ADVERTISEMENT

ಫುಟ್‌ಬೋರ್ಡ್ ಮೇಲೆ ನಿಲ್ಲಬೇಡಿ ಎಂದ ನಿರ್ವಾಹಕನಿಗೆ ಚಾಕು ಇರಿದ ಪ್ರಯಾಣಿಕ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 15:41 IST
Last Updated 2 ಅಕ್ಟೋಬರ್ 2024, 15:41 IST
ಹರ್ಷ ಸಿನ್ಹಾ
ಹರ್ಷ ಸಿನ್ಹಾ   

ಬೆಂಗಳೂರು: ಬಿಎಂಟಿಸಿ ವೋಲ್ವೊ ಬಸ್‌ ನಿರ್ವಾಹಕ ಯೋಗೇಶ್ (45) ಎಂಬುವರ ಹೊಟ್ಟೆಗೆ ಚಾಕುವಿನಿಂದ ಇರಿದ ಆರೋಪಿಯನ್ನು ವೈಟ್​ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಾಯಾಳು ನಿರ್ವಾಹಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಐಟಿಪಿಎಲ್‌ ಸಮೀಪದ ವೈದೇಹಿ ಆಸ್ಪತ್ರೆ ಜಂಕ್ಷನ್‌ ಬಳಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಆರೋಪಿ ಜಾರ್ಖಂಡ್‌ನ ಹರ್ಷ ಸಿನ್ಹಾ (25) ಎಂಬುವರನ್ನು ಬಂಧಿಸಲಾಗಿದೆ.  

‘ಬಿಎಂಟಿಸಿಯ ಘಟಕ 13ರ ವೋಲ್ವೋ ಬಸ್‌ ವೈಟ್‌ಫೀಲ್ಡ್‌ನ ಐಟಿಪಿಎಲ್‌ ಕಡೆಯಿಂದ ಹೂಡಿಗೆ ತೆರಳುತ್ತಿತ್ತು. ಈ ವೇಳೆ ಹೂಡಿಗೆ ತೆರಳಲು ಬಸ್‌ ಹತ್ತಿದ ಹರ್ಷ ಸಿನ್ಹಾ, ಬಾಗಿಲ ಬಳಿ ನಿಂತಿದ್ದ. ನಿರ್ವಾಹಕ ಯೋಗೇಶ್‌ ಮುಂದೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ, ‌ಏಕಾಏಕಿ ಬ್ಯಾಗ್‌ನಲ್ಲಿದ್ದ ಚಾಕು ತೆಗೆದು ನಿರ್ವಾಹಕನ ಹೊಟ್ಟೆಗೆ ಇರಿದು ಹಲ್ಲೆ ಮಾಡಿದ್ದಾನೆ. ರಕ್ತಸ್ರಾವವಾಗಿ ಕುಸಿದು ಬಿದ್ದ ಯೋಗೇಶ್‌ ಅವರನ್ನು ಪ್ರಯಾಣಿಕರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಕೃತ್ಯದ ಬಳಿಕ ಚಾಕು ಪ್ರದರ್ಶಿಸುತ್ತಿದ್ದ ಆರೋಪಿಯನ್ನು ಕಂಡು ಇತರೆ ಪ್ರಯಾಣಿಕರು ಭಯಭೀತರಾಗಿ ಬಸ್‌ನಿಂದ ಇಳಿದು ಓಡಿ ಹೋದರು. ತಕ್ಷಣ ಚಾಲಕ ಸಿದ್ದಲಿಂಗಸ್ವಾಮಿ ಅವರು ಬಸ್‌ನ ಬಾಗಿಲುಗಳನ್ನು ಬಂದ್ ಮಾಡಿ, ಆರೋಪಿ ಹೊರ ಹೋಗದಂತೆ  ನೋಡಿಕೊಂಡರು. ಇದರಿಂದ ಆರೋಪಿಯು ಮತ್ತಷ್ಟು ಕೋಪಗೊಂಡು, ಸುತ್ತಿಗೆಯಿಂದ ಬಸ್‌ ಗಾಜುಗಳಿಗೆ ಹಾನಿ ಮಾಡಿ, ರಂಪಾಟ ಮಾಡಿದ‘ ಎಂದು ಪೊಲೀಸರು ಹೇಳಿದ್ದಾರೆ.

‘ಹೊಟ್ಟೆಗೆ ಮೂರು ಬಾರಿ ಚಾಕುವಿನಿಂದ ಇರಿದಿರುವ ಕಾರಣ ಸಣ್ಣ ಮತ್ತು ದೊಡ್ಡ ಕರುಳುಗಳಿಗೆ ಹಾನಿಯಾಗಿದೆ. ವೈದ್ಯರು ಸಣ್ಣ ಶಸ್ತ್ರಚಿಕಿತ್ಸೆ ಮಾಡಿದ್ದು, ಅಣ್ಣ ಚೇತರಿಸಿಕೊಳ್ಳುತ್ತಿದ್ದಾರೆ. ವಯಸ್ಸಾದ ತಂದೆ, ತಾಯಿ ಇದ್ದಾರೆ. ಕುಟುಂಬಕ್ಕೆ ಅಣ್ಣನೇ ಆಧಾರ. ಅವರ ಜೀವಕ್ಕೆ ತೊಂದರೆಯಾಗಿದ್ದರೆ ಯಾರು ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ನಿರ್ವಾಹಕ ಯೋಗೇಶ್ ಸಹೋದರಿ ಜ್ಯೋತಿ ಕಣ್ಣೀರಿಟ್ಟರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್‌. ರಾಮಚಂದ್ರನ್‌ ಅವರು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ, ಯೋಗೇಶ್‌ ಆರೋಗ್ಯ ವಿಚಾರಿಸಿದರು.

ಮ್ಯಾನೇಜರ್‌ಗೆ ಹೆದರಿಸಲು ಚಾಕು ತಂದಿದ್ದ.. 

‘ಆರೋಪಿ ಹರ್ಷ ಸಿನ್ಹಾ ನಗರದ ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳು ಕೆಲಸದಿಂದ ವಜಾ ಮಾಡಲಾಗಿತ್ತು. ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದ. ಎಲ್ಲೂ ಉದ್ಯೋಗ ಸಿಕ್ಕಿರಲಿಲ್ಲ. ಇದರಿಂದ ಆತ ಹತಾಶಗೊಂಡಿದ್ದ. ಕೆಲಸದಿಂದ ತೆಗೆದು ಹಾಕಿದ್ದ ಮ್ಯಾನೇಜರ್​​ಗೆ ಬೆದರಿಸಲು ತನ್ನ ಬ್ಯಾಗ್‌ನಲ್ಲಿ ಚಾಕು ಇಟ್ಟುಕೊಂಡಿದ್ದ. ಆದರೆ ಕಂಪನಿ ಬಳಿ ಯಾರು ಸಿಗದಿದ್ದಾಗ ಬಸ್‌ನಲ್ಲಿ ಮನೆಗೆ ತೆರಳುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಸ್‌ನಲ್ಲಿ‌ ಫುಟ್ ಬೋರ್ಡ್ ಮೇಲೆ ನಿಂತಿದ್ದ ಆರೋಪಿಯನ್ನು ಒಳಗೆ ಬರುವಂತೆ ನಿರ್ವಾಹಕ ಯೋಗೇಶ್  ಎರಡು ಬಾರಿ ಹೇಳಿದ್ದಾರೆ. ಮೊದಲೇ ಕೆಲಸ ಸಿಗದ ಹತಾಶೆಗೊಂಡಿದ್ದ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ನಿರ್ವಾಹಕನಿಗೆ ಇರಿದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಎರಡು ಚಾಕು ಹಾಗೂ ಸುತ್ತಿಗೆಯನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.