ADVERTISEMENT

ಬೆಂಗಳೂರು | ಮಾರುಕಟ್ಟೆಯಲ್ಲಿ ದೀಪಾವಳಿ ‘ಪ್ರಭಾವಳಿ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 21:30 IST
Last Updated 23 ಅಕ್ಟೋಬರ್ 2022, 21:30 IST
ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಸಂಪಿಗೆ ರಸ್ತೆಯ ಅಂಗಡಿಯೊಂದರಲ್ಲಿ ಜನರು ವಿವಿಧ ವಿನ್ಯಾಸದ ದೀಪಗಳು ಮತ್ತು ಆಕಾಶ ಬುಟ್ಟಿಗಳನ್ನು ಖರೀದಿಸಿದರು –ಪ್ರಜಾವಾಣಿ ಚಿತ್ರ
ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಸಂಪಿಗೆ ರಸ್ತೆಯ ಅಂಗಡಿಯೊಂದರಲ್ಲಿ ಜನರು ವಿವಿಧ ವಿನ್ಯಾಸದ ದೀಪಗಳು ಮತ್ತು ಆಕಾಶ ಬುಟ್ಟಿಗಳನ್ನು ಖರೀದಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ನಗರದ ಮಾರುಕಟ್ಟೆಗಳಲ್ಲಿ ಭಾನುವಾರ ನೆರೆದಿದ್ದರು. ಬೆಳಕಿನ ಹಬ್ಬಕ್ಕೆ ಮೆರುಗು ಹೆಚ್ಚಿಸುವ ಹೂವು, ಹಣ್ಣು, ಹಣತೆ, ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಮಳಿಗೆಗಳಲ್ಲಿ ಮುಗಿಬಿದ್ದಿರುವುದು ಸಾಮಾನ್ಯವಾಗಿತ್ತು.

ಕಳೆದ ಎರಡು ವರ್ಷ ಕೋವಿಡ್‌ ಕಾರಣದಿಂದ ಎಲ್ಲರೂ ಸರಳವಾದ ದೀಪಾವಳಿ ಆಚರಿಸಿದ್ದರು. ಈ ಬಾರಿ ಬೆಂಗಳೂರಿಗರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಎಂದಿನಂತೆ ಹೂವಿನ ದರಗಳು ಏರಿಕೆ ಕಂಡಿವೆ. ಕೆ.ಆರ್‌.ಮಾರುಕಟ್ಟೆ, ಬಸವನಗುಡಿ, ಹೆಬ್ಬಾಳ, ರಾಜಾಜಿನಗರ, ಮಲ್ಲೇಶ್ವರ, ಜಯನಗರ ಸೇರಿ ನಗರದ ವಿವಿಧ ಭಾಗಗಳಲ್ಲಿ ಹೂವು ಹಾಗೂ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಕಿರು ಮಾರುಕಟ್ಟೆಗಳು ತಲೆಎತ್ತಿವೆ.

ಸೋಮವಾರದಿಂದ ಬುಧವಾರದ ವರೆಗೆ ವಿವಿಧ ಧಾರ್ಮಿಕ ಆಚರಣೆಗಳು ನಡೆಯುವ ಕಾರಣದಿಂದ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಸಾರ್ವಜನಿಕರು ಭಾನುವಾರವೇ ಖರೀದಿಸಿದರು.

ADVERTISEMENT

‘ದೀಪಾವಳಿಗೆ ಹೆಚ್ಚು ಖರೀದಿಯಾಗುವುದು ಸೇವಂತಿಗೆ ಹಾಗೂ ಚೆಂಡು ಹೂ. ಆದರೆ, ಈ ಹಬ್ಬಕ್ಕೆ ಗುಣಮಟ್ಟದ ಹೂಗಳು ಮಾರುಕಟ್ಟೆಗೆ ಬರುತ್ತಿಲ್ಲ. ಮಳೆಯಿಂದಾಗಿ ಸೇವಂತಿಗೆ ಹಾಗೂ ಚೆಂಡು ಹೂವಿನ ಬೆಳೆಗಳು ಭಾರಿ ಹಾನಿಗೆ ಒಳಗಾಗಿವೆ. ಹಾಗಾಗಿ ಬೆಲೆಗಳು ಅಷ್ಟೇನೂ ಏರಿಕೆಯಾಗಿಲ್ಲ. ಉಳಿದ ಹೂಗಳ ದರ ಎಂದಿನಂತೆ ಸ್ವಲ್ಪ ಹೆಚ್ಚಾಗಿದೆ’ ಎಂದು ಕೆ.ಆರ್‌.ಮಾರುಕಟ್ಟೆಯ ಹೂವಿನ ವರ್ತಕ ನಾರಾಯಣ ತಿಳಿಸಿದರು.

ಪೂಜಾ ಸಾಮಗ್ರಿಗಳ ಖರೀದಿ ಭರಾಟೆ: ದೀಪಾವಳಿಯನ್ನು ವಿವಿಧ ಸಮುದಾಯಗಳಲ್ಲಿ ತಮ್ಮದೇ ವಿಶೇಷ ಶೈಲಿಗಳಲ್ಲಿ ಆಚರಿಸಲಾಗುತ್ತದೆ. ಬಹುತೇಕರುಹಿಂದಿನಿಂದಲೂ ಈ ಹಬ್ಬಕ್ಕೆ ನೋಮುವ ಸಂಪ್ರದಾಯ ಉಳಿಸಿಕೊಂಡಿದ್ದಾರೆ. ಇದಕ್ಕೆಂದೇ ಕೈಗೆ ನೋಮುದಾರ ಕಟ್ಟಿಕೊಂಡು ಆಚರಣೆಯಲ್ಲಿ ತೊಡಗುತ್ತಾರೆ.

ಪೂಜೆಯ ವೇಳೆ ನೋಮುದಾರ, ಅರಿಶಿನ–ಕುಂಕುಮ, ಅಡಿಕೆ, ವೀಳ್ಯದ ಎಲೆಗಳನ್ನು ಬಾಗಿನ ರೂಪದಲ್ಲಿ ಪ್ರಧಾನವಾಗಿ ಇಡುತ್ತಾರೆ. ಹಾಗಾಗಿ, ಪೂಜಾ ಸಾಮಗ್ರಿಗಳಮಳಿಗೆಗಳ ಬಳಿಯೂ ಜನರ ದಂಡು ಬೀಡುಬಿಟ್ಟಿತ್ತು.

ಹಣತೆ ವೈವಿಧ್ಯ

ಕೋವಿಡ್‌ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಇಂದಿನಿಂದಲೇ ಸಿದ್ಧತೆಗಳು ಜೋರಾಗಿವೆ. ಮನೆಯಲ್ಲಿ ಖುಷಿ ಆಚರಣೆಗೆ ಸಿದ್ಧತೆ ಶುರುವಾಗಿದೆ. ದೀಪಾವಳಿ ಹಬ್ಬಕ್ಕೆ ಹಣತೆಗಳು ಬೇಕೇ ಬೇಕು. ಹಣತೆಗಳ ಬೆಳಕು ಮನೆಯಲ್ಲಿ ಇಲ್ಲದೇ ಇದ್ದಲ್ಲಿ ಹಬ್ಬವೇ ಅಪೂರ್ಣ ಎನ್ನುವ ಭಾವನೆ ಜನರದು. ಈಗಾಗಲೇ ಚೀನಾದ ಆಕಾಶ ಬುಟ್ಟಿಗಳು ಮತ್ತು ಇತರೆ ಅಲಂಕಾರಿಕ ವಸ್ತುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ದೀಪಾವಳಿಯ ಸೂಚಕವಾಗಿ ಮನೆಯ ಹೊರ ಮತ್ತು ಒಳಭಾಗಗಳಲ್ಲಿ ದೀಪಗಳನ್ನು ಬೆಳಗುವುದರಿಂದಮಣ್ಣಿನ ಹಣತೆಗಳನ್ನುರಸ್ತೆ ಬದಿಗಳಲ್ಲಿ ರಾಶಿ ಹಾಕಲಾಗಿದ್ದು, ಹಬ್ಬಕ್ಕಾಗಿ ಸಿದ್ಧಪಡಿಸಿರುವ ತರಹೇವಾರಿ ವಿನ್ಯಾಸದ ಹಣತೆಗಳು ಜನರನ್ನು ಆಕರ್ಷಿಸುತ್ತಿದ್ದವು. ದೀಪವೊಂದರ ಬೆಲೆ ₹5ರಿಂದ ಆರಂಭಗೊಂಡು ₹300ವರೆಗೆ ಮಾರಾಟವಾಗುತ್ತಿದೆ.

ಹೂವಿನ ದರಪಟ್ಟಿ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಮಲ್ಲಿಗೆ;1,200

ಕನಕಾಂಬರ;2,000

ಗುಲಾಬಿ;300

ಸೇವಂತಿಗೆ;180

ಸುಗಂಧರಾಜ;200

ಚೆಂಡುಹೂವು;100

----

ಹಣ್ಣು; ಕೆ.ಆರ್. ಮಾರುಕಟ್ಟೆಯ ಚಿಲ್ಲರೆ ದರ

ಸೇಬು;80;100

ದಾಳಿಂಬೆ;70;80

ಕಿತ್ತಳೆ;70;50

ಸಪೋಟ;40;40

ಸೀತಾಫಲ;40;50

ಮೂಸಂಬಿ;50;60

ಅನಾನಸ್;40;50

ಏಲಕ್ಕಿ ಬಾಳೆ;50;60

––

ತರಕಾರಿ;ಕಳೆದ ವಾರದ ದರ;ಈ ವಾರದ ದರ(ಕೆ.ಆರ್. ಮಾರುಕಟ್ಟೆಯಲ್ಲಿ ‍ಪ್ರತಿ ಕೆ.ಜಿಗೆ)

ಬಟಾಣಿ;100;120

ಬೆಳ್ಳುಳ್ಳಿ;40;50

ಟೊಮೆಟೊ;20;30

ಕ್ಯಾರೆಟ್;50;60

ಶುಂಠಿ;40;50

ಈರುಳ್ಳಿ;20;30

ಬೀನ್ಸ್;40;50

ಬದನೆ;40;54

ಮೆಣಸಿನಕಾಯಿ;50;60

ಬೆಂಡೆಕಾಯಿ;30;40

ಹೂಕೋಸು;40;50

ಆಲೂಗಡ್ಡೆ;30;40

ಕುಂಬಳಕಾಯಿ;50

––

ಸೊಪ್ಪು;ಚಿಲ್ಲರೆ(ಕಟ್ಟಿಗೆ)

ಮೆಂತ್ಯೆ;10;20

ಕೊತ್ತಂಬರಿ;20;30

ಸಬ್ಬಕ್ಕಿ;10;20

ಪಾಲಾಕ್;10;20

ದಂಟು;15;25

––

ದೀಪಾವಳಿ ವಿಶೇಷ

ಮಾವಿನ ತೋರಣ ಜೋಡಿಗೆ;20

ದರ್ಬೆ ಕಟ್ಟಿಗೆ;100

ಬಾಳೆ ಕಂದು ದೊಡ್ಡ ಗಾತ್ರದ ಜೋಡಿಗೆ;150

ವೀಳ್ಯದೆಲೆ 100ಕ್ಕೆ;100

ಹಸಿ ಅಡಿಕೆ ಬೆಟ್ಟ 1ಕ್ಕೆ;5

ನಿಂಬೆ ಹಣ್ಣು 10ಕ್ಕೆ;20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.