ADVERTISEMENT

ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 18:38 IST
Last Updated 15 ಸೆಪ್ಟೆಂಬರ್ 2018, 18:38 IST
ನಗರದ ಜೆ.ಸಿ.ರಸ್ತೆಯಲ್ಲಿ ಮಳೆ ಸುರಿಯುತ್ತಿದ್ದ ವೇಳೆ ಮಹಿಳೆಯೊಬ್ಬರು ಕುರ್ಚಿ ಆಸರೆ ಪಡೆದು ಸುರಕ್ಷಿತ ಸ್ಥಳಕ್ಕೆ ತೆರಳಿದರು – ಪ್ರಜಾವಾಣಿ ಚಿತ್ರಗಳು
ನಗರದ ಜೆ.ಸಿ.ರಸ್ತೆಯಲ್ಲಿ ಮಳೆ ಸುರಿಯುತ್ತಿದ್ದ ವೇಳೆ ಮಹಿಳೆಯೊಬ್ಬರು ಕುರ್ಚಿ ಆಸರೆ ಪಡೆದು ಸುರಕ್ಷಿತ ಸ್ಥಳಕ್ಕೆ ತೆರಳಿದರು – ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ನಗರದಲ್ಲಿ ಶನಿವಾರವೂ ಧಾರಾಕಾರ ಮಳೆ ಸುರಿದಿದ್ದು, ಹೊರಮಾವು ಬಳಿಯ ಕಲ್ಕೆರೆ ಬಳಿ ಮನೆಗಳಿಗೆ ನೀರು ನುಗ್ಗಿತ್ತು.

ಶುಕ್ರವಾರ ಸಂಜೆಯಿಂದ ಶುರುವಾಗಿದ್ದ ಮಳೆ ತಡರಾತ್ರಿಯೂ ಜೋರಾಗಿ ಸುರಿಯಿತು. ಬೆಳಿಗ್ಗೆ ಕೆಲವು ಹೊತ್ತು ಬಿಸಿಲು ಕಾಣಿಸಿಕೊಂಡಿತು. ಮಧ್ಯಾಹ್ನ ಹೊತ್ತಿಗೆ ಮೋಡ ಕವಿದ ವಾತಾವರಣ ಕಂಡುಬಂತು.

ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೂ ಹೊರಮಾವು ಸುತ್ತಮುತ್ತ ಧಾರಾಕಾರ ಮಳೆ ಸುರಿಯಿತು. ಅದೇ ವೇಳೆ ರಸ್ತೆಯಲ್ಲೇ ಮೂರು ಅಡಿಯಷ್ಟು ನೀರು ಹರಿಯಿತು. ಕಲ್ಕೆರೆಯ ಜಾನ್‌ಪಾಲ್ ಚರ್ಚ್ ಬಳಿಯ 5 ಮನೆಗಳಿಗೆ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿಸಿತು. ಮನೆಯಲ್ಲಿದ್ದ ನಿವಾಸಿಗಳು, ನೀರನ್ನು ರಾತ್ರಿಯಿಡಿ ಹೊರಹಾಕಿದರು.

ADVERTISEMENT

ಬಿನ್ನಿ ಮಿಲ್ ಬಳಿಯ ರೈಲ್ವೆ ಕೆಳಸೇತುವೆಯಲ್ಲೂ ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲವು ವಾಹನಗಳು, ನೀರಿನಲ್ಲೇ ಕೆಟ್ಟು ನಿಂತವು. ಅವುಗಳನ್ನು ಸವಾರರು ತಳ್ಳಿಕೊಂಡು ಹೋದರು.

ಮೆಜೆಸ್ಟಿಕ್, ಕಾಟನಪೇಟೆ, ಜಯನಗರ, ಜೆ.ಪಿ. ನಗರ, ಬನಶಂಕರಿ, ಶಾಂತಿನಗರ, ಲಾಲ್‌ಬಾಗ್‌, ನಾಯಂಡನಹಳ್ಳಿ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಯಶವಂತಪುರ, ಪೀಣ್ಯ, ಮತ್ತೀಕೆರೆ, ವಿದ್ಯಾರಣ್ಯಪುರ, ಜಾಲಹಳ್ಳಿ ಹಾಗೂ ಸುತ್ತಮುತ್ತ ಉತ್ತಮ ಮಳೆ ಆಯಿತು. ಅಲ್ಲೆಲ್ಲ ರಸ್ತೆ ಮೇಲೆಯೇ ನೀರು ಹರಿಯಿತು. ವಾಹನಗಳ ಸಂಚಾರ ನಿಧಾನವಾಗಿ ದಟ್ಟಣೆಯೂ ಕಂಡುಬಂತು.

ಉರುಳಿಬಿದ್ದ ಮರಗಳು: ಮಳೆಯ ವೇಳೆ ಗಾಳಿ ವೇಗವಾಗಿ ಬೀಸಿದ್ದರಿಂದ ರಾಜರಾಜೇಶ್ವರಿನಗರದಲ್ಲಿ ಒಂದು ಹಾಗೂ ಚಾಮರಾಜಪೇಟೆಯಲ್ಲಿ ಎರಡು ಮರಗಳು ನೆಲಕ್ಕುರುಳಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.