ADVERTISEMENT

ಬೆಂಗಳೂರು | ಘನತ್ಯಾಜ್ಯ ವಿಲೇವಾರಿ: ವರದಿ ಸಲ್ಲಿಕೆಗೆ ಗಡುವು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 23:02 IST
Last Updated 23 ಅಕ್ಟೋಬರ್ 2024, 23:02 IST
ಬಿ.ಎಸ್. ಪಾಟೀಲ
ಬಿ.ಎಸ್. ಪಾಟೀಲ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಕೆರೆಗಳ ಒತ್ತುವರಿ ತೆರವಿಗೆ ಕೈಗೊಂಡ ಕ್ರಮಗಳ ಕುರಿತು ಡಿ.20ರೊಳಗೆ ವರದಿ ಸಲ್ಲಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ನಿರ್ದೇಶನ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ, ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಖಾತ್ರಿ ಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತರು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಪಾಲಿಕೆಯ ಎಂಟು ವಲಯಗಳಲ್ಲಿ ದಾಸರಹಳ್ಳಿಯ ವಲಯದ ವಿಚಾರಣೆಯು ಸೋಮವಾರ ನಡೆದಿದ್ದು, ಕಸದ ಸಂಗ್ರಹ, ಆಟೊ ರಿಕ್ಷಾ ಟಿಪ್ಪರ್ ಬಳಕೆ ಸೇರಿ ವಿವಿಧ ಮಾಹಿತಿಗಳನ್ನು ಒಳಗೊಂಡ ವರದಿ ಸಲ್ಲಿಕೆಗೆ ನಾಲ್ಕು ವಾರಗಳ ಗಡುವನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಲಾಗಿದೆ.

ಯಾವ ಮನೆಯಿಂದ? ಯಾವ ಆಟೊ ರಿಕ್ಷಾ ಟಿಪ್ಪ‌ರ್‌ಗಳು ಕಸ ಸಂಗ್ರಹಿಸುತ್ತಿವೆ? ಎಂಬ ವಿವರವನ್ನು ಸಲ್ಲಿಸಬೇಕು. ಘನತ್ಯಾಜ್ಯ ನೀಡದೇ ಇರುವ ಮನೆ ಮಾಲೀಕರಿಗೆ, ಎಲ್ಲೆಂದರಲ್ಲಿ ಕಸ ಬಿಸಾಡುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಬೇಕು ಎಂದು ಸೂಚಿಸಲಾಯಿತು.

ADVERTISEMENT

ಹೆಚ್ಚಿನ ಆಟೊ ರಿಕ್ಷಾ ಟಿಪ್ಪರ್‌ಗಳ ಅವಶ್ಯಕತೆಯ ಬಗ್ಗೆ ಯೋಜನಾ ವರದಿ, ವಲಯದ ವ್ಯಾಪ್ತಿಯಲ್ಲಿ ಬರುವ 10 ಕೆರೆಗಳ ಸ್ಥಿತಿಗತಿ ಬಗ್ಗೆ ವಿಸ್ತ್ರತ ವರದಿಯನ್ನು ನಾಲ್ಕು ವಾರಗಳೊಗೆ ಸಲ್ಲಿಸಬೇಕು. ಬೀದಿ ನಾಯಿಗಳ ಕಾಟದಿಂದ ಜನರ ರಕ್ಷಣೆಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡಬೇಕು. ಬೀದಿ ನಾಯಿಗಳಿಗೆ ಆಹಾರ ಒದಗಿಸುವುದು, ಚುಚ್ಚು ಮದ್ದು ನೀಡುವುದು, ಬೀದಿ ನಾಯಿಗಳ ಸಂತತಿಯನ್ನು ನಿಯಂತ್ರಿಸುವ ಕಾರ್ಯಕ್ರಮಗಳ ಮಾಹಿತಿಯನ್ನು ವರದಿ ಒಳಗೊಂಡಿರಬೇಕು ಎಂದು ನಿರ್ದೇಶನ ನೀಡಲಾಯಿತು.

ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ತ್ಯಾಜ್ಯ ನೀರು ಹರಿಯದಂತೆ ಕ್ರಮವಹಿಸಬೇಕು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಕೆರೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸೂಚಿಸಲಾಯಿತು.

ಕೈಗಾರಿಕೆಗಳು ವಿಷಯುಕ್ತ ಅನಿಲವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸದೆ ಹೊರ ಬಿಡುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸಂಬಂಧಿಸಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯನ್ನು ಪ್ರಕರಣದಲ್ಲಿ ಎದುರುದಾರರನ್ನಾಗಿ ಸೇರ್ಪಡೆಗೊಳಿಸುವಂತೆ ಕಚೇರಿಗೆ ಆದೇಶಿಸಿ, ಅವರಿಂದ ವರದಿಯನ್ನು ಪಡೆಯಬೇಕು ಎಂದು ಸೂಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.