ADVERTISEMENT

ಕೋರಮಂಗಲ ಅಗ್ನಿ ಅವಘಡ: ಚಾವಣಿಯಲ್ಲಿ 10 ಸಿಲಿಂಡರ್ ಸಂಗ್ರಹ; ಸೋರಿಕೆಯಿಂದ ಸ್ಫೋಟ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2023, 23:30 IST
Last Updated 19 ಅಕ್ಟೋಬರ್ 2023, 23:30 IST
ಮಡ್‌ಪೈಪ್ ಕೆಫೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದರಿಂದ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದ ತಗಡುಗಳು – ಪ್ರಜಾವಾಣಿ ಚಿತ್ರ
ಮಡ್‌ಪೈಪ್ ಕೆಫೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದರಿಂದ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದ ತಗಡುಗಳು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋರಮಂಗಲ ಬಳಿಯ ತಾವರಕೆರೆ ಜಂಕ್ಷನ್‌ನಲ್ಲಿರುವ ಮಡ್‌ಪೈಪ್‌ ಕೆಫೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ‘ಕಟ್ಟಡದ ಚಾವಣಿಯಲ್ಲಿ ಅಕ್ರಮವಾಗಿ 10 ಸಿಲಿಂಡರ್ ಸಂಗ್ರಹಿಸಿಡಲಾಗಿತ್ತು. ಕೆಲ ಸಿಲಿಂಡರ್‌ಗಳಿಂದ ಅಡುಗೆ ಅನಿಲ ಸೋರಿಕೆಯಾಗಿದ್ದೇ ಅವಘಡಕ್ಕೆ ಕಾರಣ’ ಎಂಬ ಸಂಗತಿ ಗೊತ್ತಾಗಿದೆ.

ಬುಧವಾರ ಮಧ್ಯಾಹ್ನ ಅವಘಡ ಸಂಭವಿಸುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಸ್ಥಳದಲ್ಲಿ ಸಿಕ್ಕಿರುವ ಅವಶೇಷಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಕೆಫೆಯ ಸಿಬ್ಬಂದಿ ಹಾಗೂ ಸ್ಥಳೀಯರಿಂದಲೂ ಹೇಳಿಕೆ ಪಡೆದುಕೊಂಡಿದ್ದಾರೆ.

‘ಕಟ್ಟಡದ ಚಾವಣಿಯಲ್ಲಿ ತಗಡುಗಳನ್ನು ಹಾಕಿ ಅವೈಜ್ಞಾನಿಕವಾದ ರೂಫ್‌ಟಾಪ್ ರೀತಿಯಲ್ಲಿ ಮಡ್‌ಪೈಪ್‌ ಕೆಫೆ ನಿರ್ಮಿಸಲಾಗಿತ್ತು. ಕೆಫೆಗೆ ಮೆಟ್ಟಿಲು ಮೂಲಕ ಸಂಪರ್ಕ ಕಲ್ಪಿಸಲಾಗಿತ್ತು. ಮಳೆ ಬಂದ ಸಂದರ್ಭದಲ್ಲಿ ಚಾವಣಿಯಿಂದ ಮೆಟ್ಟಿಲು ಭಾಗದಲ್ಲಿ ಮಳೆ ನೀರು ಬೀಳಬಾರದೆಂದು, ಹೊದಿಕೆ ಮಾದರಿಯಲ್ಲಿ ಸಣ್ಣದೊಂದು ಕೊಠಡಿ ನಿರ್ಮಿಸಲಾಗಿತ್ತು’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಚಾವಣಿಯ ಕೊಠಡಿಯ ಮೇಲ್ಭಾಗದಲ್ಲಿ 10 ಸಿಲಿಂಡರ್‌ಗಳನ್ನು ಜೋಡಿಸಿಡಲಾಗಿತ್ತು. ಅದೇ ಕೊಠಡಿ ಪಕ್ಕದಲ್ಲಿ ಅಡುಗೆ ಮಾಡಲಾಗುತ್ತಿತ್ತು. ಕೊಠಡಿ ಮೇಲ್ಭಾಗದಲ್ಲಿದ್ದ ಸಿಲಿಂಡರ್‌ಗಳಿಂದ ಪೈಪ್‌ ಮೂಲಕ ಅಡುಗೆ ಸ್ಥಳಕ್ಕೆ ಅನಿಲದ ಪೂರೈಕೆ ಇತ್ತು. ಚಾವಣಿಯಲ್ಲಿ ಸಂಗ್ರಹಿಸಿದ್ದ 10 ಸಿಲಿಂಡರ್‌ಗಳ ಪೈಕಿ ಕೆಲ ಸಿಲಿಂಡರ್‌ಗಳಿಂದ ಅನಿಲ ಸೋರಿಕೆಯಾಗಿದ್ದೇ ಸ್ಫೋಟಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ತಿಳಿಸಿದರು.

ಅಡುಗೆ ತಯಾರಿ ವೇಳೆ ಸ್ಫೋಟ: ‘ಬುಧವಾರ ಬೆಳಿಗ್ಗೆ ಕೆಫೆಗೆ ಬಂದಿದ್ದ ಸಿಬ್ಬಂದಿ, ಕೆಫೆ ಸ್ವಚ್ಛಗೊಳಿಸಿದ್ದರು. ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ಪ್ರೇಮ್ ಸಿಂಗ್, ಅಡುಗೆ ತಯಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು’ ಎಂದು ಅಧಿಕಾರಿ ಹೇಳಿದರು.

‘ಮಧ್ಯಾಹ್ನ ಅಡುಗೆ ಅನಿಲ ಸೋರಿಕೆಯಾಗಿ ಅಡುಗೆ ಮನೆಯಲ್ಲಿ ಸ್ಫೋಟ ಸಂಭವಿಸಿತ್ತು. ಬೆಂಕಿ ಹೆಚ್ಚಾಗಿ ಉರಿಯಲಾರಂಭಿಸಿತ್ತು. ಚಾವಣಿಯ ಕೊಠಡಿ ಮೇಲ್ಭಾಗದಲ್ಲಿದ್ದ 5 ಸಿಲಿಂಡರ್‌ಗಳು ಹಾರಿ ಬಿದ್ದಿದ್ದವು. ಕೆಲ ನಿಮಿಷಗಳಲ್ಲಿ ಬೆಂಕಿ ಕೆನ್ನಾಲಗೆ ಹೆಚ್ಚಾಗಿ, ಕೆಫೆಯಲ್ಲಿದ್ದ ಎಲ್ಲ ವಸ್ತುಗಳು ಸಂಪೂರ್ಣ ಸುಟ್ಟು ಹೋದವು.’

‘ಮೆಟ್ಟಿಲು ಬಳಿಯೇ ಬೆಂಕಿ ಹೊತ್ತಿಕೊಂಡಿದ್ದರಿಂದ, ಪ್ರೇಮ್‌ ಸಿಂಗ್‌ ಕೆಳಗೆ ಇಳಿದು ಬರಲು ಆಗಲಿಲ್ಲ. ಕಟ್ಟಡದ ತುದಿಯಲ್ಲಿ ನಿಂತು ಜಿಗಿದಿದ್ದ. ಇದರಿಂದ ಪ್ರೇಮ್‌ ಸಿಂಗ್‌ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ತಿಳಿಸಿದರು.

ಕೆಫೆಗೆ ಅನುಮತಿ: ‘ಕೆಫೆ ನಡೆಸಲು ಅನುಮತಿ ಪಡೆಯಲಾಗಿತ್ತು. ಆದರೆ, ಚಾವಣಿಯಲ್ಲಿ ರೂಫ್‌ಟಾಪ್ ನಿರ್ಮಾಣಕ್ಕೆ ಹಾಗೂ ಸಿಲಿಂಡರ್ ಸಂಗ್ರಹಕ್ಕೆ ಅನುಮತಿ ಇರಲಿಲ್ಲ. ಜೊತೆಗೆ, ರೆಸ್ಟೊರೆಂಟ್ ನಡೆಸುತ್ತಿರುವುದು ನಿಯಮಬಾಹಿರ. ಕೆಫೆ ಆಡಳಿತ ಮಂಡಳಿ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ಎಲ್ಲರನ್ನೂ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಈ ಕಟ್ಟಡದಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಜೊತೆಗೆ, ಹುಕ್ಕಾ ಬಾರ್ ನಡೆಸುತ್ತಿದ್ದ ಬಗ್ಗೆಯೂ ಮಾಹಿತಿ ಇದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದರು.

ಮಡ್‌ಪೈಪ್ ಕೆಫೆ ಇದ್ದ ಕಟ್ಟಡ
ಮಡ್‌ಪೈಪ್‌ ಕೆಫೆಯಲ್ಲಿ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಡುಗೆ ಅನಿಲ ಸಿಲಿಂಡರ್‌ಗಳು – ಪ್ರಜಾವಾಣಿ ಚಿತ್ರ

ಬಹು ಮಹಡಿ ಕಟ್ಟಡದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು:

  • ರಸ್ತೆಗೂ ಬಹುಮಹಡಿ ಕಟ್ಟಡಕ್ಕೂ 12 ಮೀಟರ್ ಅಂತರವಿರಬೇಕು

  • ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗವಿರಬೇಕು

  • ಚಾವಣಿಯಲ್ಲಿ ಮತ್ತು ನೆಲ ಅಂತಸ್ತಿನಲ್ಲಿ ನೀರಿನ ಟ್ಯಾಂಕ್ ಇರಬೇಕು

  • ನೆಲ ಅಂತಸ್ತು ವಾಹನ ನಿಲುಗಡೆಗೆ ಮಾತ್ರ ಬಳಕೆಯಾಗಬೇಕು

  • ಕಟ್ಟಡದಲ್ಲಿ ಕಡ್ಡಾಯವಾಗಿ ಒಬ್ಬ ಅಗ್ನಿ ಸುರಕ್ಷತಾ ಅಧಿಕಾರಿ ಇರಬೇಕು

  • ನೀರು ಕೊಳವೆ ಎಲೆಕ್ಟ್ರಿಕ್ ಅಲಾರಾಂ ಹಾಗೂ ಅಗ್ನಿ ನಂದಕ ಸಲಕರಣೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು

  • ಕಟ್ಟಡದಲ್ಲಿ ಕನಿಷ್ಠ 2 ಕಡೆ ಮೆಟ್ಟಿಲು ಲಿಫ್ಟ್ ಇರುವುದು ಕಡ್ಡಾಯ

  • ಅಗ್ನಿ ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಆಗಾಗ ಪ್ರಾತ್ಯಕ್ಷಿಕೆ ನೀಡಬೇಕು

  • ನಿರ್ಗಮನ ದ್ವಾರಗಳು ಕತ್ತಲಲ್ಲೂ ಗೋಚರವಾಗುವಂತೆ ಇರಬೇಕು (ಆಧಾರ: ರಾಷ್ಟ್ರೀಯ ಕಟ್ಟಡ ನೀತಿ)

ಗೃಹ ಸಚಿವ ಭೇಟಿ 
ಸ್ಫೋಟ ಸಂಭವಿಸಿದ್ದ ಮಡ್‌ಪೈಪ್ ಕೆಫೆ ಸ್ಥಳಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರು ಗುರುವಾರ ಭೇಟಿ ನೀಡಿದರು. ಸ್ಫೋಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ‘ಅನುಮತಿ ನಿಯಮಗಳನ್ನು ಉಲ್ಲಂಘಿಸಿ ಕೆಫೆ ನಿರ್ವಹಣೆ ಮಾಡಲಾಗುತ್ತಿತ್ತು. ಅನುಮತಿ ನೀಡಿದ್ದ ಬಿಬಿಎಂಪಿ ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸಿಲ್ಲ. ಅವರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ’ ಎಂದು ಜಿ. ಪರಮೇಶ್ವರ ಹೇಳಿದರು. ಅಗ್ನಿಶಾಮಕ ದಳ ಹಾಗೂ ತುರ್ತುಸೇವೆಗಳ ಇಲಾಖೆಯ ಡಿಜಿಪಿ ಕಮಲ್ ಪಂತ್ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪಬ್‌ ಬಾರ್ ಆ್ಯಂಡ್‌ ರೆಸ್ಟೊರೆಂಟ್ ಪರಿಶೀಲನೆ 
ಮಡ್ ಪೈಪ್ ಕೆಫೆ ಅವಘಡ ಮರುಕಳಿಸದಂತೆ ಕ್ರಮ ಕೈಗೊಂಡಿರುವ ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.  ನಗರದಲ್ಲಿರುವ ಪಬ್ ಬಾರ್‌ ಆ್ಯಂಡ್ ರೆಸ್ಟೊರೆಂಟ್ ಹೋಟೆಲ್ ಹಾಗೂ ಜನರು ಸೇರುವ ಸ್ಥಳಗಳಲ್ಲಿ ಅಧಿಕಾರಿಗಳು ಗುರುವಾರ ಪರಿಶೀಲಿಸಿದರು.  ‘ಎಂ.ಜಿ.ರಸ್ತೆ ಬ್ರಿಗೇಡ್ ರಸ್ತೆ ಚರ್ಚ್‌ಸ್ಟ್ರೀಟ್ ಕೋರಮಂಗಲ ಎಚ್‌ಎಸ್‌ಆರ್ ಲೇಔಟ್ ಇಂದಿರಾನಗರ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಲಾಯಿತು. ಕೆಲ ಪಬ್‌ ಹಾಗೂ ಬಾರ್‌ ಆ್ಯಂಡ್ ರೆಸ್ಟೊರೆಂಟ್‌ಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದಿರುವುದು ಗಮನಕ್ಕೆ ಬಂತು. ಈ ಸಂಬಂಧ ನೋಟಿಸ್ ನೀಡಿ ಸುರಕ್ಷತಾ ಕ್ರಮಗಳ ಅಳವಡಿಕೆಗೆ ಗಡುವು ನೀಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ‘ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡ (1+4) ಹಾಗೂ 15 ಮೀಟರ್‌ಗಿಂತ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಅಗ್ನಿಶಾಮಕ ಸೇವೆಗಳ ಕಾಯ್ದೆ–1964 ಹಾಗೂ ರಾಷ್ಟ್ರೀಯ ಕಟ್ಟಡ ನೀತಿಯಲ್ಲಿ (ಎನ್‌ಬಿಸಿ) ಉಲ್ಲೇಖಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.