ADVERTISEMENT

Bengaluru Namma Metro: ಗೊಟ್ಟಿಗೆರೆ-–ನಾಗವಾರ ಮೆಟ್ರೊ: ಬೇಕಿನ್ನು 2 ವರ್ಷ

ಬೆಂಗಳೂರಿನ ಅತಿ ಉದ್ದದ ಸುರಂಗ ಮಾರ್ಗ: 2024ರ ಅಂತ್ಯಕ್ಕೆ ಕಾರ್ಯಾರಂಭ

ವಿಜಯಕುಮಾರ್ ಎಸ್.ಕೆ.
Published 1 ಜನವರಿ 2023, 2:28 IST
Last Updated 1 ಜನವರಿ 2023, 2:28 IST
ಶಿವಾಜಿನಗರದಲ್ಲಿ ಮೆಟ್ರೊ ರೈಲು ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ  –ಪ್ರಜಾವಾಣಿ ಚಿತ್ರಗಳು/ರಂಜು ಪಿ.
ಶಿವಾಜಿನಗರದಲ್ಲಿ ಮೆಟ್ರೊ ರೈಲು ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ –ಪ್ರಜಾವಾಣಿ ಚಿತ್ರಗಳು/ರಂಜು ಪಿ.   

ಬೆಂಗಳೂರು: ನಗರದ ಅತಿ ಉದ್ದದ ಸುರಂಗ ಮಾರ್ಗ ಒಳಗೊಂಡ ಮೆಟ್ರೊ ರೈಲು ಮಾರ್ಗ ಎಂದರೆ ಗೊಟ್ಟಿಗೆರೆ–ನಾಗವಾರ ಮಾರ್ಗ. ಸುರಂಗ ಕೊರೆಯುವ ಸವಾಲಿನ ಕೆಲಸ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಬೇಕಿದೆ.

ಒಟ್ಟಾರೆ 21.25 ಕಿಲೋ ಮೀಟರ್ ಉದ್ದದ ಪಿಂಕ್ ಮಾರ್ಗದಲ್ಲಿ ಗೊಟ್ಟಿಗೆರೆ–ಡೇರಿ ವೃತ್ತದ ತನಕ ಮಾತ್ರ ಎಲಿವೇಟೆಡ್(ಎತ್ತರಿಸಿದ) ಮಾರ್ಗ ನಿರ್ಮಾಣವಾಗಲಿದೆ. ಉಳಿದ 13.9 ಕಿಲೋ ಮೀಟರ್(ಡೇರಿ ವೃತ್ತ–ನಾಗವಾರ) ಸುರಂಗ ಮಾರ್ಗವೇ ಇದ್ದು, ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದೆ.

ಡೇರಿ ವೃತ್ತದಿಂದ ನಾಗವಾರ ರಾಷ್ಟ್ರೀಯ ಮಿಲಿಟರಿ ಶಾಲೆ ತನಕದ ಮೊದಲ ಪ್ಯಾಕೇಜ್‌ನಲ್ಲಿ ಸುರಂಗ ಕಾಮಗಾರಿಯನ್ನು ಎರಡು(ರುದ್ರ, ವಾಮಿಕಾ, ವರದಾ) ಟಿಬಿಎಂಗಳು(ಟನಲ್ ಬೋರಿಂಗ್ ಮಷಿನ್‌) ನಿರ್ವಹಿಸುತ್ತಿದ್ದು, ಶೇ 56ರಷ್ಟು ಪೂರ್ಣಗೊಂಡಿದೆ. ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿನಗರ ತನಕದ ಕಾಮಗಾರಿಯನ್ನು ಎರಡು ಟಿಬಿಎಂಗಳು(ಲಾವಿ, ಅವನಿ) ನಿರ್ವಹಿಸುತ್ತಿದ್ದು, ಶೇ 76ರಷ್ಟು ಪೂರ್ಣಗೊಂಡಿದೆ.

ADVERTISEMENT

ಶಿವಾಜಿನಗರದಿಂದ ಟ್ಯಾನರಿ ರಸ್ತೆ ತನಕದ ಕಾಮಗಾರಿಯನ್ನು ಎರಡು ಟಿಬಿಎಂಗಳು(ಉರ್ಜಾ, ವಿಂಧ್ಯಾ) ನಿರ್ವಹಿಸುತ್ತಿದ್ದು, ಶೇ 73ರಷ್ಟು ಪೂರ್ಣಗೊಂಡಿದೆ. ಟ್ಯಾನರಿ ರಸ್ತೆಯಿಂದ ನಾಗವಾರ ತನಕ ಎರಡು ಟಿಬಿಎಂಗಳು (ಭದ್ರ, ತುಂಗಾ) ಸುರಂಗ ಕೊರೆಯುತ್ತಿದ್ದು, ಶೇ 36ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 11 ನಿಲ್ದಾಣಗಳು ನೆಲದಡಿಯಲ್ಲೇ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ. ಜಯದೇವ ಜಂಕ್ಷನ್‌, ಎಂ.ಜಿ.ರಸ್ತೆ ಮತ್ತು ನಾಗವಾರದಲ್ಲಿ ಇಂಟರ್ ಚೇಂಜ್ ನಿಲ್ದಾಣಗಳು ನಿರ್ಮಾಣವಾಗುವುದು ಈ ಮಾರ್ಗದ ಮತ್ತೊಂದು ವಿಶೇಷ.

ಗೊಟ್ಟಿಗೆರೆಯಿಂದ ನಾಗವಾರಕ್ಕೆ ಸಂಪರ್ಕಿಸುವ ಈ ಮಾರ್ಗವು ದಕ್ಷಿಣ ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಮಾರ್ಗವಾಗಿದೆ. ಎತ್ತರಿಸಿದ ಕಾಮಗಾರಿ ಬೇಗ ಪೂರ್ಣಗೊಳ್ಳಲಿದ್ದು, ಸುರಂಗ ಮಾರ್ಗದ ಕಾಮಗಾರಿ 2024ರ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಅಂದಾಜಿಸಿದ್ದಾರೆ.

ಮೂರು ಇಂಟರ್ ಚೇಂಜ್ ನಿಲ್ದಾಣ

ಎಂ.ಜಿ.ರಸ್ತೆ, ಶಿವಾಜಿನಗರ, ಪಾಟರಿಟೌನ್‌, ಟ್ಯಾನರಿ ರಸ್ತೆ ಮೂಲಕ ಹಾದು ಹೋಗಲಿದ್ದು, ಅತ್ಯಂತ ವಾಹನ ದಟ್ಟಣೆ ಮತ್ತು ಕಿಷ್ಕೆಂಧೆಯಂತಿರುವ ಈ ಪ್ರದೇಶಗಳಲ್ಲಿ ಎಲ್ಲಾ ನಿಲ್ದಾಣಗಳು ನೆಲದಡಿಯಲ್ಲೇ ನಿರ್ಮಾಣ ಆಗಲಿವೆ.

ಜಯದೇವ ಜಂಕ್ಷನ್, ಎಂ.ಜಿ.ರಸ್ತೆ ಮತ್ತು ನಾಗವಾರದಲ್ಲಿ ಇಂಟರ್ ಚೇಂಜ್‌(ಮಾರ್ಗ ಬದಲಾವಣೆ) ನಿಲ್ದಾಣಗಳು ನಿರ್ಮಾಣವಾಗುತ್ತಿವೆ.

ಜಯದೇವ ಜಂಕ್ಷನ್‌ನಲ್ಲಿ ರಸ್ತೆ ಮೇಲೆ ಎತ್ತರಿಸಿದ ಬಸ್‌ ಮಾರ್ಗ, ಅದರ ಮೇಲೆ ಹಳದಿ(ಆರ್‌.ವಿ.ರಸ್ತೆ–ಬೊಮ್ಮಸಂದ್ರ) ಮೆಟ್ರೊ ಮಾರ್ಗ, ಅದರ ಮೇಲೆ ಪಿಂಕ್‌ ಮಾರ್ಗ(ಗೊಟ್ಟಿಗೆರೆ–ನಾಗವಾರ) ನಿರ್ಮಾಣವಾಗುತ್ತಿದೆ. ನಗರದ ಅತಿ ಎತ್ತರದ ಮೆಟ್ರೊ ರೈಲು ಮಾರ್ಗ ಇದಾಗಲಿದೆ.

ವಿಮಾನ ನಿಲ್ದಾಣ ಮಾರ್ಗಕ್ಕೆ ಸಂಪರ್ಕ

ನಗರದ ಕೇಂದ್ರ ಭಾಗದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ ರೈಲು ಮಾರ್ಗ ಇದಾಗಲಿದೆ.

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್.ಪುರ, ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣ ತಲುಪುವ ನೀಲಿ ಮಾರ್ಗಕ್ಕೆ ನಾಗವಾರ ಜಂಕ್ಷನ್‌ನಲ್ಲಿ ಈ ಮಾರ್ಗ ಸೇರ್ಪಡೆಯಾಗಲಿದೆ. ಪ್ರಯಾಣಿಕರು ಈ ನಿಲ್ದಾಣದಲ್ಲಿ ಇಳಿದು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.