ಬೆಂಗಳೂರು: ಜಯದೇವ ಆಸ್ಪತ್ರೆಯ ಶೌಚಾಲಯದಲ್ಲಿ ಮೊಬೈಲ್ ಫೋನ್ ಇಟ್ಟು ಮಹಿಳೆಯರ ಖಾಸಗಿ ಅಂಗಾಂಗ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಆರೋಪಿಯನ್ನು ತಿಲಕ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಯದೇವ ಆಸ್ಪತ್ರೆಯ ವಾರ್ಡ್ ಹೆಲ್ಪರ್ ಯಲ್ಲಾಲಿಂಗ ಬಂಧಿತ ಆರೋಪಿ.
ಜಯದೇವ ಆಸ್ಪತ್ರೆಯಲ್ಲಿ ಐದು ವರ್ಷದಿಂದ ವಾರ್ಡ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಅಕ್ಟೋಬರ್ 31ರಂದು ಬೆಳಿಗ್ಗೆ 8.30ರ ಸುಮಾರಿಗೆ ಮಹಿಳೆ ಆಸ್ಪತ್ರೆಗೆ ಬಂದು ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯ ನೆಲಮಹಡಿಯಲ್ಲಿ ಇರುವ ಶೌಚಾಲಯಕ್ಕೆ ಮಹಿಳೆ ತೆರಳಿದ್ದರು. ಶೌಚಾಲಯದ ಗೋಡೆಯ ಮೇಲೆ ಮೊಬೈಲ್ ಪತ್ತೆಯಾಗಿತ್ತು. ಆ ಮೊಬೈಲ್ ಪರಿಶೀಲಿಸಿದಾಗ ಆಕೆಯ ಖಾಸಗಿ ಅಂಗಾಂಗವಿದ್ಧ ವಿಡಿಯೊ ರೆಕಾರ್ಡ್ ಆಗಿತ್ತು. ಆ ಮೊಬೈಲ್ ತೆಗೆದುಕೊಂಡು ಮಹಿಳೆ ಹೊರಗೆ ಬಂದಿದ್ದರು. ಅದೇ ವೇಳೆ ಆರೋಪಿ ಬಂದು, ಮೊಬೈಲ್ ಕೊಡುವಂತೆ ಕೇಳಿಕೊಂಡಿದ್ದ. ಅದೇ ಸಮಯಕ್ಕೆ ಆಸ್ಪತ್ರೆಯ ಬೇರೆ ಬೇರೆ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಬಂದು ಆರೋಪಿಯನ್ನು ಹಿಡಿದುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಮಹಿಳೆಯರ ಖಾಸಗಿ ಅಂಗಾಂಗ ಸೆರೆ ಹಿಡಿಯಲು ಶೌಚಾಲಯದ ಗೋಡೆಯಲ್ಲಿ ಮೊಬೈಲ್ ಇಟ್ಟಿದ್ದಾಗಿ ಹೇಳಿಕೆ ನೀಡಿದ್ದಾನೆ. ಮೊಬೈಲ್ ಪರಿಶೀಲನೆ ನಡೆಸಲಾಗಿದ್ದು, ಹಲವು ವಿಡಿಯೊಗಳು ಅದರಲ್ಲಿ ಇದ್ದವು’ ಎಂದು ಪೊಲೀಸರು ಹೇಳಿದರು.
ಅಮಾನತು: ಯಲ್ಲಾಲಿಂಗ ಅವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ದೂರು ದಾಖಲಾದ ಬಳಿಕ ಸಂಸ್ಥೆಯ ಪೋಷ್ ಸಮಿತಿ ಎದುರು ಅವರನ್ನು ವಿಚಾರಣೆಗೆ ಒಳಪಡಿಸಿ, ಅಮಾನತು ಮಾಡಲಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.