ಬೆಂಗಳೂರು: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಟೊ ಕಣ್ಣಿನ ಆಸ್ಪತ್ರೆ ಔಷಧ ತಯಾರಿಕೆ ಕಂಪನಿ ಹಾಗೂ ವಿತರಕರ ವಿರುದ್ಧ ವಿವಿ ಪುರ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದೆ.
‘ಶಸ್ತ್ರಚಿಕಿತ್ಸೆ ವೈಫಲ್ಯಕ್ಕೆಔಷಧದ ಅಡ್ಡಪರಿಣಾಮವೇ ಕಾರಣ ಎಂಬ ಪ್ರಯೋಗಾಲಯ ವರದಿ ಆಧರಿಸಿ,ಔಷಧ ತಯಾರಿಕಾ ಕಂಪನಿ ಆಪ್ಟೆಕ್ನಿಕ್ ಮತ್ತು ವಿತರಕರಾದ ಯೂನಿಕಾರ್ನ್ ಡಿಸ್ಟ್ರಿಬ್ಯೂಟರ್ಸ್ ವಿರುದ್ಧ ದೂರು ನೀಡಲಾಗಿದ್ದು, ಎಫ್‍ಐಆರ್ ದಾಖಲಾಗಿದೆ’ ಎಂದು ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದರು.
‘ಪ್ರಕರಣದ ತನಿಖೆ ನಡೆಸಲು ಸರ್ಕಾರವು ಸಮಿತಿ ರಚಿಸಿದ್ದು, ತನಿಖೆ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರ ತಂಡ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸಮಿತಿ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಭೇಟಿ:ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ ಅವರು ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆಸಾಂತ್ವನ ಹೇಳಿದರು.
ಆಸ್ಪತ್ರೆಯ ವೈದ್ಯರ ಬಳಿ ಚಿಕಿತ್ಸೆಯ ಬಗ್ಗೆ ಸಚಿವರು ಮಾಹಿತಿಯನ್ನು ಪಡೆದುಕೊಂಡು, ಸದ್ಯ ನೀಡುತ್ತಿರುವ ಚಿಕಿತ್ಸೆಯನ್ನೇ ಮುಂದುವರಿಸುವಂತೆ ಸೂಚಿಸಿದರು.
‘ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಏಳು ಮಂದಿ ಚೇತರಿಕೆ ಕಾಣುತ್ತಿದ್ದಾರೆ.ಗಂಭೀರವಾಗಿ ಸಮಸ್ಯೆ ಎದುರಿಸುತ್ತಿರುವ ಐವರನ್ನು ನಾರಾಯಣ ನೇತ್ರಾಲಯಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಅವರಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಉಳಿದ ಮೂವರಲ್ಲಿ ಒಬ್ಬರಿಗೆ ಸೋಮವಾರ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಘಟನೆ ಹಿನ್ನೆಲೆಯಲ್ಲಿ ಆರಂಭದಿಂದಲೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಬಹುತೇಕರು ಚೇತರಿಕೆ ಹೊಂದಿದ್ದಾರೆ. ಚಿಕಿತ್ಸೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಿಲ್ಲ’ ಎಂದು ವೈದ್ಯರುಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.