ADVERTISEMENT

ಮೆಟ್ರೊ ಜಾಲ: ಆಸ್ತಿಗೆ ಆನೆ ಬಲ

ವರ್ಷಾಂತ್ಯಕ್ಕೆ ಇನ್ನೂ 26 ಕಿ.ಮೀ. ಸೇರ್ಪಡೆ l ಎಲೆಕ್ಟ್ರಾನಿಕ್ ಸಿಟಿ ಟೆಕ್ ಹಬ್‌ಗೆ ಆಗಸ್ಟ್‌ನಲ್ಲಿ ಸಂಪರ್ಕ

ವಿಜಯಕುಮಾರ್ ಎಸ್.ಕೆ.
Published 5 ಏಪ್ರಿಲ್ 2023, 6:11 IST
Last Updated 5 ಏಪ್ರಿಲ್ 2023, 6:11 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ಮೆಟ್ರೊ ರೈಲು ಮಾರ್ಗ ಯೋಜನೆಗಳು ಬೆಂಗಳೂರು ನಗರದ ಆಸ್ತಿ ಮೌಲ್ಯವನ್ನು ಗಗನಮುಖಿಯಾಗಿಸಿದೆ. ಪ್ರಗತಿಯಲ್ಲಿರುವ ಮೆಟ್ರೊ ಮಾರ್ಗದ ಕಾಮಗಾರಿ ಪೂರ್ಣಗೊಂಡರೆ ಮೆಟ್ರೊ ಜಾಲದ ಜತೆಗೆ ಆಸ್ತಿಗಳಿಗೂ ಇನ್ನಷ್ಟು ಬಲ ಬರಲಿದೆ.

ಸದ್ಯ 69.66 ಕಿಲೋ ಮೀಟರ್ ಇರುವ ಮೆಟ್ರೊ ರೈಲು ಮಾರ್ಗಕ್ಕೆ ಈ ವರ್ಷದ ಅಂತ್ಯಕ್ಕೆ ಇನ್ನೂ 26 ಕಿಲೋ ಮೀಟರ್
(ಆರ್‌.ವಿ.ರಸ್ತೆ–ಬೊಮ್ಮಸಂದ್ರ, ನಾಗಸಂದ್ರ–ಮಾದವಾರ, ಕೆಂಗೇರಿ–ಚಲ್ಲಘಟ್ಟ) ಸೇರ್ಪಡೆಯಾಗಲಿದೆ. ವೈಟ್‌ಫೀಲ್ಡ್ ಟೆಕ್‌ ಹಬ್‌ ಈಗಾಗಲೇ ಮೆಟ್ರೊ ಸಂಪರ್ಕ ಕಲ್ಪಿಸಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಟೆಕ್ ಹಬ್‌ಗೆ ಆಗಸ್ಟ್‌ನಲ್ಲಿ ದೊರೆಯಲಿದೆ.

ವೈಟ್‌ಫೀಲ್ಡ್‌ ಮೆಟ್ರೊ ಸಂಪರ್ಕ ಪರಿಪೂರ್ಣವಾಗಿ ಆರಂಭವಾಗದಿದ್ದರೂ ಕೆ.ಆರ್‌. ಪುರದಿಂದ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸಿದೆ. ಮೆಟ್ರೊ ರೈಲು ಹಾದು ಹೋಗಿರುವ ಸುತ್ತಮುತ್ತಲ ಬಡಾವಣೆಗಳಲ್ಲಿ ಆಸ್ತಿ ಮೌಲ್ಯ ಹೆಚ್ಚಾಗಿದೆ. ಐ.ಟಿ. ಕಂಪನಿಗಳ ತವರಾಗಿರುವ ಈ ಭಾಗದಲ್ಲಿ ಕೈಗೆಟಕದಷ್ಟು ಎತ್ತರದಲ್ಲಿ ಇದ್ದ ಆಸ್ತಿ ಮೌಲ್ಯ ಈಗ ಇನ್ನಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು.

ADVERTISEMENT

ಕೆ.ಆರ್‌.ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ಕಾಮಗಾರಿ ಬಾಕಿ ಇದೆ. ಕೆಂಗೇರಿಯಿಂದ ವೈಟ್‌ಫೀಲ್ಡ್‌ಗೆ ನೇರ ಮಾರ್ಗದ ಸಂಪರ್ಕ ದೊರೆತಿದ್ದರೆ ಆಸ್ತಿ ಮೌಲ್ಯ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ಅವರು ಹೇಳುತ್ತಾರೆ.

ಇದಲ್ಲದೇ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರ, ಹೆಬ್ಬಾಳ ಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮಾರ್ಗ ಮತ್ತು ಗೊಟ್ಟಿಗೆರೆ–ನಾಗವಾರ ಮಾರ್ಗಗಳ ಕಾಮಗಾರಿ ಪೂರ್ಣಗೊಳ್ಳಲು 2024 ಅಂತ್ಯದ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಕಾಮಗಾರಿ ಕೂಡ ವೇಗವಾಗಿ ನಡೆಯುತ್ತಿದೆ. ಈ ಮಾರ್ಗದಲ್ಲೂ ಈಗ ಆಸ್ತಿ ಮೌಲ್ಯ ಬಡವರ ಕೈಗೆ ಸಿಗದಂತಾಗಿದೆ. ಮೆಟ್ರೊ ರೈಲುಗಳ ಓಡಾಟ ಆರಂಭವಾದರೆ ಸುತ್ತಮುತ್ತಲ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಆಸ್ತಿ ಮೌಲ್ಯ ಆಕಾಶಕ್ಕೇ ಹೋಗಲಿದೆ.

ಮೆಟ್ರೊ ರೈಲುಗಳು ಕಾರ್ಯಾಚರಣೆ ನಂತರ ಸುತ್ತಮುತ್ತಲ ಭಾಗದಲ್ಲಿ ರಿಯಲ್ ಎಸ್ಟೇಟ್‌ ಬೇಡಿಕೆ ಹೆಚ್ಚವಾಗಲಿದ್ದು, ಅದಕ್ಕೆ ತಕ್ಕಂತೆ ದರವೂ ಹೆಚ್ಚಾಗಲಿದೆ. ಯೋಜನೆಯ ಪ್ರಸ್ತಾಪವಾದ ಕೂಡಲೇ ಆಸ್ತಿ ಮೌಲ್ಯ ಹೆಚ್ಚಾಗಿದೆ ಎಂದೂ ಹೇಳಲಾಗುವುದಿಲ್ಲ ಎಂದು ಕ್ರೆಡಾಯ್‌ ಬೆಂಗಳೂರು ಘಟಕದ ಭಾಸ್ಕರ್‌ ಟಿ.ನಾಗೇಂದ್ರಪ್ಪ ಅಭಿಪ್ರಾಯಪಡುತ್ತಾರೆ.

ಮೂರನೇ ಹಂತಕ್ಕೆ 2028ರ ಗುರಿ

ಮೂರನೇ ಹಂತದಲ್ಲಿ(ಕೆಂಪಾಪುರ–ಜೆ.ಪಿ.ನಗರ ನಾಲ್ಕನೇ ಹಂತ, ಮಾಗಡಿ ರಸ್ತೆ–ಕಡಬಗೆರೆ, ಸರ್ಜಾಪುರ–ಹೆಬ್ಬಾಳ) 81 ಕಿಲೋ ಮೀಟರ್ ಉದ್ದದ ಮಾರ್ಗ 2028ರ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗುವ ಅಂದಾಜಿದೆ.

ಅದರ ಜತೆಗೆ ಈಗ ಸರ್ಕಾರ ಪ್ರಸ್ತಾಪಿಸಿರುವ ಹೊಸ ನಾಲ್ಕು ಯೋಜನೆಗಳು 56 ಕಿಲೋ ಮೀಟರ್ ಮಾರ್ಗವನ್ನು ಹೊಂದಿವೆ.

ಮುಂದಿನ 10 ವರ್ಷಗಳಲ್ಲಿ ನಗರದ ಎಲ್ಲಾ ಪ್ರದೇಶದಲ್ಲೂ ಎರಡು ಕಿಲೋ ಮೀಟರ್ ವ್ಯಾಪ್ತಿಗೆ ಮೆಟ್ರೊ ರೈಲು ಸಂಪರ್ಕ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಹೊಸ ನಾಲ್ಕು ಮೆಟ್ರೊ ರೈಲು ಮಾರ್ಗಗಳನ್ನು ಪ್ರಸ್ತಾಪಿಸಿದೆ.

ಎಂ.ಜಿ.ರಸ್ತೆಯಿಂದ ಹಳೇ ವಿಮಾನ ನಿಲ್ದಾಣ ರಸ್ತೆ ಮೂಲಕ ಮಾರತಹಳ್ಳಿ ಮಾರ್ಗವಾಗಿ ವೈಟ್‌ಫೀಲ್ಡ್‌ ಸಂಪರ್ಕಿಸುವ ಮಾರ್ಗ, ನಾಗವಾರದಿಂದ ಥಣಿಸಂದ್ರ ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮತ್ತೊಂದು ಮಾರ್ಗವನ್ನು ಪ್ರಸ್ತಾಪಿಸಲಾಗಿದೆ.

ವೈಟ್‌ಫೀಲ್ಡ್‌ ತನಕ ನಿರ್ಮಾಣವಾಗಿರುವ ಮಾರ್ಗವನ್ನು ಕಾಟಂನಲ್ಲೂರು ಮಾರ್ಗವಾಗಿ ಹೊಸಕೋಟೆಗೆ, ಬನ್ನೇರುಘಟ್ಟ ರಸ್ತೆಯ ಮಾರ್ಗವನ್ನು ಜಿಗಣಿಗೆ ವಿಸ್ತರಿಸುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

ಒಟ್ಟಾರೆ ಮೆಟ್ರೊ ರೈಲು ಯೋಜನೆ ಇಡೀ ನಗರದ ಹೊರ ವಲಯಗಳಿಗೂ ಸಂಪರ್ಕಿಸಲಿದ್ದು, ಬೆಂಗಳೂರು ನಗರ ಮತ್ತು ಹೊರ ವಲಯದ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡಿದೆ. ಎಲ್ಲೆಲ್ಲೂ ಹೊಸ ಬಡಾವಣೆಗಳು ತಲೆ ಎತ್ತುತ್ತಿದ್ದು, ಜಮೀನುಗಳು ಬಡಾವಣೆ ಸ್ವರೂಪ ಪಡೆದುಕೊಳ್ಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.