ADVERTISEMENT

Bengaluru Rains | ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ಯಾವ ಮುಲಾಜಿಗೂ ಒಳಗಾಗದಂತೆ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಆದೇಶ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 23:55 IST
Last Updated 23 ಅಕ್ಟೋಬರ್ 2024, 23:55 IST
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜಲಾವೃತಗೊಂಡಿರುವ ಯಲಹಂಕದ ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಪರಿಶೀಲನೆ ನಡೆಸಿದರು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜಲಾವೃತಗೊಂಡಿರುವ ಯಲಹಂಕದ ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಪರಿಶೀಲನೆ ನಡೆಸಿದರು   

ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೆ ತೆರವು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಮಳೆಯಿಂದ ಸಮಸ್ಯೆಗೆ ಒಳಗಾಗಿರುವ ಯಲಹಂಕದ ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌, ಬ್ಯಾಟರಾಯನಪುರದ ಮರಿಯಣ್ಣಪಾಳ್ಯ, ಕೆ.ಆರ್. ಪುರದ ಹೊರಮಾವು ಬಳಿಯ ಶ್ರೀ ಸಾಯಿ ಬಡಾವಣೆಗೆ ಅವರು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್, ‘ಖಾಸಗಿಯವರು ರಾಜಕಾಲುವೆ ಒತ್ತುವರಿ ತೆರವುಗೊಳಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ತುರ್ತು ಸಂದರ್ಭದಲ್ಲಿ ಯಾವುದನ್ನೂ ಪರಿಗಣಿಸದೆ ಕೂಡಲೇ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಬೇಕು. ಪ್ರವಾಹ ಪರಿಸ್ಥಿತಿ ನಿರ್ವಹಣೆ ಅಡಿಯಲ್ಲಿ ಕೂಡಲೇ ಆದೇಶ ಹೊರಡಿಸಲು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ’ ಎಂದರು.

ADVERTISEMENT

‘ಯಾರೇ ಖಾಸಗಿಯವರು ಅಡ್ಡಿಪಡಿಸಿದರೂ ನಾವು ನಮ್ಮ ಕೆಲಸ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ಪ್ರಕರಣ ಮುಖ್ಯವಲ್ಲ. ನಮಗೆ ಸಾರ್ವಜನಿಕರ ಹಿತ ಮುಖ್ಯ. ನೀರು ಸರಾಗವಾಗಿ ಹರಿಯಲು ಅವಕಾಶವಾಗುವಂತೆ ಒತ್ತುವರಿ ತೆರವುಗೊಳಿಸಲು ಕೂಡಲೇ ಕೆಲಸ ಮಾಡಬೇಕು ಎಂದು ಆದೇಶ ನೀಡಿದ್ದೇನೆ’ ಎಂದು ಹೇಳಿದರು.

ಮಳೆ ನೀರುಗಾಲುವೆಗಳನ್ನು ಸ್ವಚ್ಚಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲು ವಿಶ್ವಬ್ಯಾಂಕಿನಿಂದ ₹ 1 ಸಾವಿರ ಕೋಟಿ ಸಾಲ ಪಡೆದು ಕೆಲಸ ಮಾಡಲಾಗುತ್ತಿದೆ ಎಂದರು.

‘ಯಲಹಂಕದ ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ಎಂಟು ಬ್ಲಾಕ್‌ಗಳಿದ್ದು, 600ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿವೆ. ಇಲ್ಲಿನ ಶೇ 95ರಷ್ಟು ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ವಿದ್ಯುತ್‌ ಸಂಪರ್ಕವಿಲ್ಲದಿದ್ದರೂ 20 ಕುಟುಂಬದವರು ಇಲ್ಲೇ ಇರುವುದಾಗಿ ಹೇಳಿದ್ದಾರೆ. ಅವರನ್ನು ಅಲ್ಲಿಯೇ ಬಿಡಲು ಆಗುವುದಿಲ್ಲ. ಅವರಿಗೆ ಏನೇ ತೊಂದರೆಯಾದರೂ ಅದಕ್ಕೆ ನಾವೇ ಜವಾಬ್ದಾರರಾಗುತ್ತೇವೆ. ಆದ್ದರಿಂದ ಹತ್ತಿರದ ವಸತಿಗೃಹಗಳಲ್ಲಿ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

‘ಯಲಹಂಕದಲ್ಲಿ 115- 120 ವರ್ಷಗಳ ನಂತರ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಇಷ್ಟು ಜಾಸ್ತಿ ಮಳೆ ಬರುತ್ತದೆ ಎನ್ನುವ ಕಲ್ಪನೆಯೂ ಇರಲಿಲ್ಲ. ನೀರು ನುಗ್ಗುವ ಮತ್ತು ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವುದಕ್ಕೆ ಜಾಗಗಳನ್ನು ಗುರುತಿಸಲಾಗುತ್ತಿದೆ. ಅಕ್ಕಪಕ್ಕದಲ್ಲಿ ಕೆರೆಗಳ ಪಕ್ಕ ನೀರು ಹರಿಯಲು ಮತ್ತು ನಿಂತುಕೊಳ್ಳಲು ಜಾಗವಿತ್ತು. ಈಗ ಜಾಗ ಕಡಿಮೆಯಾಗಿದೆ. ಈ ರೀತಿಯ ಅವಘಡ ನಮ್ಮಲ್ಲಿ ಮಾತ್ರವಲ್ಲ, ಮುಂಬೈ ಸೇರಿದಂತೆ ಅನೇಕ ನಗರಗಳಲ್ಲಿ ಆಗಿದೆ. ಇತ್ತೀಚೆಗೆ ಫ್ರಾನ್ಸ್‌ನಲ್ಲಿಯೂ ತೊಂದರೆ ಆಗಿದೆ’ ಎಂದರು.

ಮನೆಗೆ ನೀರು ನುಗ್ಗಿ ತೊಂದರೆ ಉಂಟಾಗಿರುವವರಿಗೆ ತಲಾ ₹10 ಸಾವಿರ ಪರಿಹಾರ, ವಸತಿ ಇಲ್ಲದವರಿಗೆ ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಇಬ್ಬರು ಮಕ್ಕಳ ಕುಟುಂಬಕ್ಕೆ ತಲಾ ₹5 ಲಕ್ಷ

‘ಕೆಂಗೇರಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ ತಲಾ 5 ಲಕ್ಷ ಪರಿಹಾರ ನೀಡಲಾಗುತ್ತದೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಕೆಂಗೇರಿ ಬಳಿಯ ಹರ್ಷ ಲೇಔಟ್ ನಿವಾಸಿ ಜಯಮ್ಮ ಅವರ ಮಕ್ಕಳಾದ ಜಾನ್ಸನ್ ಅಲಿಯಾಸ್‌ ಶ್ರೀನಿವಾಸ್(13) ಹಾಗೂ ಮಹಾಲಕ್ಚ್ಮಿ(11) ಅವರು ಕೆಂಗೇರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದರು.

ಕಟ್ಟಡ ಕುಸಿತ: ಎಇಇ ಅಮಾನತು

ಬಾಬುಸಾ ಪಾಳ್ಯದಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಕ್ರಮ ಕೈಗೊಳ್ಳದ ಆರೋಪದಡಿ ಹೊರಮಾವು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ. ವಿನಯ್‌ ಅವರನ್ನು ಅಮಾನತುಗೊಳಿಸಲಾಗಿದೆ. ಹೊರಮಾವು ಉಪ ವಿಭಾಗ ವ್ಯಾಪ್ತಿಯ ಬಾಬುಸಾ ಪಾಳ್ಯದ ಅಂಜನಾದ್ರಿ ಎನ್‌ಕ್ಲೇವ್‌ನ 7ನೇ ಬಿ ಅಡ್ಡರಸ್ತೆಯಲ್ಲಿ ನಿವೇಶನ ಸಂಖ್ಯೆ 24ರಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಬಿಬಿಎಂಪಿ –2020 ಕಾಯ್ದೆ ಪ್ರಕಾರ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡದ ಭಾಗಗಳನ್ನು ತೆರವುಗೊಳಿಸಲು ಸ್ಥಿರೀಕರಣದ ಆದೇಶವನ್ನು ವಿನಯ್‌ ಸೆಪ್ಟೆಂಬರ್‌ 21ರಂದು ಹೊರಡಿಸಿದ್ದರು. ಈ ಆದೇಶದ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಟ್ಟಡವು ಅ.22ರಂದು ಉರುಳಿಬಿದ್ದು ಎಂಟು ಮಂದಿ ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಮಹದೇವಪುರ ವಲಯ ಆಯುಕ್ತರು ವರದಿ ನೀಡಿದ್ದಾರೆ. ಆದ್ದರಿಂದ ಕರ್ತವ್ಯ ಲೋಪ ಎಸಗಿದ ಆರೋಪದಡಿ ವಿನಯ್‌ ಅವರನ್ನು ಅಮಾನತುಗೊಳಿಸಿ ಆಡಳಿತ ವಿಭಾಗದ ಉಪ ಆಯುಕ್ತರು ಬುಧವಾರ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.