ಬೆಂಗಳೂರು:ಫಿಲಿಫೈನ್ಸ್‌ನಲ್ಲಿ ಲಘು ವಿಮಾನದ ತರಬೇತಿ ಹಾರಾಟದ ವೇಳೆ ಬೆಂಗಳೂರಿನ ಪೈಲಟ್ ನವೀನ್ (30) ಎಂಬುವರು ಮೃತಪಟ್ಟಿದ್ದು, ಅವರ ಶವ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಪತ್ತೆಯಾಗಿದೆ.
ಮೃತ ನವೀನ್, ನಗರದ ನಂದಿನಿ ಲೇಔಟ್‌ನ ನಿವಾಸಿಗಳಾದ ಲೋಕೋಪಯೋಗಿ ಇಲಾಖೆ ಅಧಿಕಾರಿ ನಾಗರಾಜ್ ಮತ್ತು ಮೀನಾ ದಂಪತಿಯ ಪುತ್ರ. ಮೂರು ವರ್ಷಗಳಿಂದ ಪತ್ನಿ ಡಾ. ಅಕ್ಷತಾ ಜತೆ ಫಿಲಿಫೈನ್ಸ್‌ನಲ್ಲಿ ನೆಲೆಸಿದ್ದರು.
ನವೀನ್ ಹಾಗೂ ಉತ್ತರ ಪ್ರದೇಶದ ಕುಲದೀಪ್ ಸಿಂಗ್ (25), ಫೆ. 4ರಂದು ಬುಲಕಾನ್‌ನ ಫ್ಲಾರಿಡೆಲ್ ಏರ್‌ಪೋರ್ಟ್‌ನಿಂದ 2 ಸೀಟರ್‌ಗಳ ಸೆಸ್ನಾ ವಿಮಾನದಲ್ಲಿ ಹಾರಾಟ ಆರಂಭಿಸಿದ್ದರು.
ಅದೇ ವೇಳೆ ಅರಣ್ಯ ಪ್ರದೇಶದಲ್ಲಿ ವಿಮಾನ ಪತನಗೊಂಡಿತ್ತು. ಫಿಲಿಫೈನ್ಸ್‌ನ ವಾಯುಸೇನೆ, ಪೊಲೀಸರು ಹಾಗೂ ಸ್ಥಳೀಯ ಸ್ವಯಂಸೇವಕರು ಕಾರ್ಯಾಚರಣೆ ನಡೆಸಿ ವಿಮಾನ ಪತನವಾಗಿದ್ದ ಸ್ಥಳ ಪತ್ತೆ ಹಚ್ಚಿದ್ದಾರೆ. ಅಲ್ಲಿಯೇ ಶವಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.
‘ನವೀನ್ ಅವರ ಶವವನ್ನು ಭಾನುವಾರ ಬೆಂಗಳೂರಿಗೆ ತರುವ ಸಾಧ್ಯತೆ ಇದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.