ADVERTISEMENT

Bengaluru Rains | ವಿಪತ್ತು ನಿರ್ವಹಣೆ ತಂಡ ನಿಯೋಜನೆ, 1533ಕ್ಕೆ ಕರೆ ಮಾಡಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:25 IST
Last Updated 23 ಅಕ್ಟೋಬರ್ 2024, 0:25 IST
   

ಬೆಂಗಳೂರು: ನಗರದಲ್ಲಿ ಪ್ರವಾಹ ಪೀಡಿತ, ಜಲಾವೃತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಬಿಬಿಎಂಪಿ ವಲಯವಾರು ವಿಪತ್ತು ನಿರ್ವಹಣೆ ತಂಡಗಳನ್ನು ನಿಯೋಜಿಸಿದೆ.

ಮೂರು-ನಾಲ್ಕು ದಿನಗಳಿಂದ ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಪ್ರವಾಹ ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಮತ್ತು ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಪಾಲಿಕೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಕಾರ್ಯಪಡೆ (ಎಸ್‌ಡಿಆರ್‌ಎಫ್), ಅಗ್ನಿ ಶಾಮಕ ದಳದ ತಂಡಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಜಲಾವೃತ ಪ್ರದೇಶಗಳು: ನರಸಾಪುರ ಕೆರೆ ಮತ್ತು ದೊಡ್ಡಬೊಮ್ಮಸಂದ್ರ ಕೆರೆ ತುಂಬಿ ಕೋಡಿ ಮೂಲಕ ಬರುವ ನೀರು ನೀರುಗಾಲುವೆಗಳಲ್ಲಿ ಹರಿಯುತ್ತಿದೆ. ಈ ಪರಿಣಾಮ ಬ್ಯಾಟರಾಯನಪುರ ವ್ಯಾಪ್ತಿಯ ಭದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಸುರಭಿ ಲೇಔಟ್, ಸೋಮೇಶ್ವರ ಬಡಾವಣೆ, ಬಸವ ಸಮಿತಿ, ಟಾಟಾ ನಗರ, ಚಿಕ್ಕ ಬೊಮ್ಮಸಂದ್ರ, ಆಂಜನೇಯ ಲೇಔಟ್, ವಾಯುನಂದನ ಲೇಔಟ್ ಸಂಪೂರ್ಣ ಜಲಾವೃತವಾಗಿವೆ.

ADVERTISEMENT

ಹಾಲು, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ನಿವಾಸಿಗಳ ಸ್ಥಳಾಂತರಕ್ಕಾಗಿ ಮೂರು ದೋಣಿಗಳನ್ನು ನಿಯೋಜಿಸಲಾಗಿದೆ.

ಮಹದೇವಪುರ ವಲಯ: ಮಹದೇವಪುರ ವಲಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ಯಲಹಂಕ ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ಸಾಯಿಬಾಬಾ ಲೇಔಟ್ ಮತ್ತು ಗೆದ್ದಲಹಳ್ಳಿ ಬಳಿಯ ವಡ್ಡರಪಾಳ್ಯದಲ್ಲಿ ಹೆಬ್ಬಾಳ ವ್ಯಾಲಿಯಿಂದ ನೀರು ಹಿಮ್ಮುಖವಾಗಿ ಚಲಿಸಿ ಜಲಾವೃತವಾಗಿದೆ. ನೀರು ನುಗ್ಗಿರುವ ಮನೆಗಳಲ್ಲಿ, ಪಂಪ್‌ಗಳ ಮೂಲಕ ನೀರು ಹೊರ ಹಾಕುವ ಕೆಲಸ ಮಾಡಲಾಗುತ್ತಿದೆ.

ದಾಸರಹಳ್ಳಿ ವಲಯ: ಅಬ್ಬಿಗೆರೆ ಕೆರೆ ಕೋಡಿಯಾಗಿದ್ದು, ಕೋಡಿ ನೀರು ರಸ್ತೆಗೆ ನುಗ್ಗಿ ಸಪ್ತಗಿರಿ ಮತ್ತು ನಿಸರ್ಗ ಲೇಔಟ್‌ಗಳಲ್ಲಿ ನೀರು ತುಂಬಿದೆ.  ನಿಸರ್ಗ ಲೇಔಟ್, ಸಪ್ತಗಿರಿ ಲೇಔಟ್, ಪಾರ್ವತಿ ಲೇಔಟ್, ಮಿತ್ರ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಬೆಲ್ಮಾರ್‌ ಲೇಔಟ್‌ಗಳಲ್ಲಿ 25ರಿಂದ 30 ಮನೆಗಳು ಜಲಾವೃತಗೊಂಡಿವೆ.

1533ಕ್ಕೆ ಕರೆ ಮಾಡಿ

ಪಾಲಿಕೆಯ ಅಧಿಕಾರಿಗಳು ಸಮಸ್ಯೆಯಾಗಿರುವ ಸ್ಥಳಗಳಲ್ಲಿದ್ದು, ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ಸಂಬಂಧಿಸಿದ ದೂರುಗಳಿದ್ದರೆ ನಾಗರಿಕರು 1533ಕ್ಕೆ ಕರೆ ಮಾಡಬೇಕೆಂದು ಬಿಬಿಎಂಪಿ ಮನವಿ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.