ಬೆಂಗಳೂರು: ಶನಿವಾರ ಆರಂಭಗೊಳ್ಳಲಿರುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ಅರಮನೆ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗಿದೆ. ಸ್ಪರ್ಧೆಯ ಸಮಯದಲ್ಲಿ ಯಾವುದೇ ಗೊಂದಲ, ವಿವಾದಗಳು ಉಂಟಾಗದಂತೆ ಮಾಡಲು ‘ಲೇಸರ್ ಬೀಮ್ ನೆಟ್‌ವರ್ಕ್ ಸಿಸ್ಟಂ ವಿತ್ ಎಲೆಕ್ಟ್ರಾನಿಕ್ ಟೈಮಿಂಗ್ಸ್’ ಅಳವಡಿಸಲಾಗಿದೆ.
ಗುರಿ ಮುಟ್ಟಿದ ಕೂಡಲೇ ಲೇಸರ್ ದೀಪ ಉರಿಯುವುದಲ್ಲದೇ ಎಷ್ಟು ಸೆಕೆಂಡ್ಸ್‌ನಲ್ಲಿ ತಲುಪಿವೆ ಎಂಬುದನ್ನೂ ಅದು ತೋರಿಸುತ್ತದೆ. ಇದರಿಂದ ಸೋತವರಿಗೂ ತಮ್ಮ ಕೋಣಗಳು ಎಷ್ಟು ವೇಗವಾಗಿ ಓಡಿವೆ ಎಂಬುದು ಗೊತ್ತಾಗಲಿದೆ ಎಂದು ಕಂಬಳ ತಜ್ಞ ಗುಣಪಾಲ ಕಡಂಬ ಅವರು ಕಂಬಳದ ತಾಂತ್ರಿಕ ವಿವರಗಳನ್ನು ನೀಡಿದರು.
ನೇಗಿಲು (ಹಿರಿಯ ಮತ್ತು ಕಿರಿಯ), ಹಗ್ಗ (ಹಿರಿಯ ಮತ್ತು ಕಿರಿಯ), ಅಡ್ಡಹಲಗೆ ಮತ್ತು ಕಣೆ ಹಲಗೆ ಹೀಗೆ ಒಟ್ಟು ಆರು ವಿಭಾಗಳಲ್ಲಿ ಸ್ಪರ್ಧೆಗಳು ಇರಲಿವೆ. 6 ಅಥವಾ ಅದಕ್ಕಿಂತ ಕಡಿಮೆ ಹಲ್ಲು ಇರುವ ಕೋಣಗಳನ್ನು ಕಿರಿಯ ವಿಭಾಗವಾಗಿ ಗುರುತಿಸಲಾಗುತ್ತದೆ. ಎಲ್ಲ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕೋಣಗಳಿಗೆ 16 ಗ್ರಾಂ ಚಿನ್ನ ₹ 1 ಲಕ್ಷ, ದ್ವಿತೀಯ ಸ್ಥಾನಿಗಳಿಗೆ 8 ಗ್ರಾಂ ಚಿನ್ನ ಮತ್ತು ₹ 50 ಸಾವಿರ, ತೃತೀಯ ಸ್ಥಾನಿಗಳಿಗೆ 4 ಗ್ರಾಂ ಚಿನ್ನ ಮತ್ತು ₹ 25 ಸಾವಿರ ಬಹುಮಾನ ದೊರೆಯಲಿದೆ.
ಜೋಡುಕರೆಯಲ್ಲಿ 6.5 ಅಡಿ ಎತ್ತರದ ಮತ್ತು 7.5 ಅಡಿ ಎತ್ತರದ ನಿಶಾನೆಗಳನ್ನು ಕಟ್ಟಿರುತ್ತಾರೆ. ಕಣೆ ಹಲಗೆಯ ಓಟದ ಸಂದರ್ಭದಲ್ಲಿ ಅಷ್ಟು ಎತ್ತರಕ್ಕೆ ನೀರು ಚಿಮ್ಮಿಸಬೇಕು. 7.5 ಅಡಿ ನಿಶಾನೆಗೆ ನೀರು ಚಿಮ್ಮಿಸಿದ ಎಲ್ಲರಿಗೂ ಪ್ರಥಮ ಬಹುಮಾನ ದೊರೆಯಲಿದೆ. ಒಂದು ಜೋಡಿ ಎಷ್ಟು ಬಾರಿ ನಿಶಾನೆಗೆ ನೀರು ಹಾರಿಸಿದರೂ ಒಂದೇ ಪ್ರಶಸ್ತಿ ಸಿಗಲಿದೆ. 6.5 ಅಡಿ ಹಾರಿಸಿದವರು ಮುಂದಿನ ಓಟದಲ್ಲಿ 7.5 ಅಡಿ ಹಾರಿಸಲು ಪ್ರಯತ್ನಿಸಲು ಅವಕಾಶ ಇರಲಿದೆ.
ಉದ್ಭಾಟನೆಗೆ ಸಜ್ಜು: ಕಂಬಳದ ಜೋಡು‘ಕರೆ’ (ಟ್ರ್ಯಾಕ್)ಗಳಿಗೆ ‘ರಾಜ– ಮಹಾರಾಜ’ ಎಂದು ಹೆಸರು ಇಡಲಾಗಿದೆ. ಕಾರ್ಯಕ್ರಮದ ಮುಖ್ಯವೇದಿಕೆಗೆ ಪುನೀತ್ ರಾಜಕುಮಾರ್ ಹೆಸರು, ಸಾಂಸ್ಕೃತಿಕ ವೇದಿಕೆಗೆ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ. ನ.25ರಂದು ಬೆಳಿಗ್ಗೆ 10.30ಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ‘ಕರೆ’ಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಪ್ರಾಯೋಗಿಕ ಓಟಗಳು, ಲೀಗ್ ಮಾದರಿಯ ಓಟಗಳು ನಡೆಯಲಿವೆ. ಈ ಓಟಗಳಲ್ಲಿ ವಿಜೇತ ಕೋಣಗಳು ಸಂಜೆಯ ಹೊತ್ತಿಗೆ ಪ್ರಮುಖ ಸ್ಪರ್ಧೆಗೆ ಅಣಿಯಾಗಲಿವೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಮಾಹಿತಿ ನೀಡಿದರು.
ಶನಿವಾರ ಮಧ್ಯರಾತ್ರಿವರೆಗೂ ಕಂಬಳದ ಓಟಗಳು ನಡೆಯಲಿವೆ. ಅಂತಿಮ ಸ್ಪರ್ಧೆಗಳು ಭಾನುವಾರ ನಡೆಯಲಿವೆ ಎಂದು ತಿಳಿಸಿದರು.
ಕರಾವಳಿಯ ಯಕ್ಷಗಾನ, ಹುಲಿವೇಷ ಕುಣಿತ, ಕಂಗೀಲು, ಆಟಿ ಕಳೆಂಜ ಸಹಿತ ತುಳುನಾಡಿನ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಬೆಂಗಳೂರಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದರು.
ನಿಯಮ ಮೀರಲ್ಲ: ‘ಪ್ರಾಣಿಗಳಿಗೆ ಯಾವುದೇ ಹಿಂಸೆ ಮಾಡಬಾರದು ಎಂದು ಪಶುಸಂಗೋಪನಾ ಇಲಾಖೆ, ಪ್ರಾಣಿ ದಯಾ ಸಂಘಗಳು ತಿಳಿಸಿವೆ. ಕಂಬಳದಲ್ಲಿ ಯಾವುದೇ ಕ್ರೌರ್ಯಗಳು ಇರುವುದಿಲ್ಲ. ಕೈಯಲ್ಲಿ ಬೆತ್ತ ಇಲ್ಲದೇ ಇದ್ದರೆ ಓಡುವುದಿಲ್ಲ. ಒಂದೆರಡು ಏಟು ನೀಡುವುದಕ್ಕೂ ಕ್ರೌರ್ಯಕ್ಕೂ ವ್ಯತ್ಯಾಸ ಇದೆ. ನಾವು ಯಾವುದೇ ನಿಯಮಗಳನ್ನು ಮೀರುವುದಿಲ್ಲ’ ಎಂದು ಸಂಘಟಕರು ಸ್ಪಷ್ಟಪಡಿಸಿದರು.
ವಿವಿಧ ಮಳಿಗೆ: ಕಂಬಳದಲ್ಲಿ 180ಕ್ಕೂ ಹೆಚ್ಚು ಮಳಿಗೆಗಳು. ಹಲಸಿನ ಹಪ್ಪಳದಿಂದ ಕೋರಿ (ಕೋಳಿ)ರೊಟ್ಟಿಯವರೆಗೆ ಕರಾವಳಿಯ ಸಾಂಪ್ರದಾಯಿಕ ತಿನಿಸುಗಳು ಈ ಮಳಿಗೆಗಳಲ್ಲಿವೆ. ಭೂತದ ಅಣಿ ಸೇರಿದಂತೆ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ವಸ್ತು ಪ್ರದರ್ಶನ ನಡೆಯಲಿದೆ.
ಉಚಿತ ಪ್ರವೇಶ
ಕಂಬಳ ವೀಕ್ಷಿಸಲು ಉಚಿತ ಪ್ರವೇಶ ಇರಲಿದೆ. ಹಾಗಾಗಿ ಲಕ್ಷಾಂತರ ಕಂಬಳ ಪ್ರೇಮಿಗಳು ಬರುವ ನಿರೀಕ್ಷೆ ಇದೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳಲ್ಲಿ ಕಂಬಳ ನಿರಂತರವಾಗಿ ನಡೆಯಲಿರುವುದರಿಂದ ಕಂಬಳ ಪ್ರೇಮಿಗಳು ಯಾವುದೇ ಸಮಯಕ್ಕೆ ಬಂದು ವೀಕ್ಷಿಸಲು ಅವಕಾಶವಿದೆ. ಕಂಬಳವನ್ನು ನೇರ ವೀಕ್ಷಿಸಲು 7 ಸಾವಿರ ಜನರು ಕುಳಿತುಕೊಳ್ಳಬಲ್ಲ ಗ್ಯಾಲರಿಯನ್ನು ಕರೆಗಳ ಇಕ್ಕೆಲಗಳಲ್ಲಿ ನಿರ್ಮಿಸಲಾಗಿದೆ. 1.5 ಲಕ್ಷ ಜನರಿಗೆ ‘ಕರಾವಳಿ’ ಶೈಲಿಯ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಮಲೆಕುಡಿಯರ ಹೆಸರಲ್ಲಿ ಕೋಣ
ಕಾಡಂಚಿನಲ್ಲಿ ಬದುಕುತ್ತಿರುವ ಮಲೆಕುಡಿಯರ ಹೆಸರಲ್ಲಿ ಒಂದು ಜೋಡಿ ಕೋಣ ಓಡಲಿದೆ. ಡಿಕ್ಲರೇಶನ್ ಕಾಲದಲ್ಲಿ ಭೂಮಿ ಪಡೆದ ನಾರಾಯಣ ಮಲೆಕುಡಿಯ ಅವರು ಕೋಣಗಳನ್ನು ಸಾಕಿ ತನ್ನ ಮನೆ ಸಮೀಪದ ಕಂಬಳದಲ್ಲಷ್ಟೇ ಓಡಿಸುತ್ತಿದ್ದರು. ಮಂಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಅವರು ಅದನ್ನು ನೋಡಿ ಹುರಿದುಂಬಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ‘ಬೀರ ಮಲೆ’ ಹೆಸರಿನ ಕೋಣಗಳು ಓಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.