ಬೆಂಗಳೂರು: ‘ಎಲ್ಲ ಕಥೆಗಳು, ಪುರಾಣಗಳು ಕಲ್ಪಿತವೇ ಆಗಿದ್ದು ದೇಶದಲ್ಲಿ 350 ರೀತಿಯಲ್ಲಿ ರಾಮಾಯಣಗಳಿವೆ. ಇಷ್ಟೊಂದು ಬಗೆಯಲ್ಲಿ ರಾಮಾಯಣಗಳು ಇರುವಾಗ ಯಾವುದು ನೈಜವೆಂದು ನಂಬುವುದು’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ಪ್ರಶ್ನೆಯನ್ನು ಎತ್ತಿದರು.
‘ಬೆಂಗಳೂರು ಸಾಹಿತ್ಯೋತ್ಸವ’ದಲ್ಲಿ ‘ಕನ್ನಡ ರಂಗಭೂಮಿಯಲ್ಲಿ ಸಾಮಾಜಿಕ ವಿಷಯಗಳು’ ಕುರಿತ ಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.
‘ನನ್ನ ಪ್ರಕಾರ ರಾಮನ ಕತೆ ದ್ರಾವಿಡ ನಾಡಿಗೆ ವಸಾಹತುಶಾಹಿ ಆಕ್ರಮಣವಾಗಿದೆ. ಅಲ್ಲಿ ಸೀತೆಯ ಕಥನವಿದೆ. ಆಕೆಗೆ ಬಂಡಾಯವೇಳಲು ಸಾಧ್ಯವಿರಲಿಲ್ಲ’ ಎಂದು ಚರ್ಚೆ ಆರಂಭಿಸಿದ ಅವರು, ಕುವೆಂಪು ಅವರು ಶ್ರೀರಾಮಾಯಣದರ್ಶನಂನಲ್ಲಿ ಬರೆದ ವಿಷಯಗಳನ್ನು ಪ್ರಸ್ತಾಪಿಸಿದರು.
‘ಕುವೆಂಪು ಅವರು ತಮ್ಮ ಕೃತಿಯಲ್ಲಿ ಅಗ್ನಿಪರೀಕ್ಷೆಗೆ ಸೀತೆಯ ಜೊತೆಗೆ ರಾಮನನ್ನೂ ಒಳಪಡಿಸಿದ್ದಾರೆ. ಅವರ ಸಮಯದಲ್ಲಿ ಆಗ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಗಾಂಧೀತತ್ವವಿದ್ದ ರಾಮಾಯಣದ ಈ ಬದಲಾವಣೆ ಸಾಧ್ಯವಾಯಿತು‘ ಎಂದು ವಿಶ್ಲೇಷಿಸಿದರು.
‘ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ವಿಷಯಗಳನ್ನು ಹೊರಹಾಕಿ ಹೊಸತನಕ್ಕೆ ತೆರೆದುಕೊಳ್ಳದಿದ್ದರೆ ರಂಗಭೂಮಿ ಪರಂಪರೆ ಸ್ಥಗಿತಗೊಳ್ಳುವವೂ ಅಪಾಯವಿದೆ. ಭಾರತ ಸ್ಥಗಿತಗೊಂಡ ಚಿಂತನೆಗಳ ಮೂಲಕ ಕೊಳೆತು ನಾರುತ್ತಿದೆ. ಜನರ ಮನಸ್ಸು ಸ್ಥಗಿತಗೊಂಡಿದೆ. ಚಲನಶೀಲ ಆಗಬೇಕಿದ್ದರೆ ಹೊಸ ಗಾಳಿ, ಬೆಳಕು ಬರಬೇಕಿದೆ. ಗೊರವರ ಪದ್ಯಗಳು, ಜುಂಜಪ್ಪನ ಪದ್ಯಗಳು ಮುಂಚೂಣಿಗೆ ಬಂದರೆ, ಆಡಳಿತಸೂತ್ರ ಹಿಡಿದಿರುವ ಪ್ರಭುತ್ವಗಳನ್ನು ಭಗ್ನಗೊಳಿಸಲು ಸಾಧ್ಯವಿದೆ. ನಮ್ಮ ಸಾಂಸ್ಕೃತಿಕ ಅಸ್ಮಿತೆಯೂ ಉಳಿಯುತ್ತದೆ’ ಎಂದು ಎಚ್ಚರಿಸಿದರು.
‘ಹೆಣ್ಣನ್ನು ಹೆಣ್ಣೇ ಕೊಲ್ಲುವ ಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಮಂಡ್ಯದಲ್ಲಿ ನಡೆದ ಹೆಣ್ಣುಭ್ರೂಣ ಹತ್ಯಾ ಪ್ರಕರಣವೇ ಸಾಕ್ಷಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಹತ್ಯೆಕೋರರಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.
‘ಯಾವುದನ್ನು ನಾವು ಸಾಮಾಜಿಕ ಸಮಸ್ಯೆಗಳು ಎಂದು ಕರೆಯುತ್ತೇವೆಯೋ ಅದೇ ಹಲವು ಮಂದಿಗೆ ಬದುಕು. ಬದುಕನ್ನು ಕಟ್ಟಿಕೊಟ್ಟಂಥವನ್ನು ಸಾಮಾಜಿಕ ಸಮಸ್ಯೆಗಳು ಎಂದು ಕರೆಯಲು ಸಾಧ್ಯವೇ? ಯಾರ ಬದುಕನ್ನೂ ಯಾರೂ ಅಗೌರವದಿಂದ ನೋಡಬಾರದು’ ಎಂದು ಜಂಗಮ ಕನೆಕ್ಟೀವ್‌ನ ಸದಸ್ಯ ಕೆ.ಪಿ. ಲಕ್ಷ್ಮಣ ಹೇಳಿದರು.
‘ಲೈಂಗಿಕ ಕಾರ್ಯಕರ್ತೆಯರಿಗೆ ಚಾಕುವಿನಿಂದ ಇರಿದು ಗಾಯಗೊಳಿಸುವ ಘಟನೆಗಳು ನಡೆಯುತ್ತಿವೆ. ನಾವು ಅದನ್ನು ಸಾಮಾಜಿಕ ಸಮಸ್ಯೆ ಎಂದು ಕರೆಯುತ್ತೇವೆ. ಅದೇ ಬದುಕಾಗಿರುವ ಅವರ ದೇಹದ ಮೇಲಾಗಿರುವ ಗಾಯಗಳನ್ನು ಅಳಿಸಿ ಹಾಕಲು ಸಾಧ್ಯವೇ’ ಎಂದು ಮಾರ್ಮಿಕವಾಗಿ ನುಡಿದರು.
ಎಲ್ಲ ನಾಟಕಗಳಲ್ಲೂ ಜಾತಿಯ ವಿಚಾರ ಪ್ರಸ್ತಾಪವಾಗುತ್ತಿದೆ. ಜಾತಿ ಬದುಕಿನ ಭಾಗವಾಗಿದೆ. ಜಾತಿ ಬದುಕಿನ ಭಾಗ ಆಗದಿದ್ದರೆ, ರಂಗದ ಮೇಲೂ ತರುತ್ತಿರಲಿಲ್ಲ.–ಕೆ.ಪಿ.ಲಕ್ಷ್ಮಣ, ಜಂಗಮ ಕೆನಕ್ಟೀವ್ ಸದಸ್ಯ
‘ಎಲ್ಲರ ಊರು ಬೆಂಗಳೂರು’
ಹಲವು ಗೋಷ್ಠಿಗಳ ನಡುವೆ ‘ನಮ್ಮ ಬೆಂಗಳೂರು’ ಗೋಷ್ಠಿ ಗಮನ ಸೆಳೆಯಿತು.
ಸಿಲಿಕಾನ್ ಸಿಟಿ, ಐಟಿ–ಬಿಟಿ ಖ್ಯಾತಿ ನಗರಿಯನ್ನು ಕೊಂಡಾಡಿದರು. ಇತರೆ ನಗರಕ್ಕೆ ಹೋಲಿಸಿದಾಗ ಬೆಂಗಳೂರಿನ ನಾಗರಿಕರಲ್ಲಿ ಸ್ವೀಕಾರ ಮನೋಭಾವ ಹೆಚ್ಚಿದೆ ಎಂದು ಗೋಷ್ಠಿಯಲ್ಲಿದ್ದವರು ಹೊಗಳಿದರು.
ಲೇಖಕಿ ಶೋಭಾ ನಾರಾಯಣ ಮಾತನಾಡಿ, ‘ನಾನು ವಿದೇಶದಲ್ಲಿದ್ದೆ. ಬೆಂಗಳೂರಿಗೆ ಬರಲು ಕಾರಣವಾಗಿದ್ದು ಇಲ್ಲಿನ ಸಂಸ್ಕೃತಿ ಹಾಗೂ ವಾತಾವರಣ. ಬೇರೆ ಕಡೆಯಿಂದ ಬಂದವರಿಗೂ ನಮ್ಮೂರು ಎನಿಸಬೇಕು. ಆ ರೀತಿ ವಾತಾವರಣ ಇಲ್ಲಿದೆ. ಎಲ್ಲರನ್ನೂ ಒಳಗೊಳ್ಳುವ ಊರು ಇದು. ಆತ್ಮೀಯತೆಯಿಂದ ಬರ ಮಾಡಿಕೊಳ್ಳುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಒಂದು ಪ್ರದೇಶಕ್ಕೆ ಸೀಮಿತವಾದ ಬುಡಕಟ್ಟು ಹೀರೊಗಳು’
‘ದೇಶಕ್ಕೆ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಬುಡಕಟ್ಟು ಸಮುದಾಯದ ನಾಯಕ ಬಿರ್ಸಾ ಮುಂಡಾ ಸೇರಿದಂತೆ ಅನೇಕ ಬುಡಕಟ್ಟು ನಾಯಕರ ಕೊಡಗೆ ಸ್ಮರಣೀಯ’ ಎಂಬ ಅಭಿಪ್ರಾಯ ಭಾರತದ ಬುಡಕಟ್ಟು ಹೀರೊಗಳ ಕುರಿತು ನಡೆದ ಗೋಷ್ಠಿಯಲ್ಲಿ ವ್ಯಕ್ತವಾಯಿತು. ದೇಶದ ಸ್ವಾತಂತ್ರ್ಯ ಹೋರಾಟಗಳಲ್ಲಿ ಹೋರಾಡಿದ್ದರೂ ಅವರ ಕುಟುಂಬಗಳಿಗೆ ಸಣ್ಣ ಸೌಲಭ್ಯಗಳೂ ಸಿಕ್ಕಿಲ್ಲ. ಹೀರೊಗಳ ಕುಟುಂಬದ ಸದಸ್ಯರು ನರಳುತ್ತಿದ್ದಾರೆ ಎಂದು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದವರು ವಿಶ್ಲೇಷಿಸಿದರು.
ಕಣ್ಣೀರಿನಲ್ಲಿ ಗಂಡು ಹೆಣ್ಣು, ಆ ಧರ್ಮ ಈ ಧರ್ಮ, ಆ ಜಾತಿ ಈ ಜಾತಿ ಎಂದೇನೂ ಇರುವುದಿಲ್ಲ. ಸಾಹಿತ್ಯದಲ್ಲಿ ಮುಖ್ಯವಾಗಿರಬೇಕಾದದ್ದು ಮಾನವೀಯತೆ ಮತ್ತು ಪ್ರೀತಿಗಳು ಮಾತ್ರ. ಮೇಲ್ವರ್ಗದ ಲೇಖಕರನ್ನು ಜಾತಿಯಿಂದ ಗುರುತಿಸುತ್ತಿಲ್ಲವಷ್ಟೆ. ಹೀಗಾಗಿ ಮುಂದಿನ ಸಾಹಿತ್ಯೋತ್ಸವದಿಂದಲಾದರೂ ದಲಿತ ಲೇಖಕರನ್ನು ‘ದಲಿತ ಲೇಖಕ‘ ಎಂದು ಗುರುತಿಸದೆ ಕೇವಲ ಒಬ್ಬ ಲೇಖಕ ಎಂದಷ್ಟೆ ಗುರುತಿಸುವಂತಾಗಲಿ.–ಇಮಾಯಮ್ (ವಿ. ಅಣ್ಣಾಮಲೈ)
‘ಇತಿಹಾಸಕ್ಕೆ ಅಪಚಾರ’
ಕೊಡಗು ಮತ್ತು ದಕ್ಷಿಣ ಕನ್ನಡಗಳಲ್ಲಿ 1800ರ ಆರಂಭದಲ್ಲಿ ನಡೆದ ಬಂಡಾಯದ ಬಗ್ಗೆ ಗೋಷ್ಠಿ ನಡೆಯಿತು. ವಿಜಯ ಪೂಣಚ್ಚ ತಂಬಂಡ ಅವರ ಮಾತಿಗೆ ಸಭೆಯಲ್ಲಿದ್ದ ಕೆಲವರು ವಿರೋಧವನ್ನು ವ್ಯಕ್ತಪಡಿಸಿದರು. ‘ಇತಿಹಾಸವನ್ನು ತಿರುಚಿ ಮಾತನಾಡುತ್ತಿದ್ದೀರಿ’ ಎಂದು ಧಿಕ್ಕಾರ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.