ADVERTISEMENT

ಕೆ.ಆರ್.ಪುರ: ಪ್ರತಿ ಮಳೆಯಲ್ಲೂ ಸಂಚಾರಕ್ಕೆ ತೊಡಕು

ಬೈರತಿ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ವಾಹನ ಸವಾರರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 23:45 IST
Last Updated 3 ಆಗಸ್ಟ್ 2024, 23:45 IST
ಮಳೆ ಬಂದಾಗ ರಾಂಪುರ ಆದೂರು ಮುಖ್ಯರಸ್ತೆ ಜಲವೃತವಾಗಿರುವುದು
ಮಳೆ ಬಂದಾಗ ರಾಂಪುರ ಆದೂರು ಮುಖ್ಯರಸ್ತೆ ಜಲವೃತವಾಗಿರುವುದು   

ಕೆ.ಆರ್.ಪುರ: ಬೈರತಿ ಗ್ರಾಮದಿಂದ ಆವಲಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿ ಮದ್ರಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಪ್ರತಿ ಮಳೆಯಲ್ಲೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.

ಚರಂಡಿ ವ್ಯವಸ್ಥೆ ಇಲ್ಲದೆ, ರಸ್ತೆ ಗುಂಡಿಗಳಿಂದ ಕೂಡಿದ್ದರಿಂದ ಪ್ರತಿ ಬಾರಿ ಮಳೆ ಬಂದಾಗ ನೀರು ನಿಂತು ಸಂಪರ್ಕ ಕಡಿತವಾಗುತ್ತದೆ. ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದೆ.

ಬಿಳಿಶಿವಾಲೆ, ರಾಂಪುರ, ಬಿದರಹಳ್ಳಿ, ಆದೂರು, ಆವಲಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿ ಮದ್ರಾಸ್ ರಸ್ತೆಗೆ ಈ ಮುಖ್ಯರಸ್ತೆ ಸಂಪರ್ಕ ಹೊಂದಿದೆ. ಹೆಣ್ಣೂರು, ಬೈರತಿ, ಹೊರಮಾವು, ಬಾಣಸವಾಡಿ, ಹೊಸಕೋಟೆ ಕಡೆಗೆ ಸಂಪರ್ಕ ಕಲ್ಪಿಸಲೂ ಪ್ರಮುಖ ಕೊಂಡಿಯಾಗಿದೆ. ಪ್ರತಿನಿತ್ಯ ಈ ರಸ್ತೆಯ ಮೂಲಕ ಸಾವಿರಾರು ವಾಹನಗಳು ಸಂಚರಿಸುತ್ತಿವೆ. 

ADVERTISEMENT

‘ಆದೂರು ಬಳಿ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚರಿಸಲು ಪ್ರಯಾಪಡುವಂತಾಗಿದೆ. ಇಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗೋದಾಮುಗಳು, ಶಾಲೆ, ಕಾಲೇಜುಗಳು, ಕಾರ್ಖಾನೆಗಳು ಹೆಚ್ಚಾಗಿವೆ. ವಾಹನ ಸವಾರರು, ಬೃಹತ್ ಪ್ರಮಾಣದ ಲಾರಿಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಆದರೆ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಗಮನಿಸುತ್ತಿಲ್ಲ’ ಎಂದು ವ್ಯಾಪಾರಿ ರಮೇಶ್ ಕುಮಾರ್ ದೂರಿದರು.

‘ಪ್ರತಿ ನಿತ್ಯ ಹೊಸಕೋಟೆಯಿಂದ ಕೊತ್ತನೂರಿನ ಕ್ರಿಸ್ತು ಜಯಂತಿ ಕಾಲೇಜಿಗೆ ಇದೇ ರಸ್ತೆಯಲ್ಲಿ ಓಡಾಡುತ್ತೇನೆ. ಪ್ರತಿ ಸಲ ಮಳೆಯಾದಾಗಲೂ ರಸ್ತೆಯಲ್ಲಿ ಮೂರು ಅಡಿಯಷ್ಟು ನೀರು ನಿಲ್ಲುತ್ತದೆ. ಅನೇಕ ವಾಹನಗಳು ಕೆಟ್ಟು ನಿಲ್ಲುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿರುತ್ತದೆ’ ಎಂದು ವಿದ್ಯಾರ್ಥಿ ಆದಿತ್ಯ ಹೇಳಿದರು.

‘ರಸ್ತೆ ನಿರ್ಮಾಣದ ಬಗ್ಗೆ ಬಿದರಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ, ‘ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ, ಲೋಕೋಪಯೋಗಿ ಇಲಾಖೆಗೆ ತಿಳಿಸಿ’ ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ‘ಮೂರು ವರ್ಷಗಳಿಂದ ಕಾಮಗಾರಿ ನಡೆಸುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆಯಲ್ಲಿ ಹೆಚ್ಚಿನ ಅನುದಾನವಿಲ್ಲ’ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಆದಷ್ಟು ಬೇಗನೆ ರಸ್ತೆ ಕಾಮಗಾರಿ ಕೈಗೊಂಡು ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಕಾರ್ಮಿಕ ಘಟಕದ ಅಧ್ಯಕ್ಷ ಕಾವೇರಪ್ಪ ಎಚ್ಚರಿಸಿದರು.

ರಾಂಪುರ ಆದೂರು ಮುಖ್ಯರಸ್ತೆಯಲ್ಲಿ ಮಳೆ ನೀರಿನಲ್ಲಿ ಆಟೊ ಕೆಟ್ಟು ನಿಂತಾಗ ಸವಾರರು ಪರದಾಡಿದರು.
ರಾಂಪುರ ಕ್ರಾಸ್ ಬಳಿ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.