ಬೆಂಗಳೂರು: ಮಹಿಳೆಯರ ಸುರಕ್ಷತೆ, ತುರ್ತು ಸಂದರ್ಭಗಳಲ್ಲಿ ತ್ವರಿತ ಸ್ಪಂದನೆ ಹಾಗೂ ಕಾನೂನು
ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರದ ಕಮಿಷನರ್ ಕಚೇರಿ ಬಳಿ ಸುಸಜ್ಜಿತ ಕಮಾಂಡ್ ಕೇಂದ್ರ ನಿರ್ಮಿಸಲಾಗಿದೆ.
ಕೇಂದ್ರ ಸರ್ಕಾರ ನಿರ್ಭಯಾ ನಿಧಿಯಡಿ ರೂಪಿಸಲಾದ ₹ 450 ಕೋಟಿ ವೆಚ್ಚದ ಸುರಕ್ಷಿತ ನಗರ ಯೋಜನೆಯಡಿ ಬಹುಮಹಡಿ ಕಟ್ಟಡದಲ್ಲಿ ಕಮಾಂಡ್ ಕೇಂದ್ರ ನಿರ್ಮಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
‘ನಗರದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯ ಹಾಗೂ ಕಿರುಕುಳ ಪ್ರಕರಣಗಳನ್ನು ತಡೆಯಲು ಕೇಂದ್ರ ಸ್ಥಾಪಿಸಲಾಗಿದೆ. ಸುರಕ್ಷಿತ ನಗರವೆಂದು ಮಹಿಳೆಯರಲ್ಲಿ ಧೈರ್ಯ ಮೂಡಿಸುವ ಉದ್ದೇಶ ಕೇಂದ್ರದ್ದಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಪಾದಚಾರಿಗಳ ಸುಲಿಗೆ, ಕಳ್ಳತನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಅಪರಾಧಗಳನ್ನು ನಿಯಂತ್ರಿಸುವ ಸಕಲ ಸೌಲಭ್ಯವೂ ಕೇಂದ್ರದಲ್ಲಿದೆ. ಯಾವುದೇ ಅಪರಾಧ ನಡೆದರೂ ತ್ವರಿತವಾಗಿ ಸ್ಪಂದಿಸುವ ವ್ಯವಸ್ಥೆ ಸಹ ಇದೆ’ ಎಂದು ತಿಳಿಸಿದರು.
ಕಮಾಂಡ್ ಕೇಂದ್ರದ ಕಾರ್ಯಾಚರಣೆ:
‘ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸ್ಥಳಗಳಲ್ಲಿ ‘ನೇತ್ರಾ’ ಹೆಸರಿನಲ್ಲಿ 3,500 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2024ರ ಮಾರ್ಚ್ ಒಳಗಾಗಿ ಹೊಸದಾಗಿ 4,500 ಕ್ಯಾಮೆರಾ ಅಳವಡಿಸಲಾಗುವುದು. 35 ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾ ಹಾಗೂ ಧ್ವನಿ ಗ್ರಹಿಕೆ ಸಲಕರಣೆ ಸಮೇತ ಐಸ್‌ಲ್ಯಾಂಡ್ ನಿರ್ಮಿಸಲಾಗಿದೆ. ಕ್ಯಾಮೆರಾ ಹಾಗೂ ಐಸ್‌ಲ್ಯಾಂಡ್ ನಿರ್ವಹಣೆಯು ಕಮಾಂಡ್ ಕೇಂದ್ರದಿಂದ ಆಗಲಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
‘ಕಮಾಂಡ್ ಕೇಂದ್ರದಲ್ಲಿ ದಿನದ 24 ಗಂಟೆಯೂ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಕ್ಯಾಮೆರಾಗಳ ಮೂಲಕ ಸ್ಥಳಗಳ ಮೇಲೆ ನಿಗಾ ವಹಿಸಲಿದ್ದಾರೆ. ಕಿರುಕುಳ, ಅಸಭ್ಯ ವರ್ತನೆ, ದೌರ್ಜನ್ಯ ಹಾಗೂ ಇತರೆ ಸಂಕಷ್ಟದ ಸಂದರ್ಭದಲ್ಲಿ ಮಹಿಳೆಯರ ಕರೆಗಳಿಗೆ ಕಮಾಂಡ್ ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಲಿದ್ದಾರೆ. ಕೆಲ ನಿಮಿಷಗಳಲ್ಲಿ ಹೊಯ್ಸಳ ಗಸ್ತು ವಾಹನಗಳು ಘಟನಾ ಸ್ಥಳಕ್ಕೆ ತಲುಪುವ ವ್ಯವಸ್ಥೆ ಇದೆ’ ಎಂದರು.
‘ಮಹಿಳೆಯರು ಹೆಚ್ಚಾಗಿ ಓಡಾಡುವ ಬಸ್ ನಿಲ್ದಾಣಗಳು, ಕಾಲೇಜು, ಉದ್ಯಾನ, ಕಚೇರಿಗಳ ಬಳಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಯಾವುದೇ ಕರೆ ಬಂದರೂ ತುರ್ತಾಗಿ ಸ್ಪಂದಿಸ
ಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.