ಬೆಂಗಳೂರು: ‘ನಮ್ಮ ಮೆಟ್ರೊ’ ಸದ್ಯ ಒಂದು ‘ಇಂಟರ್‌ಜೇಂಜ್’ ನಿಲ್ದಾಣವನ್ನು ಹೊಂದಿದ್ದು, ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಗಳ ಕಾಮಗಾರಿ ಮುಗಿದಾಗ ಇಂಟರ್‌ಚೇಂಜ್ ನಿಲ್ದಾಣಗಳ ಸಂಖ್ಯೆ ಒಂಬತ್ತಕ್ಕೇರಲಿದೆ. ಮತ್ತೆ ಐದು ವರ್ಷಗಳಲ್ಲಿ ಇನ್ನೂ ಎಂಟು ಇಂಟರ್‌ಚೇಂಜ್ ನಿಲ್ದಾಣಗಳನ್ನು ಸೇರ್ಪಡೆ ಮಾಡುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.
ನಮ್ಮ ಮೆಟ್ರೊ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗ ಹಾದು ಹೋಗುವ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಮಾತ್ರ ಈಗ ‘ಇಂಟರ್‌ಚೇಂಜ್’ ಸೌಲಭ್ಯ ಇದೆ.
ಆರ್.ವಿ. ರಸ್ತೆ–ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದೆ. ಈ ಹಳದಿ ಮಾರ್ಗವು ಹಸಿರು ಮಾರ್ಗವನ್ನು ಸಂಪರ್ಕಿಸುವ ಆರ್.ವಿ. ರಸ್ತೆಯಲ್ಲಿ ಮತ್ತು ಗುಲಾಬಿ ಮಾರ್ಗವನ್ನು ಸಂಪರ್ಕಿಸುವ ಜಯದೇವ ಆಸ್ಪತ್ರೆ ಬಳಿ ಹಾಗೂ ನೀಲಿ ಮಾರ್ಗವನ್ನು ಸಂಪರ್ಕಿಸುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಳಿ ‘ಇಂಟರ್‌ಚೇಂಜ್’ ನಿಲ್ದಾಣಗಳು ನಿರ್ಮಾಣಗೊಂಡಿವೆ. ಹಳದಿ ಮಾರ್ಗಕ್ಕೆ ಈ ವರ್ಷದ ಡಿಸೆಂಬರ್‌ನಲ್ಲಿ ಚಾಲನೆ ನೀಡುವ ಗುರಿಯನ್ನು ಬಿಎಂಆರ್‌ಸಿಎಲ್ ಇಟ್ಟುಕೊಂಡಿರುವುದರಿಂದ ಈ ವರ್ಷದ ಅಂತ್ಯಕ್ಕೆ ಒಟ್ಟು ಇಂಟರ್‌ಚೇಂಜ್ ನಿಲ್ದಾಣಗಳ ಸಂಖ್ಯೆ ನಾಲ್ಕಕ್ಕೆ ಏರಲಿದೆ.
ಕಾಳೇನ ಅಗ್ರಹಾರ–ನಾಗವಾರ ನಡುವೆ ಗುಲಾಬಿ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಈ ಮಾರ್ಗವು 2025ರ ಅಂತ್ಯದ ಒಳಗೆ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆ ಇದೆ. ಈ ಮಾರ್ಗವು ನೇರಳೆ ಮಾರ್ಗವನ್ನು ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಸಂಪರ್ಕಿಸಲಿದೆ. ನಿರ್ಮಾಣ ಹಂತದಲ್ಲಿ ಇರುವ ನೀಲಿ ಮಾರ್ಗವನ್ನು ನಾಗವಾರದಲ್ಲಿ ಸಂಪರ್ಕಿಸಲಿದೆ. ಮುಂದೆ ನಿರ್ಮಾಣಗೊಳ್ಳಲಿರುವ ಕೆಂಪು ಮಾರ್ಗವನ್ನು ಡೇರಿ ಸರ್ಕಲ್‌ನಲ್ಲಿ ಸಂಪರ್ಕಿಸಲಿದೆ. ಈ ಮೂರೂ ಸ್ಥಳಗಳಲ್ಲಿ ಇಂಟರ್‌ಚೇಂಜ್ ನಿಲ್ದಾಣಗಳು ತಲೆಎತ್ತಲಿವೆ.
ಸೆಂಟ್ರಲ್ ಸಿಲ್ಕ್ ಬೋರ್ಡ್–ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗ ಕೂಡ ನಿರ್ಮಾಣ ಹಂತದಲ್ಲಿದ್ದು, 2026ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಮಾರ್ಗವು ಕೆ.ಆರ್.ಪುರದಲ್ಲಿ ನೇರಳೆ ಮಾರ್ಗವನ್ನು ಮತ್ತು ಅಗರದಲ್ಲಿ ಕೆಂಪು ಮಾರ್ಗವನ್ನು ಸಂಪರ್ಕಿಸುವುದರಿಂದ ಅಲ್ಲಿ ಇಂಟರ್‌ಜೇಂಜ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.
ಇದಲ್ಲದೇ ಮೂರನೇ ಹಂತದಲ್ಲಿ ಜೆ.ಪಿ.ನಗರದಿಂದ ಕೆಂಪಾಪುರವರೆಗೆ ಅರ್ಧ ವೃತ್ತಾಕಾರದ ಒಂದು ಮಾರ್ಗ, ಹೊಸಹಳ್ಳಿಯಿಂದ ಕಡಬಗೆರೆವರೆಗೆ ಒಂದು ಮಾರ್ಗ (ಎರಡೂ ಮಾರ್ಗಗಳು ಕೇಸರಿ) ನಿರ್ಮಿಸಲು ಪ್ರಸ್ತಾವವನ್ನು ಈಗಾಗಲೇ ಬಿಎಂಆರ್‌ಸಿಎಲ್ ಸರ್ಕಾರದ ಮುಂದೆ ಇಟ್ಟಿದ್ದು, ಅನುಮೋದನೆ ಹಂತದಲ್ಲಿದೆ. ಜೊತೆಗೆ ಹೆಬ್ಬಾಳ–ಸರ್ಜಾಪುರ ನಡುವಿನ ಕೆಂಪು ಮಾರ್ಗ ಡಿಪಿಆರ್ ಹಂತದಲ್ಲಿರುವ ಯೋಜನೆಯಾಗಿದೆ. ಒಂದು ದಶಕದ ಒಳಗೆ ಈ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಇಟ್ಟುಕೊಂಡಿದೆ. ಈ ಮಾರ್ಗಗಳಲ್ಲಿ 9 ಇಂಟರ್‌ಚೇಂಜ್ ನಿಲ್ದಾಣಗಳು ಬರಲಿವೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ ಚವಾಣ್ ಮಾಹಿತಿ ನೀಡಿದರು.
ಎಲ್ಲ 17 ಇಂಟರ್‌ಚೇಂಜ್‌ಗಳು ನಿರ್ಮಾಗೊಂಡಾಗ ನಗರದಲ್ಲಿ ಈಗಿರುವ ಪ್ರಯಾಣಿಕರ ದಟ್ಟಣೆ ಕಡಿಮೆಗೊಳ್ಳಲಿದೆ. ರಸ್ತೆಯಲ್ಲಿ ವಾಹನಗಳ ದಟ್ಟಣೆಯೂ ಕಡಿಮೆಯಾಗಿ ನಗರದಲ್ಲಿ ಸಂಚಾರ ಸುಲಭಗೊಳ್ಳಲಿದೆ ಎಂದು ಅವರು ತಿಳಿಸಿದರು.
ಮೆಟ್ರೊ ಇಂಟರ್‌ಚೇಂಜ್ ನಿಲ್ದಾಣಗಳ ಅಂಕಿಅಂಶ 5 ನೇರಳೆ ಮಾರ್ಗದಲ್ಲಿ ನಿರ್ಮಾಣ 3 ಹಸಿರು ಮಾರ್ಗದಲ್ಲಿ ನಿರ್ಮಾಣ 4 ಗುಲಾಬಿ ಮಾರ್ಗದಲ್ಲಿ ನಿರ್ಮಾಣ 4 ನೀಲಿ ಮಾರ್ಗದಲ್ಲಿ ನಿರ್ಮಾಣ 1 ಕೇಸರಿ ಮಾರ್ಗದಲ್ಲಿ ನಿರ್ಮಾಣ ಮಾರ್ಗಗಳ ಉದ್ದ (ಕಿ.ಮೀ.ಗಳಲ್ಲಿ) 43.49 ನೇರಳೆ ಮಾರ್ಗ 30.32 ಹಸಿರು ಮಾರ್ಗ 18.82 ಹಳದಿ ಮಾರ್ಗ 21.26 ಗುಲಾಬಿ ಮಾರ್ಗ 58.19 ನೀಲಿ ಮಾರ್ಗ 32 ಮತ್ತು 13 ಕೇಸರಿ ಮಾರ್ಗ 37 ಕೆಂಪು ಮಾರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.