ADVERTISEMENT

ಬೆಂಗಳೂರು ಕೃಷಿ ಮೇಳ | ಸೇಬು, ಕೇಸರಿಗೆ ಮನಸೋತವರು..

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 23:22 IST
Last Updated 15 ನವೆಂಬರ್ 2024, 23:22 IST
ಟ್ರೇನಲ್ಲಿರುವ ಕೇಸರಿ ಗೆಡ್ಡೆ ಪ್ರದರ್ಶಿಸಿದ ಲೋಕೇಶ್
ಟ್ರೇನಲ್ಲಿರುವ ಕೇಸರಿ ಗೆಡ್ಡೆ ಪ್ರದರ್ಶಿಸಿದ ಲೋಕೇಶ್   

ಬೆಂಗಳೂರು: ಎರಡು ದಿನಗಳಲ್ಲಿ ಸೇಬಿನ ಸಸಿ, ಕೇಸರಿ ಗೆಡ್ಡೆಗಳ ಮಾರಾಟ ಚೆನ್ನಾಗಿದೆ. ಕರ್ನಾಟಕದಲ್ಲೂ ಸೇಬು ಬೆಳೆಯಬಹುದೆಂದು ಖಚಿತವಾದ ಮೇಲೆ, ಅನೇಕ ರೈತರು ತೋಟದಲ್ಲಿ, ಕೆಲವು ನಾಗರಿಕರು ಮನೆಯಂಗಳದಲ್ಲಿ ಸೇಬು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ..!

ಮಾಲೂರಿನ ವೊಲಿವಿನ್‌ ಅಗ್ರಿವೋಹಂ ಕಂಪನಿಯ ಆರ್‌. ಲೋಕೇಶ್, ಸೇಬಿನ ಸಸಿಯೊಂದನ್ನು ಗ್ರಾಹಕರ ಕೈಗಿಡುತ್ತಾ, ಹೀಗೆ ಮಾತಿಗಿಳಿದರು. ಅಷ್ಟರಲ್ಲೇ ‘ಕೇಸರಿ ನಮ್ಮ ವಾತಾವರಣದಲ್ಲಿ ಬೆಳೆಯುತ್ತಾ’ ಅಂತ ‘ಕೇಳುತ್ತಾ, ಒಂದೆರಡು ಕೇಸರಿ ಗೆಡ್ಡೆ ಕೊಡಿ’ ಎಂದು ಕೊಂಡುಕೊಂಡರು ಸಾರ್ವಜನಿಕರೊಬ್ಬರು.

‘ನಿನ್ನೆಯಿಂದಲೂ ಜನರು ಹೀಗೆ ಸೇಬಿನ ಗಿಡ, ಕೇಸರಿ ಗೆಡ್ಡೆಗಳನ್ನು ಖರೀದಿಸುತ್ತಿದ್ದಾರೆ’ ಎಂದು ನಗೆ ಬೀರಿದರು ಲೋಕೇಶ್.

ADVERTISEMENT

‘ಕಾಶ್ಮೀರದಿಂದ ಕೇಸರಿ ಗೆಡ್ಡೆ ತರಿಸಿ, ಏರೋಫೋನಿಕ್‌ ತಂತ್ರಜ್ಞಾನದಲ್ಲಿ ಬೆಳೆಯಲು ಆರಂಭಿಸಿದೆ. ಅದು ಯಶಸ್ವಿಯಾದ ಮೇಲೆ, ಗೆಡ್ಡೆಗಳನ್ನು ಮಾರಾಟ ಮಾಡುತ್ತಿದ್ದೇನೆ’ ಎಂದು ಅವರು ವಿವರಿಸಿದರು.

‘ಕೇಸರಿ ಜೊತೆಗೆ, ಅನ್ನ, ಎಚ್‌ಆರ್‌ ಎಂ9, ರೆಡ್‌ ಗೋಲ್ಡ್‌ ಮೂರು ತಳಿಯ ಸೇಬಿನ ಸಸಿಗಳನ್ನೂ ಮಾರಾಟ ಮಾಡುತ್ತಿದ್ದೇನೆ. ಹೊಸಕೋಟೆ, ಸಿರಾ, ಕೊಡಗಿನ ಭಾಗದಲ್ಲಿ ರೈತರು ಸೇಬು ಬೆಳೆದು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಸೇಬನ್ನು ಜಮೀನಿನಲ್ಲಿ, ಮನೆಯಂಗಳದಲ್ಲಿ ಬೆಳೆಯುವ ಆಸಕ್ತರ ಸಂಖ್ಯೆ ಹೆಚ್ಚಿದೆ’ ಎಂದು ಹೇಳಿದರು.

‘ಎರಡು ದಿನಗಳಲ್ಲಿ 100 ಸೇಬಿನ ಸಸಿಗಳು, 200ಕ್ಕೂ ಹೆಚ್ಚು ಕೇಸರಿ ಗೆಡ್ಡೆಗಳು ಮಾರಾಟವಾಗಿವೆ’ ಎಂದು ಮಾಹಿತಿ ನೀಡಿದರು.

ಕೈತೋಟದಲ್ಲಿ ಬೆಳೆಯಲು ಸೇಬು ಗಿಡ ಖರೀದಿಸಿದ ಟಾಟಾ ನಗರ ನಿವಾಸಿ ಶ್ರೀಧರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.