ADVERTISEMENT

Bengaluru Rains: ರಾತ್ರಿಯಿಡೀ ಸಂಕಷ್ಟದಲ್ಲಿ ಮುಳುಗಿದ ಜನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:25 IST
Last Updated 23 ಅಕ್ಟೋಬರ್ 2024, 0:25 IST
<div class="paragraphs"><p>ಜಲಾವೃತಗೊಂಡ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಿಂದ ನಿವಾಸಿಗಳನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಿಸಿ ಬೋಟ್‌ ಮೂಲಕ ಸ್ಥಳಾಂತರಿಸಿದರು</p></div>

ಜಲಾವೃತಗೊಂಡ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಿಂದ ನಿವಾಸಿಗಳನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಿಸಿ ಬೋಟ್‌ ಮೂಲಕ ಸ್ಥಳಾಂತರಿಸಿದರು

   

-ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಯಲಹಂಕ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಯಲಹಂಕ ಮತ್ತು ಬ್ಯಾಟರಾಯನಪುರ ವ್ಯಾಪ್ತಿಯ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ರಾಜಕಾಲುವೆಗಳು ತುಂಬಿಹರಿದು ಮನೆಗಳಿಗೆ ನೀರು ನುಗ್ಗಿತು. ಹಲವಾರು ರಸ್ತೆಗಳು ಜಲಾವೃತಗೊಂಡು ಸಾರ್ವಜನಿಕರು ತೀವ್ರತೊಂದರೆ ಅನುಭವಿಸಿದರು.

ADVERTISEMENT

ಕೋಗಿಲು ವೃತ್ತ ಸಮೀಪದ ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ನ ನೆಲ ಮಹಡಿ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಪಾರ್ಕಿಂಗ್‌ ಪ್ರದೇಶದಲ್ಲಿ ಐದು ಅಡಿಗಳಷ್ಟು ನೀರು ಸಂಗ್ರಹವಾಗಿ ವಾಹನಗಳು ಬಹುತೇಕ ಮುಳುಗಡೆಯಾದವು. ವಿದ್ಯುತ್‌ ಕಡಿತಗೊಂಡ ಕಾರಣ, ಕುಡಿಯುವ ನೀರು, ಊಟ-ತಿಂಡಿಗೂ ಜನರು ಪರದಾಡಬೇಕಾಯಿತು.

ಸ್ಥಳಾಂತರಕ್ಕೆ ಸೂಚನೆ: ವಾರದ ಮಟ್ಟಿಗೆ ಅ‍ಪಾರ್ಟ್‌ಮೆಂಟ್‌ ನಿವಾಸಿಗಳು ಸ್ಥಳಾಂತರಗೊಳ್ಳಬೇಕೆಂದು ಬಿಬಿಎಂಪಿ ಸೂಚಿಸಿರುವ ಹಿನ್ನೆಲೆಯಲ್ಲಿ  ಅಪಾರ್ಟ್‌ಮೆಂಟ್‌ನಲ್ಲಿ ಸಿಲುಕಿದ್ದ ನಿವಾಸಿಗಳನ್ನು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ ಹಾಗೂ ಪೊಲೀಸ್‌ ಸಿಬ್ಬಂದಿ ಸಹಾಯದೊಂದಿಗೆ, ಟ್ರ್ಯಾಕ್ಟರ್‌ ಮತ್ತು ಬೋಟ್‌ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಈ ವೇಳೆ ಮಕ್ಕಳು ಮತ್ತು ವೃದ್ಧರು ಪರದಾಡಿದರು. ಬಹುತೇಕಮಂದಿ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ಸ್ಥಳಾಂತರಗೊಂಡರು.

ಕೋಗಿಲು ಕ್ರಾಸ್‌ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡ ಪರಿಣಾಮ, ಯಲಹಂಕ-ಮಾರುತಿನಗರ ಮುಖ್ಯರಸ್ತೆಯಲ್ಲಿ ವಾಹನಗಳು ಚಲಿಸಲು ಸಾಧ್ಯವಾಗದೆ ಗಂಟೆಗಟ್ಟಲೆ ನಿಂತಲ್ಲೆ ನಿಲ್ಲಬೇಕಾಯಿತು. ಮಾರುತಿನಗರದಲ್ಲಿ ಮಳೆನೀರಿನ ಜೊತೆಗೆ ರಾಜಕಾಲುವೆನೀರು 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿತು. ಇದರಿಂದ ದಿನಸಿ ಪದಾರ್ಥಗಳೂ ಸೇರಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರಿನಲ್ಲಿ ಮುಳುಗಡೆಯಾದವು. ನಿವಾಸಿಗಳು ರಾತ್ರಿಯಿಡೀ ನೀರನ್ನು ಹೊರಹಾಕುವುದಲ್ಲಿಯೇ ಕಾಲಕಳೆಯಬೇಕಾಯಿತು.

ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಿಂದ ವೃದ್ಧ ಮಹಿಳೆಯೊಬ್ಬರನ್ನು ರಕ್ಷಿಸಿ ಸ್ಥಳಾಂತರಿಸುತ್ತಿರುವ ಎನ್‌ಡಿಆರ್‌ಎಫ್ ಸಿಬ್ಬಂದಿ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಕುಸಿದುಬಿದ್ದ ಕಾಂಪೌಂಡ್‌: ಜಿಕೆವಿಕೆ ಮತ್ತು ಮದರ್‌ ಡೇರಿ ಕಡೆಯಿಂದ ಹರಿದುಬಂದ ನೀರಿನ ರಭಸಕ್ಕೆ ಕನಕನಗರದ ಬಳಿ ಜಿಕೆವಿಕೆ ಕಾಂಪೌಂಡ್‌ ಕುಸಿದುಬಿದ್ದಿತು. ಇದರಿಂದ ಸೋಮೇಶ್ವರನಗರದ 40, ಕನಕನಗರದ 150 ಹಾಗೂ ಚಿಕ್ಕಬೊಮ್ಮಸಂದ್ರ ಹಳೇಗ್ರಾಮ ಮತ್ತು ಕೆರೆಯ ಸುತ್ತಮುತ್ತಲ ಬಡಾವಣೆಗಳ 300 ಕ್ಕೂ ಹೆಚ್ಚು ಮನೆಗಳಿಗೆ ಮಳೆನೀರಿನ ಜೊತೆಗೆ ಒಳಚರಂಡಿ ನೀರು ಮಿಶ್ರಣವಾಗಿ ನುಗ್ಗಿತು. ಕನಕನಗರದಿಂದ 20ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಬಂದು ಎಲ್ಲೆಂದರಲ್ಲಿ ಜಖಂಗೊಂಡು ಬಿದ್ದಿದ್ದವು.

ಮದರ್ ಡೇರಿ ಸಮೀಪದ ಶಾರದಾನಗರದ ಆರ್ಚ್‌ ಬಳಿ ಕಾಂಪೌಂಡ್‌ ಒಡೆದು, ನೀರಗಾಲುವೆಯಲ್ಲಿ ನೀರು ಹರಿಯಲು ಆಸ್ಪದವಿಲ್ಲದೆ ಯಲಹಂಕ ಉಪನಗರ 3ನೇ ಹಂತದ ಕಡೆಗೆ ಒಳಚರಂಡಿ ನೀರಿನ ಸಹಿತ 200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಯಿತು. ಅಂಬೇಡ್ಕರ್‌ ನಗರದ 400 ಕ್ಕೂ ಹೆಚ್ಚು ಮನೆಗಳಿಗೆ ನೀರುನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು. ಬಿಬಿಎಂಪಿ ಸಿಬ್ಬಂದಿ ಮತ್ತು ಸ್ಥಳೀಯರ ನೆರವಿನಿಂದ ನೀರನ್ನು ಹೊರಹಾಕಲಾಯಿತು.

ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಿಂದ ವೃದ್ಧ ಮಹಿಳೆಯೊಬ್ಬರನ್ನು ವೃದ್ಧ ಮಹಿಳೆಯನ್ನು ರಕ್ಷಿಸಿದ ಎನ್‌ಡಿಆರ್‌ಎಫ್ ಸಿಬ್ಬಂದಿ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಮುಖ್ಯರಸ್ತೆ ಜಲಾವೃತ: ಜಕ್ಕೂರು ಕೆರೆಗೆ ಹರಿಯಬೇಕಾಗಿದ್ದ ಯಲಹಂಕ ಕೆರೆಯ ನೀರು ತಗ್ಗುಪ್ರದೇಶಗಳಿಗೆ ನುಗ್ಗಿದ ಪರಿಣಾಮ, ಯಲಹಂಕ-ಜಕ್ಕೂರು ಮುಖ್ಯರಸ್ತೆಯ ಸುರಭಿ ಲೇಔಟ್‌ ಸಂಪೂರ್ಣ ಜಲಾವೃತಗೊಂಡಿತು. ಮನೆಗಳಲ್ಲಿ ಎರಡು ಅಡಿ ಮತ್ತು ರಸ್ತೆಗಳಲ್ಲಿ ಮೂರು ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಜಕ್ಕೂರು ಕೆರೆಯಲ್ಲಿರುವ ಶುದ್ಧನೀರು ಸಂಸ್ಕರಣಾ ಘಟಕದ ರಸ್ತೆಯು ಅರ್ಧ ಕಿಲೋಮೀಟರ್‌ ದೂರದವರೆಗೆ ಜಲಾವೃತಗೊಂಡಿತ್ತು. ಅಲ್ಲದೆ ಜಕ್ಕೂರು ರಸ್ತೆಯ ಸೆಂಚುರಿ ಅಪಾರ್ಟ್‌ಮೆಂಟ್‌ ಬಳಿ ರಾಜಕಾಲುವೆ ಉಕ್ಕಿಹರಿದು ಈ ಭಾಗದ ರಸ್ತೆಗಳು ನೀರಿನಲ್ಲಿ ಮುಳುಗಿದ್ದವು.

ಜಲಾವೃತಗೊಂಡ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಿಂದ ನಿವಾಸಿಗಳನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಿಸಿ ದೋಣಿ ಮೂಲಕ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಜಕ್ಕೂರು ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡ ಪರಿಣಾಮ, ಯಲಹಂಕ-ಜಕ್ಕೂರು ಮುಖ್ಯರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡು ವಾಹನಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕಾಯಿತು. ಜಕ್ಕೂರು-ಶ್ರೀರಾಮಪುರ ರೈಲ್ವೆ ಸಮಾನಾಂತರ ರಸ್ತೆಯು ಜಲಾವೃತಗೊಂಡಿತ್ತು.

ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಜಲಾವೃತಗೊಂಡ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್  ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಯಲಹಂಕದ ಮಾರುತಿನಗರ, ಪಾಪಣ್ಣ ಲೇಔಟ್‌, ಸುರಭಿ ಲೇಔಟ್‌, ಪುಟ್ಟೇನಹಳ್ಳಿ, ರಮಣಶ್ರೀ ಅಪಾರ್ಟ್‌ಮೆಂಟ್‌, ಸೋಮೇಶ್ವರನಗರ, ಚಿಕ್ಕಬೊಮ್ಮಸಂದ್ರ ಸೇರಿ ಇನ್ನಿತರೆ ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಮನೆಗಳಿಗೆ ನೀರುನುಗ್ಗಿತು. ಶಾಸಕ ಎಸ್‌.ಆರ್‌.ವಿಶ್ವನಾಥ್‌ ಬಿಬಿಎಂಪಿ ಅಧಿಕಾರಿಗಳೊಂದಿಗೆ ಜಲಾವೃತ ಪ್ರದೇಶಗಳಿಗೆ ಭೇಟಿನೀಡಿ ಪರಿಶೀಲಿಸಿದರು.

ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ ಸಿಲುಕಿದ್ದ ವೃದ್ಧ ಮಹಿಳೆಯೊಬ್ಬರನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.

‘ವೆನಿಸ್‌ ಮಾಡಿದ್ದಾರೆ’

ಕಾಂಗ್ರೆಸ್‌ ಸರ್ಕಾರ ಬೆಂಗಳೂರನ್ನು ಇಟಲಿಯ ವೆನಿಸ್ ನಗರವನ್ನಾಗಿ ಮಾಡಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

‘ಪ್ರವಾಹದ ಕಾರಣ ಅಲ್ಲಿನ ಜನರು ದೋಣಿಗಳಲ್ಲಿಯೇ ಸಂಚಾರ ಮಾಡು ತ್ತಿದ್ದಾರೆ. ಇಲ್ಲಿಯೂ ಅದೇ ಪರಿಸ್ಥಿತಿಯನ್ನು
ಸರ್ಕಾರ ಸೃಷ್ಟಿ ಮಾಡಿದೆ. ನಗರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಜನರು ಹೋಟೆಲ್‌ಗಳಲ್ಲಿ ಜೀವನ ಮಾಡುತ್ತಿದ್ದಾರೆ’ ಎಂದಿದ್ದಾರೆ.

‘ಹಿಂದೆ ಸಿಂಗಪುರ ಮಾಡಿದ್ದನ್ನು ನೋಡಿದ್ದೆವು. ಈಗ ಬ್ರ್ಯಾಂಡ್‌ ಬೆಂಗಳೂರನ್ನು ವೆನಿಸ್‌ ಮಾಡಿದ್ದಾರೆ. ಸರ್ಕಾರಕ್ಕೆ ರಾಜಕೀಯದ ಚಿಂತೆಯಾದರೆ, ಜನರು ನರಕ ನೋಡುತ್ತಿದ್ದಾರೆ’ ಎಂದು ದೂರಿದ್ದಾರೆ.

ಜಲಾವೃತಗೊಂಡಿರುವ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌  ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.

‘ತುರ್ತು ಕ್ರಮಕ್ಕೆ ಸೂಚನೆ’

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘17 ವರ್ಷಗಳ ನಂತರ ದೊಡ್ಡಬೊಮ್ಮಸಂದ್ರ ಕೆರೆ ಕೋಡಿ ಹರಿದಿದೆ. ಇದರಿಂದ ಕೊಡಿಗೇಹಳ್ಳಿ ಸುತ್ತಮುತ್ತಲ ತಗ್ಗುಪ್ರದೇಶಗಳಿಗೆ ನೀರುನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಾಲುವೆಗಳಿದ್ದರೂ ಹೆಚ್ಚಿನಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಸಮಸ್ಯೆ ಉಂಟಾಗಿದ್ದು ಕೋಡಿ ನೀರಿನ ರಭಸ ಕಡಿಮೆಯಾದರೆ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ತಿಳಿಸಿದರು. ಅಪಾರ್ಟ್‌ಮೆಂಟ್‌ಗಳ ನೆಲಮಹಡಿಯಲ್ಲಿ ಸಂಗ್ರಹವಾಗಿರುವ ನೀರನ್ನು ಹೊರಹಾಕಲು ಮೋಟಾರ್‌ ಪಂಪ್‌ಗಳ ಅವಶ್ಯಕತೆಯಿದ್ದು ಅಧಿಕಾರಿಗಳಿಗೆ ಪಂಪ್‌ಗಳನ್ನು ಒದಗಿಸಬೇಕೆಂದು ಮನವಿ ಮಾಡಲಾಗಿದೆ. ಅಗ್ನಿಶಾಮಕದಳ ಮತ್ತು ಬಿಬಿಎಂಪಿ ಸಿಬ್ಬಂದಿ ಮೂಲಕ ನೀರನ್ನು ಹೊರಹಾಕಲಾಗುವುದು. ಅಗತ್ಯ ತುರ್ತುಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.