ADVERTISEMENT

₹10 ನೋಟುಗಳನ್ನು ಎಸೆತ ಪ್ರಕರಣ: ಪ್ರಚಾರಕ್ಕಾಗಿ ಎಸೆದೆ ಎಂದು ಸಿಇಒ ತಪ್ಪೊಪ್ಪಿಗೆ!

ಬೆಂಗಳೂರಿನ ಕೆ. ಆರ್‌. ಮಾರುಕಟ್ಟೆ ಮೇಲ್ಸೇತುವೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 6:27 IST
Last Updated 25 ಜನವರಿ 2023, 6:27 IST
ಬೆಂಗಳೂರು ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆಯಲ್ಲಿ ನಿಂತು ₹ 10 ನೋಟು ಎಸೆದಿದ್ದ ಅರುಣ್
ಬೆಂಗಳೂರು ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆಯಲ್ಲಿ ನಿಂತು ₹ 10 ನೋಟು ಎಸೆದಿದ್ದ ಅರುಣ್   

ಬೆಂಗಳೂರು: ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆಯಲ್ಲಿ ನಿಂತು ₹ 10 ಮುಖಬೆಲೆಯ ನೋಟುಗಳನ್ನು ಎಸೆದಿದ್ದ ಆರೋಪಿ ಅರುಣ್ ಅವರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಆರೋಪಿ ಅರುಣ್, ನಿರೂಪಕ ಹಾಗೂ ಕಾರ್ಯಕ್ರಮ ಸಂಘಟಕ. ವಿ ಡಾಟ್ 9 ಇವೆಂಟ್ಸ್ ಇಂಡಿಯಾ ಕಂಪನಿ ಸ್ಥಾಪಿಸಿ, ಅದರ ಕಾರ್ಯನಿರ್ವಾ ಹಕ ಅಧಿಕಾರಿ (ಸಿಇಒ) ಸಹ ಆಗಿದ್ದಾನೆ. ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಿದ್ದ. ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ಭಾಷಣ ಮಾಡಿ, ಅದರ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಕೋಟು ಧರಿಸಿ ಕೊರಳಲ್ಲಿ ಗಡಿಯಾರ ನೇತಾಕಿಕೊಂಡಿದ್ದ ಅರುಣ್, ದ್ವಿಚಕ್ರ ವಾಹನದಲ್ಲಿ ಕೆ. ಆರ್. ಮಾರುಕಟ್ಟೆ ಮೇಲ್ಸೇತುವೆಗೆ ಮಂಗಳವಾರ ಬಂದಿದ್ದ. ಬ್ಯಾಗ್‌ನಿಂದ ನೋಟುಗಳನ್ನು ತೆಗೆದು ಕೆಳರಸ್ತೆಗೆ ಎಸೆದಿದ್ದ. ಜನರೆಲ್ಲರೂ ನೋಟುಗಳನ್ನು ಆರಿಸಿಕೊಳ್ಳುತ್ತಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು’ ಎಂದು ತಿಳಿಸಿದರು.

ADVERTISEMENT

‘ವಿಷಯ ಗೊತ್ತಾಗುತ್ತಿದ್ದಂತೆ ಹೊಯ್ಸಳ ಗಸ್ತು ವಾಹನ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಅಷ್ಟರಲ್ಲೇ ಆರೋಪಿ ಪರಾರಿಯಾಗಿದ್ದ. ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿದ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಅರುಣ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.’

‘ತನಿಖೆ ಕೈಗೊಂಡಾಗ, ಹಣ ಎರಚಿದ್ದು ಅರುಣ್ ಎಂಬುದು ಗೊತ್ತಾಯಿತು. ಮನೆಗೆ ಹೋಗಿ ವಿಚಾರಿಸಿದಾಗ, ಕಚೇರಿಯೊಂದರಲ್ಲಿ ಇರುವ ಮಾಹಿತಿ ಲಭ್ಯವಾಯಿತು. ಅದೇ ಕಚೇರಿಯಲ್ಲೇ ಅರುಣ್‌ನನ್ನು ವಶಕ್ಕೆ ಪಡೆದು, ಠಾಣೆಗೆ ಕರೆತರಲಾಗಿದೆ. ವಿಚಾರಣೆ ಮುಂದುವರಿಸಲಾಗಿದೆ‘ ಎಂದು ಪೊಲೀಸರು ಹೇಳಿದರು.

‘ಪ್ರಚಾರಕ್ಕಾಗಿ ನೋಟು ಎಸೆದೆ’

‘ಹಣದ ನಿರ್ವಹಣೆ ಹಾಗೂ ಉದ್ಯಮದ ಬಗ್ಗೆ ಕಾರ್ಯಕ್ರಮ ಮಾಡುತ್ತೇನೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ನಲ್ಲಿ ವಿಡಿಯೊ ಹಾಕುತ್ತೇನೆ. ಆದರೆ, ನನಗೆ ಹೆಚ್ಚು ಪ್ರಚಾರ ಸಿಗುತ್ತಿರಲಿಲ್ಲ. ಜನರೂ ನನಗಾಗಿ ಸಮಯ ನೀಡುತ್ತಿರಲಿಲ್ಲ. ಕೆ.ಆರ್.ಮಾರುಕಟ್ಟೆ ಬಳಿ ಹೋಗಿ ಹಣ ಎಸೆದರೆ, ಹೆಚ್ಚು ಪ್ರಚಾರ ಸಿಗಬಹುದೆಂದು ಸ್ನೇಹಿತನ ಜೊತೆ ಸೇರಿ ಈ ರೀತಿ ಮಾಡಿದೆ‘ ಎಂದು ಆರೋಪಿ ಅರುಣ್ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

‘ಕಡಿಮೆ ಹಣದಲ್ಲಿ ಹೆಚ್ಚು ಪ್ರಚಾರ ಪಡೆಯುವುದು ಹೇಗೆ ? ಎಂಬುದನ್ನು ತೋರಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ಹೀಗಾಗಿ, ₹4,500 ಮೊತ್ತದ ₹ 10 ಮುಖಬೆಲೆಯ ನೋಟುಗಳನ್ನು ಎಸೆದಿದ್ದೆ. ಇದೀಗ ಎಲ್ಲೆಡೆಯೂ ನನ್ನದೇ ಸುದ್ದಿ’ ಎಂದು ಆರೋಪಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.