ಬೆಂಗಳೂರು: ಸಮವಸ್ತ್ರ ಧರಿಸಿ ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡು ಕೈಯಲ್ಲಿ ಲಾಠಿ ಹಿಡಿದು ಬಂದಿದ್ದ ಬಾಲಕನಿಗೆ ಪೊಲೀಸರು ಸೆಲ್ಯೂಟ್ ಹೊಡೆದರು. ಅಧಿಕಾರಿ ಬಂದಿದ್ದಾರೆಂದು ತಿಳಿದ ಡಿಸಿಪಿ ಸಹ ಸ್ಥಳಕ್ಕೆ ಬಂದು ಹೂಗುಚ್ಛ ನೀಡಿ ಬರ ಮಾಡಿಕೊಂಡರು.
ಇದು, ದಕ್ಷಿಣ ವಿಭಾಗದ (ಸಂಚಾರ) ಡಿಸಿಪಿ ಕಚೇರಿಯಲ್ಲಿ ಕಂಡು ಬಂದ ದೃಶ್ಯಗಳು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 13 ವರ್ಷದ ಬಾಲಕ ಮೋಸಿನ್ ರಾಜ್ ಎಂಬಾತ ಒಂದು ದಿನ ಡಿಸಿಪಿ ಆಗಿ ಸಂಭ್ರಮಪಟ್ಟನು.
‘ನಾನೊಬ್ಬ ಪೊಲೀಸ್ ಅಧಿಕಾರಿ ಆಗಬೇಕು’ ಎಂಬ ಮೋಸಿನ್ ರಾಜ್‌ನ ಆಸೆಯಂತೆ, ಆತನನ್ನು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಅವರು ಒಂದು ದಿನದ ಡಿಸಿಪಿ ಆಗಿ ಮಾಡಿದರು. ತಮ್ಮ ಕುರ್ಚಿಯಲ್ಲಿ ಕೂರಿಸಿ, ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಟ್ಟರು.
ಆಸ್ಪತ್ರೆಯಿಂದ ಬೆಳಿಗ್ಗೆ 11.30 ಗಂಟೆಗೆ ಜಯನಗರದಲ್ಲಿರುವ ಡಿಸಿಪಿ ಕಚೇರಿಗೆ ಬಂದಿದ್ದ ಮೋಸಿನ್ ರಾಜ್‌ನನ್ನು ಡಿಸಿಪಿ ಹಾಗೂ ಸಿಬ್ಬಂದಿ ಸ್ವಾಗತಿಸಿದರು. ಪ್ರತಿಯೊಬ್ಬ ಸಿಬ್ಬಂದಿಯೇ ಸೆಲ್ಯೂಟ್ ಮಾಡಿ, ತಮ್ಮ ಪರಿಚಯ ಮಾಡಿಕೊಂಡರು. ಅವರೆಲ್ಲರಿಗೂ ಬಾಲಕ ಹಸ್ತಲಾಘವ ನೀಡಿದ.
ನಂತರ, ಕಚೇರಿಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಸ್ಪರ್ಶಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡ. ಆರೋಪಿಗಳನ್ನು ಇರಿಸುವ ಸೆಲ್‌ಗೂ ಹೋಗಿ ವೀಕ್ಷಿಸಿದ. ನಂತರ, ಡಿಸಿಪಿ ಅವರ ಕುರ್ಚಿಯಲ್ಲಿ ಕುಳಿತು ಅಧಿಕಾರ ಚಲಾಯಿಸಿದ. ಬಳಿಕ, ಕಚೇರಿ ವ್ಯಾಪ್ತಿಯ ಪ್ರದೇಶದಲ್ಲಿ ಜೀಪಿನಲ್ಲೇ ಗಸ್ತು ತಿರುಗಿದ. ಬಾಲಕನ ಖುಷಿ ಕಂಡು ಪೋಷಕರು ಸಂತೋಷಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.