ಬೈಕ್‌ಗಳ ಕರ್ಕಶ ಶಬ್ದ: 137 ಪ್ರಕರಣ ದಾಖಲು
ದೇವನಹಳ್ಳಿ: ಪಟ್ಟಣದ ಮಾರ್ಗವಾಗಿ ವಾರಾಂತ್ಯದ ಹಿನ್ನೆಲೆಯಲ್ಲಿ ನಂದಿ ಬೆಟ್ಟದ ಸೂರ್ಯೋದಯದ ದೃಶ್ಯ ಸವಿಯಲು ಸಾಗುತ್ತಿದ್ದ ಐಷಾರಾಮಿ ಹಾಗೂ ನಿಯಮಬಾಹಿರವಾಗಿ ಕರ್ಕಶ ಶಬ್ದ ಮಾಡುತ್ತಾ ಕಿರಿಕಿರಿ ಉಂಟು ಮಾಡುತ್ತಿದ್ದ ಬೈಕ್‌ಗಳನ್ನು ಶನಿವಾರ ಬೆಳ್ಳಂಬೆಳಿಗ್ಗೆ ಆರ್‌ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 137 ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕವಾಗಿ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಟಿ. ಹಾಲಸ್ವಾಮಿ ನೇತೃತ್ವದಲ್ಲಿ ಪಟ್ಟಣದ ನಂದಿ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬೈಕ್ ಸವಾರರಿಗೆ ಕೊರೆಯುವ ಚಳಿಯಲ್ಲಿ ಬಿಸಿ ಮುಟ್ಟಿಸಿದರು.
ಐದು ತಂಡಗಳನ್ನು ರಚಿಸಿಕೊಂಡು ಶನಿವಾರ ಬೆಳಿಗ್ಗೆ 5ರ ಸುಮಾರಿಗೆ ರಸ್ತೆಗಳಿದಿದ್ದ ಅಧಿಕಾರಿಗಳು ಬೈಕ್ ವ್ಹೀಲಿಂಗ್, ಕರ್ಕಶ ಶಬ್ದ ಮಾಡುವ, ನಿಯಮಬಾಹಿರವಾಗಿ ತಮಗೆ ಇಷ್ಟಬಂದಂತೆ ರೂಪಿಸಿಕೊಂಡಿದ್ದ 120 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಸೈಲೆನ್ಸರ್ ಬದಲಾಯಿಸಿಕೊಂಡು ಶಬ್ದ ಮಾಲಿನ್ಯಕ್ಕೆ ಕಾರಣವಾಗಿರುವ ಸವಾರರನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು, ಕಾನೂನಿನ ಬಗ್ಗೆ ಪಾಠ ಹೇಳಿ ದಂಡ ಸಂಗ್ರಹಿಸಿದ್ದಾರೆ. ಇದರೊಂದಿಗೆ ಎಫ್‌ಸಿ ಮುಗಿದು ಹೋಗಿದ್ದ ಬಸ್‌ಗಳು ಸೇರಿದಂತೆ ಶಾಲಾ ವಾಹನಗಳನ್ನು ವಿಶೇಷ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್‌ಟಿಒ ಅಧಿಕಾರಿಗಳಾದ ಉಮೇಶ್, ನರಸಿಂಹ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಗಲಾಟೆಯಲ್ಲಿ ಗಾಯಗೊಂಡ ವ್ಯಕ್ತಿ ಸಾವು
ಮಾಗಡಿ: ತಾಲ್ಲೂಕಿನ ಸೋಲೂರು ಬಳಿ ಶುಕ್ರವಾರ ರಾತ್ರಿ ಅಪಘಾತವೊಂದಕ್ಕೆ ಸಂಬಂಧಿಸಿ ಆರಂಭವಾದ ಗಲಾಟೆ ವ್ಯಕ್ತಿಯ ಸಾವಿನಲ್ಲಿ ಅಂತ್ಯವಾಗಿದೆ.ಬೆಂಗಳೂರಿನ ಆರ್.ಟಿ. ನಗರದ ವೆಲ್ಟಿಂಗ್ ಕಾರ್ಮಿಕ ಸಯ್ಯದ್ಮಸೂದ್ (36) ಮೃತರು. ಪ್ರಕರಣಕ್ಕೆ ಸಂಬಂಧಿಸಿ ಸೋಲೂರಿನವರಾದ ರಾಘವೇಂದ್ರ, ಬಾಬು ಮತ್ತುಪ್ರದೀಪ ಎಂಬುವರನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಬೆಂಗಳೂರು–ಮಂಗಳೂರು ಹೆದ್ದಾರಿಯಲ್ಲಿ ಆರೋಪಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಸಯ್ಯದ್ ಬೈಕ್ ತಗುಲಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಇದರಿಂದ ಸಯ್ಯದ್ ತೀವ್ರವಾಗಿ ಗಾಯಗೊಂಡಿದ್ದು, ಸೋಲೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕುದೂರು
ಠಾಣೆಯಲ್ಲಿ ಪ್ರಕರಣದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.