ADVERTISEMENT

ಮೆಜೆಸ್ಟಿಕ್ ಬಸ್‌ ನಿಲ್ದಾಣದ ರಸ್ತೆಗಳಲ್ಲಿ ಗುಂಡಿ: ಬಿಎಂಟಿಸಿ ಚಾಲಕರು ಹೈರಾಣ!

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 3:06 IST
Last Updated 4 ಸೆಪ್ಟೆಂಬರ್ 2024, 3:06 IST
<div class="paragraphs"><p>ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ರಸ್ತೆಯಲ್ಲಿ ಬೃಹತ್‌ ಗುಂಡಿ ಬಿದ್ದಿದೆ </p></div>

ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ರಸ್ತೆಯಲ್ಲಿ ಬೃಹತ್‌ ಗುಂಡಿ ಬಿದ್ದಿದೆ

   

ಪ್ರಜಾವಾಣಿ ಚಿತ್ರಗಳು: ರಂಜು ಪಿ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ಕೆಂಪೇಗೌಡ ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯುದ್ದಕ್ಕೂ ಬೃಹದಾಕಾರದ ಗುಂಡಿಗಳು ಬಿದ್ದಿವೆ. ರಸ್ತೆ ಹದಗೆಟ್ಟಿರುವುದರಿಂದ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ತೀವ್ರ ತೊಡಕಾಗಿದೆ.

ADVERTISEMENT

ಗುಬ್ಬಿ ತೋಟದಪ್ಪ ರಸ್ತೆ ಮತ್ತು ಧನ್ವಂತ್ರಿ ರಸ್ತೆಯ ಮೂಲಕ ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾರಿ ಸಂಖ್ಯೆಯ ಬೃಹತ್‌ ಗುಂಡಿಗಳು ಬಿದ್ದಿವೆ. ಸಂಪೂರ್ಣವಾಗಿ ಹದಗೆಟ್ಟಿರುವ ಈ ರಸ್ತೆಯ ಮೂಲಕವೇ ಬಿಎಂಟಿಸಿ ಎಲ್ಲ ಬಸ್‌ಗಳು ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಪ್ರವೇಶಿಸಬೇಕಿವೆ. ಗುಂಡಿಗಳಲ್ಲಿ ಇಳಿಸದೆಯೇ ಬಸ್‌ಗಳನ್ನು ನಿಲ್ದಾಣದೊಳಕ್ಕೆ ತರುವುದು ಮತ್ತು ಹೊರಕ್ಕೆ ಕೊಂಡೊಯ್ಯುವುದಕ್ಕೆ ಚಾಲಕರು ಹರಸಾಹಸಪಡುವಂತಾಗಿದೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ಬಿಎಂಟಿಸಿಯ ಏಳು ಸಾವಿರಕ್ಕೂ ಅಧಿಕ ಬಸ್‌ಗಳು ಸಂಚರಿಸುತ್ತವೆ. ನಿತ್ಯ ಲಕ್ಷಾಂತರ ಪ್ರಯಾಣಿಕರು ಈ ಮಾರ್ಗದಲ್ಲೇ ಪ್ರಯಾಣಿಸುತ್ತಾರೆ. ಆದರೆ, ರಸ್ತೆ ಗುಂಡಿಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.

ಇಲ್ಲಿಂದ ನಗರದ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ನಿಲ್ದಾಣ ಪ್ರವೇಶಿಸುವ ಎಲ್ಲ ಬಸ್‌ಗಳು ಈ ರಸ್ತೆಯ ಮೂಲಕವೇ ಸಂಚರಿಸಬೇಕು. ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಚಾಲಕರು ಅರಿವಿಲ್ಲದೆ ಬಸ್‌ಗಳನ್ನು ಗುಂಡಿಗಿಳಿಸಿದಾಗ ಪ್ರಯಾಣಕರು ತೊಂದರೆಗೀಡಾಗುತ್ತಿದ್ದಾರೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೂ ಅವಕಾಶವಿದೆ. ಬಿಸಿಲು ಹೆಚ್ಚಿದಾಗ ದೂಳು ಕಣ್ಣಿಗೆ ತುಂಬಿಕೊಂಡು ದ್ವಿಚಕ್ರ ವಾಹನ ಸವಾರರು ನಿತ್ಯವೂ ಪರದಾಡುತ್ತಿದ್ದಾರೆ.

‘ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಕೆಂಪೇಗೌಡ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಮಾಡಲಾಗಿದೆ. ಆದರೆ, ಮೆಜೆಸ್ಟಿಕ್‌ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ ಮಾತ್ರ ಗುಂಡಿಮಯವಾಗಿದೆ. ನಾಲ್ಕೈದು ತಿಂಗಳ ಹಿಂದೆ ಈ ರಸ್ತೆ ಚೆನ್ನಾಗಿತ್ತು. ಇತ್ತೀಚೆಗೆ ಶುರುವಾದ ಮಳೆಯಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ವಾಹನ ಚಾಲಕರು ಒಂದು ಗುಂಡಿಯನ್ನು ತಪ್ಪಿಸಲು ಹೋಗಿ ಮತ್ತೊಂದು ಗುಂಡಿಯಲ್ಲಿ ಬಸ್‌ ಓಡಿಸುತ್ತಿದ್ದಾರೆ. ಇದರಿಂದ, ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತಿದೆ’ ಎಂದು ಪ್ರಯಾಣಿಕ ಹನುಮಂತ ದೂರಿದರು. 

ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ತೆರಳುವ ಮಾರ್ಗದಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಕಲ್ಲುಗಳನ್ನು ಹಾಕಿದ್ದಾರೆ

‘ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ನಿಲ್ದಾಣಕ್ಕೆ ಬರುವ ನೂರಾರು ಬಸ್‌ಗಳಿಂದ ವಿಪರೀತ ದಟ್ಟಣೆ ಆಗುತ್ತಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಕಾರಣ, ಬಸ್‌ಗಳು ನಿಧಾನ ಗತಿಯಲ್ಲಿ ಸಂಚರಿಸುತ್ತಿವೆ. ಆದರೂ ಮಳೆ ಸಂದರ್ಭದಲ್ಲಿ ಈ ಹಾದಿಯಲ್ಲಿ ಸಾಗುವಾಗ ಬಸ್‌ಗಳಿಗೆ ಸಾಕಷ್ಟು ಹಾನಿಯಾಗುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿಗೆ ಆದ್ಯತೆ ನೀಡಬೇಕು’ ಎಂದು ಹವಾನಿಯಂತ್ರಿತ ವೋಲ್ವೊ ಬಸ್‌ ಚಾಲಕರೊಬ್ಬರು ಅಳಲು ತೋಡಿಕೊಂಡರು.

ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಗುಂಡಿಗಳನ್ನು ದಾಟಿಕೊಂಡು ತೆರಳಲು ಪಡಿಪಾಡಲುಪಟ್ಟರು

ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವೈಟ್‌ ಟಾಪಿಂಗ್‌ ಮಾಡಲು ಅನುಮೋದನೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ
ಲೋಕೇಶ್ ಬಿಬಿಎಂಪಿ ಮುಖ್ಯ ಎಂಜಿನಿಯರ್‌
ರಾಜಾಜಿನಗರದಿಂದ ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ತಲುಪಲು 20 ನಿಮಿಷ ಬೇಕಾಗುತ್ತದೆ. ನಿಲ್ದಾಣದ ಮುಂಭಾಗದ ರಸ್ತೆ ಹಾಳಾಗಿರುವುದರಿಂದ ಬಿಬಿಎಂಟಿಸಿ ಬಸ್‌ ನಿಲ್ದಾಣ ಪ್ರವೇಶಿಸಲು ಕನಿಷ್ಠ ಹತ್ತು ನಿಮಿಷ ಕಾಯಬೇಕು. ರವಿ ಯಲಹಂಕ ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಸಂಪರ್ಕಿಸುವ ರಸ್ತೆ ಗುಂಡಿಮಯವಾಗಿದ್ದು ಬಸ್‌ ಸಂಚಾರಕ್ಕೆ ಯೋಗ್ಯವಾಗಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಸಾರ್ವಜನಿಕ ವಾಹನಕ್ಕೆ ಹಾನಿಯಾಗುತ್ತಿದೆ. ಪ್ರಯಾಣಿಕರಿಗೂ ತೊಂದರೆ ಆಗುತ್ತಿದೆ. 
– ರಾಮು, ಪ್ರಯಾಣಿಕ

‘ಬಿಬಿಎಂಪಿಯಿಂದ ವೈಟ್‌ ಟಾಪಿಂಗ್‌’

‘ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್‌ ನಿಲ್ದಾಣ ಪ್ರವೇಶಿಸುವ ರಸ್ತೆಯು ಸಾರಿಗೆ ನಿಗಮದ ವ್ಯಾಪ್ತಿಯಲ್ಲಿರುವ ಆಂತರಿಕ ರಸ್ತೆ. ಆದರೆ ರಸ್ತೆ ದುರಸ್ತಿಗೆ ತನ್ನ ಬಳಿ ಹಣ ಲಭ್ಯವಿಲ್ಲ ಎಂದು ಬಿಎಂಟಿಸಿಯ ಹೇಳಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಈ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದಲೇ  ವೈಟ್‌ ಟಾಪಿಂಗ್‌ ಮಾಡಲಾಗುವುದು’ ಎಂದು ಬಿಬಿಎಂಪಿಯ ಪ್ರಧಾನ ಎಂಜಿನಿಯರ್‌ ಬಿ.ಎಸ್. ಪ್ರಹ್ಲಾದ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.