ಬೆಂಗಳೂರು: ಪಾನಮತ್ತರಾಗಿ ವಾಹನ ಚಲಾಯಿಸುವವರ ವಿರುದ್ಧ ಶನಿವಾರ ರಾತ್ರಿ ವಿಶೇಷ ಅಭಿಯಾನ ನಡೆಸಿದ ಪೊಲೀಸ್ ಕಮಿಷನರ್ ಸಿ.ಎಚ್. ಪ್ರತಾಪ್ ರೆಡ್ಡಿ, ರಸ್ತೆಗೆ ಇಳಿದು ಆಲ್ಕೋಮೀಟರ್ ಸಮೇತ ಚಾಲಕರನ್ನು ಪರೀಕ್ಷೆಗೆ ಒಳಪಡಿಸಿದರು.
ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ಸಾವು–ನೋವುಗಳು ಸಂಭವಿಸುತ್ತಿವೆ. ಇಂಥ ಪ್ರಕರಣಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡಿರುವ ಪೊಲೀಸರು, ಒಪೇರಾ ಜಂಕ್ಷನ್‌ನಲ್ಲಿ (ರೆಸಿಡೆನ್ಶಿ ರಸ್ತೆ–ಬ್ರಿಗೇಡ್ ರಸ್ತೆ) ವಿಶೇಷ ಅಭಿಯಾನ ನಡೆಸಿದರು.
ಮದ್ಯ ಕುಡಿದು ಚಾಲನೆ ಮಾಡುವುದರಿಂದ ಸಂಭವಿಸಿರುವ ಅಪಘಾತ ಹಾಗೂ ಪ್ರಾಣ ಕಳೆದುಕೊಳ್ಳುವ ವ್ಯಕ್ತಿಗಳ ಮಾದರಿಯನ್ನು ಪೊಲೀಸರುಪ್ರದರ್ಶಿಸಿದರು. ಅಪಘಾತಗಳ ಅಂಕಿ–ಅಂಶಗಳನ್ನು ತೆರೆದಿಟ್ಟು, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
ಅಭಿಯಾನದ ಭಾಗವಾಗಿ ರಸ್ತೆಗೆ ಇಳಿದ ಕಮಿಷನರ್, ವಾಹನಗಳ ತಡೆದು ಆಲ್ಕೋಮೀಟರ್ ಮೂಲಕ ಚಾಲಕರ ಬಾಯಿ ತಪಾಸಣೆ ನಡೆಸಿದರು. ಬೈಕ್ ಸವಾರರನ್ನೂ ಪರೀಕ್ಷಿಸಿದರು. ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ, ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ಸ್ಥಳದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.