ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ಇ–ಶೌಚಾಲಯ ತೆರೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 19:26 IST
Last Updated 31 ಜುಲೈ 2022, 19:26 IST
   

ಇ–ಶೌಚಾಲಯ ತೆರೆಯಲು ಆಗ್ರಹ’

ಜಯನಗರದ 5ನೇ ಬ್ಲಾಕ್‌ ಶಾಲಿನಿ ಮೈದಾನದ ಹತ್ತಿರ ಇರುವ ಇ–ಶೌಚಾಲಯ ಕೆಟ್ಟು ಹೋಗಿ ವರ್ಷಗಳೇ ಕಳೆದಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಪುರುಷರು ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಮಹಿಳೆಯರು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ. ಇ–ಶೌಚಾಲಯ ತೆರೆಯಲು ಮನವಿ ಸಲ್ಲಿಸಲಾಗಿದೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

-ಎಂ. ಚಂದ್ರಶೇಖರ್,ಸ್ಥಳೀಯ ನಿವಾಸಿ

****

ADVERTISEMENT

‘ಬಸವೇಶ್ವರನಗರ: ರಸ್ತೆ ಗುಂಡಿ ಮುಚ್ಚಿ’

ಬಸವೇಶ್ವರನಗರದ 3ನೇ ವಿಭಾಗದ 3ನೇ ಹಂತದ 2ನೇ ಅಡ್ಡರಸ್ತೆ ಗುಂಡಿಗಳಿಂದ ಕೂಡಿದೆ. ಇದರಿಂದ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ಪ್ರತಿ ಬಾರಿ ತೇಪೆ ಹಾಕುವ ಕೆಲಸ ಮಾತ್ರ ಮಾಡಲಾಗುತ್ತಿದೆ. ಈ ಮಾರ್ಗದಲ್ಲಿ ಸಂಚರಿಸಿದರೆ ನರಕಯಾತನೆ ಅನುಭವಿಸಿದಂತಾಗುತ್ತದೆ. ಗುಂಡಿಗಳ ನಡುವೆ ರಸ್ತೆಯನ್ನು ಹುಡುಕಬೇಕಾಗಿದೆ. ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ತಿಳಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಈಗಲಾದರೂ ಇತ್ತ ಗಮನಹರಿಸಿ ವಾಹನ ಸವಾರರಿಗೆ ಆಗುತ್ತಿರುವ ಅನನುಕೂಲ ಸರಿಪಡಿಸಬೇಕು.

-ಹನುಮಂತ ರಾಜು,ಸ್ಥಳೀಯ ನಿವಾಸಿ

****

‘ರಸ್ತೆ ಗುಂಡಿ ಮುಚ್ಚಿ’

ಹೆಬ್ಬಾಳದ ಚೋಳನಗರದಲ್ಲಿರುವ ರಾಜೀವ್‌ ಗಾಂಧಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೇಸಿಗೆಯಲ್ಲಿ ವಾಹನ ಸಂಚಾರದಿಂದ ಎಲ್ಲೆಡೆ ದೂಳಿನ ಮಜ್ಜನವಾದರೆ, ಮಳೆಗಾಲದಲ್ಲಿ ಗುಂಡಿಯಲ್ಲಿ ನೀರು ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂಬುದು ಗೊತ್ತಾಗುವುದಿಲ್ಲ. ಕೂಡಲೇ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

–ಜಿ.ಎಸ್. ಮಂಜುನಾಥ್,ಚೋಳನಗರ, ಹೆಬ್ಬಾಳ

****

‘ತರಕಾರಿ ಅಂಗಡಿಗಳನ್ನು ಸ್ಥಳಾಂತರಿಸಿ’

ಬಸವನಗುಡಿಯ ಬ್ಯೂಗಲ್ ರಾಕ್ ಮತ್ತು ಪಶ್ಚಿಮ ಆಂಜನೇಯ ದೇವಸ್ಥಾನದ ರಸ್ತೆಗಳಲ್ಲಿ ತರಕಾರಿ ಅಂಗಡಿಗಳನ್ನು ಇಡಲಾಗುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸುಮಾರು 40 ಜನ ತರಕಾರಿ ಮಾರಾಟಗಾರರು ರಸ್ತೆಯ ಪಕ್ಕದಲ್ಲಿ ಅಂಗಡಿಗಳನ್ನು ಹಚ್ಚಿಕೊಂಡು ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಈ ರಸ್ತೆಯಿಂದ ಅವರನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಬಿಬಿಎಂಪಿಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ.

- ವಿ. ಪ್ರಕಾಶ್,ಪಶ್ಚಿಮ ಆಂಜನೇಯ ದೇವಸ್ಥಾನದ ಬೀದಿ ನಿವಾಸಿ

****

‘ವಾಲಿದ ಮರ ತೆರವುಗೊಳಿಸಿ’

ಶನಿವಾರ ರಾತ್ರಿ ಸುರಿದ ಮಳೆ ಮತ್ತು ಗಾಳಿ ರಭಸಕ್ಕೆ ಜಯನಗರದ 35ನೇ ಕ್ರಾಸ್ 14ಮುಖ್ಯ 4ನೇ ಬ್ಲಾಕ್‌ನ ಸುಧಾ ದತ್ತ ಅವರ ಮನೆ ಮೇಲೆ ಮರವೊಂದು ಬಿದ್ದಿದೆ. ಮನೆಗೆ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಹಾನಿಯಾಗುವ ಮುನ್ನ ಬಿಬಿಎಂಪಿ ಅಧಿಕಾರಿಗಳು ಮರ ತೆರವುಗೊಳಿಸಲುಅಗತ್ಯಕ್ರಮಕೈಗೊಳ್ಳಬೇಕು.

–ಸುಧಾ ದತ್ತ, ಸ್ಥಳೀಯ ನಿವಾಸಿ

****

‘ವಾಲಿದ ವಿದ್ಯುತ್‌ ಕಂಬ ತೆರವುಗೊಳಿಸಿ’

ಜ್ಞಾನಭಾರತಿ 2ನೇ ಹಂತದ ಗಣೇಶ ದೇವಸ್ಥಾನದ ಹತ್ತಿರದ ಪಾರ್ಕ್‌ ಎದುಗಡೆ ಇರುವ ವಿದ್ಯುತ್ ಕಂಬ ವಾಲಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು, ವೃದ್ಧರು ಪ್ರಯಾಣಿಕರು ಇಲ್ಲಿಂದಲೇ ಸಂಚರಿಸುತ್ತಿದ್ದು, ಅಪಾಯ ಸಂಭವಿಸುವ ಮುನ್ನ ವಾಲಿದ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬವನ್ನು ತೆರವುಗೊಳಿಸಿಬೇಕು.

ಯಶಸ್ವಿ.ಜೆ.,ಜ್ಞಾನಭಾರತಿ ನಿವಾಸಿ

****

‘ಮಾಚೋಹಳ್ಳಿ: ರಸ್ತೆ ದುರಸ್ತಿಗೊಳಿಸಿ’

ಮಾಚೋಹಳಿಯಿಂದ ಕಾಚೋಹಳ್ಳಿಗೆ ಸಂಪರ್ಕ ಕಲ್ಪಿಸುವ 3 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆ ಬಂದರೆ ರಸ್ತೆಯೆಲ್ಲ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಅಲ್ಲದೇ ರಸ್ತೆಯುದ್ದಕ್ಕೂ ಬಿದ್ದಿರುವ ದೊಡ್ಡ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಶಾಲಾ ಮಕ್ಕಳು, ವಯೋವೃದ್ಧರು ಈ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಕಾಲದಲ್ಲಿ ದಿನನಿತ್ಯ ದೂಳಿನ ಮಜ್ಜನವಾಗುತ್ತದೆ. ಇದೇ ರಸ್ತೆ ಇಲ್ಲಿನ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕೂಡಲೇ ರಸ್ತೆ ದುರಸ್ತಿಗೊಳಿಸಿಬೇಕು.

- ಲಿಂಗೇಗೌಡ. ಎಸ್.ಬಿ., ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.