. 

ಪ್ರಮುಖ ಸ್ಪರ್ಧೆಗಳು ಸಂಜೆ ಆರಂಭಗೊಂಡವು. 6.5 ಕೋಲು (ಒಂದು ಕೋಲು–2.5 ಅಡಿ) ಎತ್ತರ ಮತ್ತು 7.5 ಕೋಲು ಎತ್ತರದಲ್ಲಿ ನಿಶಾನೆಗಳನ್ನು ಕಟ್ಟಲಾಗಿದ್ದು, ಹಲಗೆ ಓಟದ ಸಂದರ್ಭದಲ್ಲಿ ಕೋಣಗಳು ಅಷ್ಟು ಎತ್ತರಕ್ಕೆ ನೀರು ಚಿಮ್ಮಿಸಿ ರೋಮಾಂಚನಗೊಳಿಸಿದವು. 

ಕೋಣಗಳೊಂದಿಗೆ ಹಗ್ಗ ಅಥವಾ ನೇಗಿಲು ಹಿಡಿದುಕೊಂಡು ಶರವೇಗದಲ್ಲಿ ಓಡುವ ಓಟಗಾರರು ಬೆರಗು ಮೂಡಿಸಿದರು. ಕೇವಲ ವ್ಯಾಯಾಮ, ಓಟ, ದುಡಿಮೆಯಿಂದಲೇ ಬೆಳೆಸಿರುವ ಓಟಗಾರರ ‘ಸಿಕ್ಸ್‌ಪ್ಯಾಕ್‌’ ದೇಹಗಳು ಮಿರಮಿರ ಮಿಂಚುತ್ತಿದ್ದವು.

ಮೈದಾನದ ಸುತ್ತ ಅಲ್ಲಲ್ಲಿ ಟೆಂಟ್‌ ಹಾಕಿಕೊಂಡು ನೆರಳಲ್ಲಿ ಇದ್ದ ಕೋಣಗಳು ತಮ್ಮ ಓಟದ ಸಮಯಕ್ಕೆ ಸರಿಯಾಗಿ ನೋಗ ಏರಿಸಿಕೊಂಡು ಸಿಂಗಾರ ಮಾಡಿಕೊಂಡು ಕರೆಯವರೆಗೆ ಮೆರವಣಿಗೆಯಲ್ಲಿ ಬರುವ ಚಂದವನ್ನು ಜನರು ಕಣ್ಣು ತುಂಬಿಕೊಂಡರು.

ಭಾರಿ ಮೈಕಟ್ಟಿನ ಕೋಣಗಳೊಂದಿಗೆ, ಕೋಣ ಓಟಗಾರರೊಂದಿಗೆ ನಿಂತು ಸೆಲ್ಫಿ ತೆಗೆದುಕೊಳ್ಳುವರು, ಫೋಟೊ ತೆಗೆಸಿಕೊಳ್ಳುವವರ ಸಂಖ್ಯೆ ಅಧಿಕವಿತ್ತು. ‘ಸ್ಟಾರ್‌’ ಕೋಣಗಳು ಫೋಟೊ ತೆಗೆಯುವವರಿಗೆ ಸಹಕರಿಸಿದರೆ ಕೆಲವು ಕೋಣಗಳು ರೆಬೆಲ್‌ ಸ್ಟಾರ್‌ಗಳಂತೆ ತಲೆ ಅಲ್ಲಾಡಿಸಿ ಹಾಯಲು ಮುಂದಾದಾಗ ಕೋಣ ಅಭಿಮಾನಿಗಳು ಓಡುವ ದೃಶ್ಯಗಳು ನಗೆ ಮೂಡಿಸಿದವು.

ಮಳೆ ತೊಂದರೆ: ಮಧ್ಯಾಹ್ನದ ಬಳಿಕ ಸುರಿದ ಮಳೆಯು ಕಂಬಳ ನೋಡುವ ಅತ್ಯುತ್ಸಾಹಕ್ಕೆ ತಣ್ಣೀರು ಎರಚಿತು. ಮೈದಾನದಲ್ಲಿ ಅಲ್ಲಲ್ಲಿ ಕೆಸರು ನಿರ್ಮಾಣಗೊಂಡಿತು. ಬೈಕ್‌ಗಳು ಸ್ಕಿಡ್‌ ಆಗಿ ಜಾರಿ ಬಿದ್ದವು.

ಸಾಂಸ್ಕೃತಿಕ ಕಾರ್ಯಕ್ರಮ: ತುಳುನಾಡಿನ ಇತಿಹಾಸವನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ಸಾಂಸ್ಕೃತಿಕ ವೇದಿಕೆಯಲ್ಲಿ ಮೂಡಿಬಂದವು. ಯಕ್ಷಗಾನ, ಕಂಗೀಲು ನೃತ್ಯ, ಆಟಿ ಕಳೆಂಜ ಮುಂತಾದ ಜನಪದ ಕಲೆಗಳಲ್ಲದೇ, ಆಧುನಿಕ ಕಾಮಿಡಿ ಶೋಗಳು, ವಿವಿಧ ನೃತ್ಯಗಳು ಗಮನ ಸೆಳೆದವು.

ಹಲಸಿನ ಹಪ್ಪಳದಿಂದ ಕೋರಿ (ಕೋಳಿ)ರೊಟ್ಟಿಯವರೆಗೆ ಕರಾವಳಿಯ ಸಾಂಪ್ರದಾಯಿಕ ತಿನಿಸುಗಳು, ವಿವಿಧ ಕಲಾಪ್ರಕಾರಗಳ ಪ್ರದರ್ಶನಗಳು ಇದ್ದ 180ಕ್ಕೂ ಅಧಿಕ ಮಳಿಗೆಗಳು ಕಂಬಳದ ಮೈದಾನದಲ್ಲಿದ್ದವು. ನೆಕ್ಕಿಲಾಡಿ ಜಿ.ಎಸ್‌. ಬ್ಯಾಂಡ್‌ ವಾದ್ಯದ  ಗಂಗಾಧರ ಪೂಜಾರಿ, ಬಾಲಕೃಷ್ಣ ದೇವಾಡಿಗ, ಶೇಖರ ದೇವಾಡಿಗರ ತಂಡದ ಸ್ಯಾಕ್ಸೋಫೋನ್‌ ವಾದನ, ಕೊಂಬು ಕಂಬಳಕ್ಕೆ ಮೆರುಗು ನೀಡಿದವು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಕಂಬಳ ನೋಡಲು ನೆರೆದ ಜನಸಾಗರ.

ಅಲೆ ಬುಡಿಯೆರ್‌...

‘ಅಣ್ಣ ಬೇಗ ಗೋಣೆರೆನ್‌ ತಯಾರ್‌ ಮಲ್ಪುಲೆ’ ‘ಮಿಜಾರ್‌ ಗುತ್ತುದ ಎರ್ಲು ಬತ್ತನಾ?’ ‘ಬಾರ್ಕೂರು ಶಾಂತರಾಮ ಶೆಟ್ರೆನ ಎರ್ಲು ತಯಾರಾವೊಂದುಲ್ಲ’ ‘ಹಳೆಯಂಗಡಿ ಕೊಪ್ಪಳ ನಂದಗೋಕುಲ ಕೃಷ್ಣಪೂಜಾರ್ಲೆನ ಎರ್ಲು ಓಲುಲ್ಲಾ..’ ‘ಅಲೆ ಬುಡಿಯೆರ್‌..’ ಈ ರೀತಿಯ ಕಮೆಂಟ್ರಿ ಕಂಬಳಕ್ಕೆ ಹುರುಪು ತುಂಬಿದವು. ಕೋಣಗಳು ಓಟ ಶುರುಮಾಡುವ ಜಾಗದಲ್ಲಿಯೂ ಗುರಿ ಮುಟ್ಟುವ ಜಾಗದಲ್ಲಿಯೂ (ಮಂಜೊಟ್ಟಿ) ಇರುವ ಕಂಬಳ ವೀಕ್ಷಕ ವಿವರಣೆ ನೀಡುವವರು ಆಕರ್ಷಕ ಮಾತುಗಳಿಂದ ಜನರನ್ನು ಸೆಳೆದರು. ಎರಡೂ ಕರೆಯ ಕೋಣಗಳು ಒಂದೇ ಸಮಕ್ಕೆ ನಿಂತ ಮೇಲಷ್ಟೇ ಓಟ ಆರಂಭಿಸಬೇಕು. ಕೋಣಗಳನ್ನು ತಿರುಗಿಸಿ ತಿರುಗಿಸಿ ಒಂದೇ ಸಮಕ್ಕೆ ನಿಲ್ಲಿಸಲು ಕೋಣ ಓಟಗಾರ ಮತ್ತು ಸಹಾಯಕರು ಸಾಹಸ ಪಟ್ಟರು. ಕೋಣಗಳು ಓಡಿದಾಗ ಮಂಜೊಟ್ಟಿಯಲ್ಲಿ ಅವುಗಳನ್ನು ಯುವಕರು ಹಿಡಿದುಕೊಳ್ಳುವ ರೋಮಾಂಚನಕಾರಿ ದೃಶ್ಯಗಳು ಮನಸೆಳೆದವು.

ಕೆಲವೆಡೆ ಅತಿ ಶಿಸ್ತು ಹಲವೆಡೆ ಅವ್ಯವಸ್ಥೆ

ಬೆಂಗಳೂರು ಕಂಬಳದಲ್ಲಿ ವೇದಿಕೆ ಕರೆ ಇರುವಲ್ಲಿ ಅನಗತ್ಯವಾದ ಅತಿಶಿಸ್ತು ಗೊಂದಲಗಳನ್ನು ಉಂಟು ಮಾಡಿದವು. ಬೇಕಾದಷ್ಟು ಸ್ಥಳಾವಕಾಶ ಇದ್ದರೂ ಸಾರ್ವಜನಿಕರನ್ನು ಅಲ್ಲಿ ಹೋಗಬಾರದು ಇಲ್ಲಿ ಹೋಗಬಾರದು ಎಂದು  ನಿಯಂತ್ರಿಸಲಾಗಿತ್ತು. ಅವರು ಎಲ್ಲಿ ಹೋಗಿ ಕಂಬಳ ವೀಕ್ಷಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವವರ ಕೊರತೆ ಇತ್ತು. ಸಸ್ಯಾಹಾರ ಮತ್ತು ಮಾಂಸಾಹಾರದ ಉತ್ತಮ ಊಟವನ್ನು ತಯಾರು ಮಾಡಲಾಗಿತ್ತು. ಆದರೆ ಊಟದ ಹಾಲ್‌ಗೆ ಪ್ರವೇಶಿಸುವಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ನೂಕು ನುಗ್ಗಲು ಉಂಟಾಗಿತ್ತು. ಗಣ್ಯರು ಮಾಧ್ಯಮದವರು ಪರದಾಡುವಂತಾಯಿತು. ಕಂಬಳ ನೋಡಬೇಕು ಎಂದು ಕುತೂಹಲದಿಂದ ಬಂದ ಅನೇಕರು ನೇರ ನೋಡಲಾಗದೇ ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ನೋಡಿ ಹಿಂತಿರುಗಿದರು. ವಾಹನಗಳಲ್ಲಿ ಬರುವವರಿಗೆ ಪ್ರವೇಶ ಇರಲಿಲ್ಲ. ವಾಹನ ನಿಲುಗಡೆಗೆ ನಿಗದಿತ ಸ್ಥಳ ನಿಯೋಜನೆ ಮಾಡಲಾಗಿತ್ತು. ಆದರೆ ವಾಹನ ಇಲ್ಲದೇ ನಡೆದುಕೊಂಡು ಬರುವವರನ್ನೂ ನೇರ ದಾರಿಯಲ್ಲಿ ಬಿಡದೇ ಸುತ್ತು ಹಾಕಿಕೊಂಡು ಬರುವಂತೆ ಮಾಡಲಾಗಿದ್ದರಿಂದ ಜನರು ಗೊಣಗಿಕೊಂಡು ಸುತ್ತು ಹಾಕಿದರು. ಫ್ಲೆಕ್ಸ್‌ ತೆರವು: ಮೇಖ್ರಿ ಸರ್ಕಲ್‌– ಅರಮನೆ ಮೈದಾನ ಸುತ್ತಮುತ್ತ ಅನೇಕ ಕಡೆಗಳಲ್ಲಿ ಕಂಬಳಕ್ಕೆ ಸಂಬಂಧಿಸಿದಂತೆ ಹಲವು ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಅನಧಿಕೃತವಾಗಿ ಅಳವಡಿಸಿರುವ ಇವುಗಳನ್ನು ಬಿಬಿಎಂಪಿಯವರು ಶನಿವಾರ ತೆರವುಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.