ADVERTISEMENT

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ‘ವೈಟ್‌ಟಾಪಿಂಗ್‌’: ಮಂಕು ಬಡಿದ ವ್ಯಾಪಾರ

ಮನೋಹರ್ ಎಂ.
Published 17 ಏಪ್ರಿಲ್ 2022, 20:20 IST
Last Updated 17 ಏಪ್ರಿಲ್ 2022, 20:20 IST
ಮಲ್ಲೇಶ್ವರದ ಮಾರುಕಟ್ಟೆ ಬಳಿ ವೈಟ್‌ಟಾಪಿಂಗ್‌ ಕಾಮಗಾರಿಯಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿರುವುದು –ಪ್ರಜಾವಾಣಿ ಚಿತ್ರ/Krishnakumar P S
ಮಲ್ಲೇಶ್ವರದ ಮಾರುಕಟ್ಟೆ ಬಳಿ ವೈಟ್‌ಟಾಪಿಂಗ್‌ ಕಾಮಗಾರಿಯಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿರುವುದು –ಪ್ರಜಾವಾಣಿ ಚಿತ್ರ/Krishnakumar P S   

ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ಚಿತ್ರಮಂದಿರದಿಂದ 18ನೇ ಅಡ್ಡರಸ್ತೆಯ ವರೆಗೆ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯು ರಸ್ತೆಯುದ್ದಕ್ಕೂ ನಡೆಯುತ್ತಿದ್ದ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಗ್ರಾಹಕರ ಕೊರತೆಯಿಂದ ಇಲ್ಲಿನ ವಾಣಿಜ್ಯ ಮಳಿಗೆಗಳು ಹಾಗೂ ಬೀದಿ ವ್ಯಾಪಾರ ಮಂಕಾಗಿದೆ.

ಸಂಪಿಗೆ ರಸ್ತೆ ವಾಣಿಜ್ಯ ಚಟುವಟಿಕೆ ಮತ್ತು ವ್ಯಾಪಾರಕ್ಕೆ ಹೆಸರುವಾಸಿ. ಪ್ರಮುಖ ಆಭರಣ ಮಳಿಗೆಗಳಿರುವ, ವಸ್ತ್ರ ಖರೀದಿ, ತಿಂಡಿ–ನಿಸುಗಳಿಗೂ ಇದು ನೆಚ್ಚಿನ ತಾಣ.ಈ ಕಾರಣದಿಂದ ರಸ್ತೆಯಲ್ಲಿ ಸದಾ ಜನಜಂಗುಳಿ ಇರುತ್ತದೆ. ಕಿರಿದಾದ ರಸ್ತೆ ಆಗಿರುವುದರಿಂದ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶವಿತ್ತು.

ಕಾಮಗಾರಿಗಾಗಿ ಈ ರಸ್ತೆ ನಿರ್ಬಂಧಿಸಿರುವುದರಿಂದ ಮಳಿಗೆಗಳು ಖಾಲಿಯಾಗಿವೆ. ಗ್ರಾಹಕರ ವಾಹನ ನಿಲುಗಡೆ ಹಾಗೂ ಸ್ಥಳೀಯ ನಿವಾಸಿಗಳ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗವನ್ನು ಕಲ್ಪಿಸಲಾಗಿದೆ. ಆದರೆ, ಗ್ರಾಹಕರಕೊರತೆಯಿಂದ ಇಲ್ಲಿನ ವ್ಯಾಪಾರ ನೆಲಕಚ್ಚಿದೆ.

ADVERTISEMENT

‘ರಸ್ತೆ ಬದಿ ಹೂವು ಮಾರಿಕೊಂಡು ಜೀವನ ನಡೆಸುತ್ತಿದ್ದೇನೆ. ಕಾಮಗಾರಿಯಿಂದ ಒಳ್ಳೆಯ ರಸ್ತೆಯೇನೋ ಬರುತ್ತಿದೆ. ಇದಕ್ಕೆ ನನ್ನ ವಿರೋಧವಿಲ್ಲ. ಒಂದು ತಿಂಗಳಿನಿಂದ ವ್ಯಾಪಾರವೇ ಇಲ್ಲ. ರಸ್ತೆ ನಿರ್ಬಂಧಿಸಿರುವುದರಿಂದ ಬೆರಳೆಣಿಕೆಯಷ್ಟು ಗ್ರಾಹಕರು ಬರುತ್ತಿದ್ದಾರೆ’ ಎಂದು ಮಲ್ಲೇಶ್ವರ ಮಾರುಕಟ್ಟೆಯ ಹೂವಿನ ವ್ಯಾಪಾರಿ ವೆಂಕಟೇಶ್‌ ಸಂಕಟ ಹೊರಹಾಕಿದರು.

‘ಪಾದಚಾರಿ ಮಾರ್ಗ ಕೆಡವಿರುವುದರಿಂದ ವಾಹನ ಓಡಾಟವಿಲ್ಲದ ರಸ್ತೆಯಲ್ಲೇ ಅಂಗಡಿ ಹಾಕಿಕೊಂಡಿದ್ದೇನೆ. ಪ್ರತಿ ವರ್ಷ ಯುಗಾದಿಗೆ ಲಾಭ ಸಿಗುತ್ತಿತ್ತು. ಈ ಯುಗಾದಿಗೆವ್ಯಾಪಾರವಿಲ್ಲದೆ, ನಷ್ಟ ಅನುಭವಿಸಿದೆ. ಮೂರು ಹೊತ್ತಿನ ಊಟಕ್ಕೂ ಅಲೆಯುವಂತಾಗಿದೆ’ ಎಂದರು.

‘ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಾರಣಕ್ಕೇ ಈ ರಸ್ತೆಯಲ್ಲಿ ಆಭರಣ ಮಳಿಗೆ ತೆರೆದಿದ್ದೇವೆ. ಬಹುತೇಕ ಗ್ರಾಹಕರು ಕಾರುಗಳಲ್ಲೇ ಮಳಿಗೆಗೆ ಬರುತ್ತಾರೆ. ಆದರೆ, ಈಗ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಮಳಿಗೆಗೆ ಬರುವ ಗ್ರಾಹಕರ ಸಂಖ್ಯೆಯೂಕ್ರಮೇಣ ಕಡಿಮೆ ಯಾಗಿದೆ’ ಎಂದು ಇಲ್ಲಿನ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೇಳಿದರು.

‘ಯುವತಿಯರು ಬಟ್ಟೆ ಖರೀದಿಗೆಂದು ಮಲ್ಲೇಶ್ವರದಲ್ಲಿ ಭೇಟಿ ನೀಡುವ ಪ್ರಮುಖ ರಸ್ತೆಯಿದು.ಈ ರಸ್ತೆಯ ಎರಡೂ ಬದಿ ಬಟ್ಟೆಯ ಅಂಗಡಿಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ವೈಟ್‌ ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ವ್ಯಾಪಾರವೇ ಇಲ್ಲ. ದಿನಕ್ಕೆ ಕನಿಷ್ಠ 30 ಮಂದಿಯಾದರೂ ಬಟ್ಟೆ ಖರೀದಿಸುತ್ತಿದ್ದರು.ಈಗ ನಾಲ್ಕು ಅಥವಾ ಐದು ಮಂದಿಯಷ್ಟೇ ಬರುತ್ತಾರೆ’ ಎಂದು ವ್ಯಾಪಾರಿ ಆಕಾಶ್‌ ಹೇಳಿದರು.

ಹೊಸ ರಸ್ತೆ ಬೇಕಿರಲಿಲ್ಲ: ‘ಹಿಂದಿನ ರಸ್ತೆ ಚೆನ್ನಾಗಿಯೇ ಇತ್ತು. ವಾಹನಗಳು ಸುಗಮವಾಗಿ ಸಂಚರಿಸುತ್ತಿದ್ದವು. ಹಣ ಲೂಟಿ ಮಾಡಲು ಇಂತಹ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಜನರಿಗೆ ಸಮಸ್ಯೆತಪ್ಪಿದ್ದಲ್ಲ. ಇಲ್ಲಿ ವೈಟ್‌ಟಾಪಿಂಗ್‌ನ ಅಗತ್ಯವೇ ಇರಲಿಲ್ಲ’ ಎಂದು ಸ್ಥಳೀಯ ನಿವಾಸಿ ರಂಗನಾಥ್‌ ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪಾಲಿಕೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ.

----

ಕ್ಯಾಂಟೀನ್‌ ಮುಚ್ಚುವ ಸ್ಥಿತಿ

‘ಕೋವಿಡ್‌ನಿಂದ ಎರಡು ವರ್ಷ ಕ್ಯಾಂಟೀನ್ ಮುಚ್ಚಿದ್ದೆ. ಮತ್ತೆ ಚೇತರಿಸಿಕೊಳ್ಳುವಷ್ಟರಲ್ಲಿ ಈ ವೈಟ್‌ಟಾಪಿಂಗ್‌ ಹೊಡೆತ ನೀಡಿದೆ. ಗ್ರಾಹಕರಿಲ್ಲದೆ ಬದುಕು ಮತ್ತೆ ದುಸ್ತರವಾಗಿದೆ. ಮೊದಲು ದಿನಕ್ಕೆ ₹9 ಸಾವಿರದವರೆಗೆ ವ್ಯಾಪಾರ ಆಗುತ್ತಿತ್ತು. ಈಗ ಕೇವಲ ₹2 ಸಾವಿರದವರೆಗೆ ಆಗುತ್ತಿದೆ. ಇದರಲ್ಲಿ ಬಾಡಿಗೆ ಪಾವತಿ, ಸಿಬ್ಬಂದಿಗೆ ಸಂಬಳ, ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಕ್ಯಾಂಟೀನ್‌ ಮುಚ್ಚಬೇಕಾದ ಸ್ಥಿತಿಗೆ ತಲುಪಿದ್ದೇನೆ’ ಎಂದು ಈ ರಸ್ತೆಯಲ್ಲಿ ಕ್ಯಾಂಟೀನ್ ನಡೆಸುವ ಶೇಷಾದ್ರಿ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.