ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರದ ಮೂಲಕ ಪರೀಕ್ಷೆಗಳನ್ನು ಸೋಮವಾರ ಆರಂಭಿಸಿದೆ. ಎರಡು ವಾರದಲ್ಲಿ ಆರ್‌ಡಿಎಸ್‌ಒ ಪರೀಕ್ಷೆ ಪೂರ್ಣಗೊಳ್ಳಲಿದೆ.
ಬೊಮ್ಮನಹಳ್ಳಿಯಿಂದ ಆರ್.ವಿ. ರಸ್ತೆ ನಡುವಿನ 18.82 ಕಿ.ಮೀ. ದೂರದ ಈ ಮಾರ್ಗದಲ್ಲಿ ಪ್ರಮುಖ ಪರೀಕ್ಷೆಗಳನ್ನು ಆರಂಭಿಸಲಾಗಿದೆ. 12ರಿಂದ 14 ದಿನಗಳವರೆಗೆ ವಿವಿಧ ಪರೀಕ್ಷೆಗಳನ್ನು ನಡೆಸಲಿದ್ದಾರೆ.
ರೋಲಿಂಗ್ ಸ್ಟಾಕ್ (ರೈಲು) ತಜ್ಞರು, ಹಳಿ ತಂತ್ರಜ್ಞರು, ಬ್ರೇಕ್ ತಂತ್ರಜ್ಞರು, ವಿವಿಧ ತಾಂತ್ರಿಕ ಪರಿಣಿತರ ತಂಡ ಈ ಪರೀಕ್ಷೆಗಳನ್ನು ನಡೆಸುತ್ತಿದೆ. ಬಳಿಕ ಪ್ರಾಯೋಗಿಕ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಮಂಡಳಿಯು ಸುರಕ್ಷತಾ ಆಯುಕ್ತರನ್ನು ಕಳುಹಿಸಿ ಅಂತಿಮ ತಪಾಸಣೆ ಮಾಡಿಸಲಿದೆ. ಅವರ ವರದಿಯನ್ನು ಆಧರಿಸಿ ಅನುಮೋದನಾ ಪತ್ರವನ್ನು ನೀಡಲಿದೆ. ಡಿಸೆಂಬರ್ ಒಳಗೆ ಈ ಎಲ್ಲ ಕಾರ್ಯಗಳು ಮುಗಿಯಲಿವೆ. ಈ ಮಾರ್ಗಕ್ಕೆ ಒಟ್ಟು 14 ರೈಲುಗಳು ಬೇಕಿವೆ. ವಾಣಿಜ್ಯ ಸಂಚಾರ ಶುರು ಮಾಡಲು ಎಂಟು ರೈಲು ಸಾಕಾಗುತ್ತದೆ. ಡಿಸೆಂಬರ್ ಒಳಗೆ ಎಂಟು ರೈಲುಗಳು ಬರಲಿವೆ ಎಂದು ಮಾಹಿತಿ ನೀಡಿದ್ದಾರೆ.
ಜೂನ್‌ನಲ್ಲಿ ಪರೀಕ್ಷೆ ಆರಂಭ: ಜೂನ್ 13ರಿಂದ ವಿವಿಧ ತಂತ್ರಜ್ಞರು ಪರೀಕ್ಷೆ ಆರಂಭಿಸಿದ್ದರು. ಚಾಲಕ ರಹಿತ ಎಂಜಿನ್ ಕೋಚ್‌ನಲ್ಲಿ ಸಂಚರಿಸಿ ಟ್ರ್ಯಾಕ್ಷನ್ ಮತ್ತು ಬ್ರೇಕಿಂಗ್ ಪರೀಕ್ಷೆ ಮಾಡಿದ್ದರು. ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೊಸಿಸ್ ಫೌಂಡೇಶನ್ (ಕೋಣಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬಿರಿಟೇನ ಅಗ್ರಹಾರ, ಹೊಸರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್‌ವಿ. ರಸ್ತೆ ನಿಲ್ದಾಣಗಳವರೆಗೆ ಪ್ರೊಟೊ ಟೈಪ್ (ಮೂಲ ಮಾದರಿ) ಕೋಚ್ ರೈಲು ಸಂಚರಿಸಿ ವಿವಿಧ ಪರೀಕ್ಷೆಗಳನ್ನು ನಡೆಸಿತ್ತು. ಇದೀಗ ಅಂತಿಮ ಹಂತಕ್ಕೆ ಬಂದಿದ್ದು, ಆರ್‌ಡಿಎಸ್‌ಒ ಪರೀಕ್ಷೆಗಳು ಆರಂಭವಾಗಿವೆ.
ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ (ಹಳದಿ ಮಾರ್ಗ) ಕಾಮಗಾರಿ 2017ರಲ್ಲಿ ಆರಂಭಗೊಂಡಿತ್ತು. ಮೆಟ್ರೊ ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗಗಳೊಂದಿಗೆ ಸಂಪರ್ಕಿಸುವ ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಸೇತುವೆ ಕೂಡ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.