ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಪೀಣ್ಯ 2ನೇ ಹಂತ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಬಸ್ ನಿಲ್ದಾಣ, ವಿಡಿಯಾ ಸ್ಕೂಲ್ ಬಸ್ ನಿಲ್ದಾಣ ಇನ್ನು ಮುಂತಾದ ಕಡೆಗಳಲ್ಲಿ ಪ್ರಯಾಣಿಕರಿಗೆ ತಂಗುದಾಣಗಳಿಲ್ಲದೆ ಬಿಸಿಲು ಮಳೆಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ನೂತನ ಶಾಸಕರು ಈ ಸಮಸ್ಯೆಗಳನ್ನು ಸರಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಪೀಣ್ಯ 2ನೇ ಹಂತದ ವೃತ್ತದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ತಂಗುದಾಣವಿಲ್ಲದೆ ಪರದಾಡುತ್ತಿದ್ದಾರೆ. ಇನ್ನು ಜಾಲಹಳ್ಳಿ ಕ್ರಾಸ್ ಮತ್ತು ದಾಸರಹಳ್ಳಿ ಬಸ್ ನಿಲ್ದಾಣಗಳಲ್ಲಿ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಬಿಸಿಲಲ್ಲಿ ನಿಂತು ಹೈರಾಣ ಆಗುತ್ತಿದ್ದಾರೆ.
ದಾಸರಹಳ್ಳಿ ಬಸ್ ನಿಲ್ದಾಣದಿಂದ ಸುಮಾರು 22 ಜಿಲ್ಲೆಗಳಿಗೆ ಜನರು ಪ್ರಯಾಣಿಸುತ್ತಾರೆ. ಅವರಿಗೆ ನಿಲ್ಲಲು ತಂಗುದಾಣಗಳಿಲ್ಲ, ಸರ್ವಿಸ್ ರಸ್ತೆಯಲ್ಲಿ ಹೋಟೆಲ್ ಮತ್ತು ಅಂಗಡಿಗಳಿವೆ. ಅಲ್ಲಿ ನಿಲ್ಲಲೂ ಜಾಗವಿಲ್ಲ.
ನಗರಕ್ಕೆ ಹೆಬ್ಬಾಗಿಲಾಗಿರುವ ದಾಸರಹಳ್ಳಿ ಕ್ಷೇತ್ರವು ದುಡಿಯುವ ಮಹಿಳೆಯರು, ಕಾರ್ಮಿಕರು, ವಲಸಿಗರು ತುಂಬಿರುವ ಜನನಿಬಿಡ ಪ್ರದೇಶ. ನಿತ್ಯ ಸಾವಿರಾರು ಜನರು ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ನೂತನ ಶಾಸಕ ಮುನಿರಾಜು ಅವರು ಪ್ರಯಾಣಿಕರಿಗೆ ತಂಗುದಾಣ ನಿರ್ಮಿಸಲಿ' ಎಂದು ದಾಸರಹಳ್ಳಿ ನಿವಾಸಿ ವೈ.ಬಿ.ಎಚ್. ಜಯದೇವ್ ತಿಳಿಸಿದರು.
‘ದಾಸರಹಳ್ಳಿ ಕ್ಷೇತ್ರವು ಐದು ವರ್ಷಗಳಲ್ಲಿ ಏನು ಅಭಿವೃದ್ಧಿ ಕಾಣಲಿಲ್ಲ, ಮಾಜಿ ಶಾಸಕರು ಗುರುತಿಸುವಂತಹ ಕೆಲಸಗಳನ್ನು ಮಾಡಲಿಲ್ಲ. ಶಾಸಕ ಮುನಿರಾಜು ಅವರು ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕು. ದಾಸರಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು' ಎಂದು ಚೊಕ್ಕಸಂದ್ರ ನಿವಾಸಿ ವಿಜಯ್ ಕುಮಾರ್ ಆಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.