ADVERTISEMENT

Bengaluru Rains | ಮಳೆ ನಿಂತರೂ ‘ಜಲಯಾನ’ ನಿಂತಿಲ್ಲ!

ಸಾಯಿ ಬಡಾವಣೆ, ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 0:20 IST
Last Updated 25 ಅಕ್ಟೋಬರ್ 2024, 0:20 IST
ದೋಣಿಯಾದ ಬಾಗಿಲು...
ವಡ್ಡರಪಾಳ್ಯ ಮುಖ್ಯರಸ್ತೆಯ ಸಾಯಿ ಬಡಾವಣೆಯಲ್ಲಿ ನಿಂತ ಮಳೆ ನೀರನ್ನು ದಾಟಲು ಜನರು ಬಾಗಿಲನ್ನೇ ದೋಣಿಯಂತೆ ಬಳಸಿದರು
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ದೋಣಿಯಾದ ಬಾಗಿಲು... ವಡ್ಡರಪಾಳ್ಯ ಮುಖ್ಯರಸ್ತೆಯ ಸಾಯಿ ಬಡಾವಣೆಯಲ್ಲಿ ನಿಂತ ಮಳೆ ನೀರನ್ನು ದಾಟಲು ಜನರು ಬಾಗಿಲನ್ನೇ ದೋಣಿಯಂತೆ ಬಳಸಿದರು ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್   

ಬೆಂಗಳೂರು: ನಗರದಲ್ಲಿ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಗುರುವಾರ ಬಿಡುವು ನೀಡಿತ್ತು. ಆದರೆ, ಸಾಯಿ ಬಡಾವಣೆ ಹಾಗೂ ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ನೀರು ಹೊರಹೋಗಿಲ್ಲ.

ಹೊರಮಾವು ಸಮೀಪದ ಸಾಯಿ ಬಡಾವಣೆಯಲ್ಲಿ ಗುರುವಾರವೂ ಮೊಣಕಾಲುದ್ದ ನೀರು ನಿಂತಿದ್ದು, ನೂರಾರು ಮನೆಗಳಲ್ಲಿ ನೀರಿತ್ತು. ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಾಗೂ ವಾಹನಗಳನ್ನು ಕೊಂಡೊಯ್ಯಲು ನಿವಾಸಿಗಳು ತಾತ್ಕಾಲಿಕ ಬೋಟ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದರು.

‘ನಾಲ್ಕು ದಿನಗಳಿಂದ ನಾವು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಶಾಲೆ ಆರಂಭವಾಗಿದ್ದು, ಅವರನ್ನು ಕಳುಹಿಸಲು ಥರ್ಮಾಕೋಲ್‌ ಬಳಸಿ ಬೋಟ್‌ ಮಾಡಿಕೊಂಡಿದ್ದೇವೆ. ಇದು ಎಷ್ಟು ದಿನ ಹೀಗೇ ಇರುತ್ತೋ ಗೊತ್ತಿಲ್ಲ’ ಎಂದು ಸ್ಥಳೀಯರಾದ ರಮೇಶ್‌ ಅಳಲು ತೋಡಿಕೊಂಡರು.

ADVERTISEMENT

‘ಮನೆಗಳಲ್ಲಿ ನೀರು ತುಂಬಿರುವುದರಿಂದ ಯಾವ ಕೆಲಸವನ್ನೂ ಮಾಡಲು ಆಗುತ್ತಿಲ್ಲ. ಪಾಲಿಕೆಯವರು ಊಟ ತಿಂಡಿ ನೀಡುತ್ತಿದ್ದರೂ, ಕೆಲಸಕ್ಕೆ ಹೋಗಲೇಬೇಕಲ್ಲ. ಹೀಗಾಗಿ ಸಾಕಷ್ಟು ಸರ್ಕಸ್‌ ಮಾಡುತ್ತಿದ್ದೇವೆ’ ಎಂದು ಮಲ್ಲೇಶ್‌ ಹೇಳಿದರು.

ಸಾಯಿ ಬಡಾವಣೆಗೆ ರಾಜಕಾಲುವೆಯಿಂದ ಹಿಮ್ಮುಖವಾಗಿ ನೀರು ಹರಿಯುತ್ತಿದೆ. ರಾಜಕಾಲುವೆಯಲ್ಲಿ ನೀರು ಕಡಿಮೆಯಾಗದ ಹೊರತು ಇಲ್ಲಿ ನೀರು ಕಡಿಮೆಯಾಗುವುದಿಲ್ಲ. ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪಂಪ್‌ ಮೂಲಕ ನೀರು ಹೊರಹಾಕಲು ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಸಾಯಿ ಬಡಾವಣೆಯಲ್ಲಿ ನಿಂತ ಮಳೆ ನೀರಿನಿಂದ ದ್ವಿಚಕ್ರವಾಹನವನ್ನು ಹೊರತರಲು ಬಾಗಿಲನ್ನು ದೋಣಿಯಂತೆ ನಿವಾಸಿಗಳು ಬಳಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಸಾಯಿ ಬಡಾವಣೆಯ ಮನೆಯಲ್ಲಿ ತುಂಬಿಕೊಂಡಿರುವ ಮಳೆನೀರು ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್

ಸೋಂಪುರದಲ್ಲಿ ಧಾರಾಕಾರ ಮಳೆ

ದಾಬಸ್ ಪೇಟೆ: ಸೋಂಪುರ ಹೋಬಳಿಯಾದ್ಯಾಂತ ಗುರುವಾರ ಬೆಳಗ್ಗಿನ ಜಾವ ಧಾರಾಕಾರ ಮಳೆಯಾಗಿದೆ.

ಮಳೆಯಿಂದಾಗಿ ನಿತ್ಯದ ಕೆಲಸಗಳಿಗೆ ತೊಂದರೆ ಉಂಟಾಯಿತು. ಹೊಲಗಳಲ್ಲಿ ನೀರು ನಿಂತ ಪರಿಣಾಮ ರಾಗಿ ಪೈರು ಕೊಳೆಯಲು ಆರಂಭಿಸಿದೆ. ‌

ಕುರುವೆಲ್ ತಿಮ್ಮನಹಳ್ಳಿ ಗ್ರಾಮದ ರೈತ ಸಂತೋಷ್ ಅವರ ಬಾಳೆ ಗಿಡದ ಕಂದಕ (ಟ್ರoಚ್) ಗಳಲ್ಲಿ ನೀರು ತುಂಬಿಕೊಂಡಿತ್ತು.

‘ತಿಂಗಳ ಹಿಂದೆ 2 ಸಾವಿರ ಬಾಳೆ ಗಿಡಗಳನ್ನು ನಾಟಿ ಮಾಡಿದ್ದೆ. ನಿರಂತರ ಮಳೆಯಿಂದಾಗಿ ಕಂದಕದಲ್ಲಿ ನೀರು ನಿಂತು ಸುಮಾರು ಸಾವಿರ ಸಸಿಗಳು ಕೊಳೆತು ಹೋಗಿವೆ. ಇದೇ ರೀತಿ ಮಳೆ ಮತ್ತಷ್ಟು ಸಸಿಗಳು ಕೊಳೆಯುತ್ತವೆ’ ಎಂದು ರೈತ ಸಂತೋಷ್ ಬೇಸರ ವ್ಯಕ್ತಪಡಿಸಿದರು.

ಆರ್‌ಎಂವಿ 2ನೇ ಹಂತದಲ್ಲಿರುವ ರೈಲ್ವೆ ಕೆಳಸೇತುವೆಯಲ್ಲಿ ಮಳೆ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡಿದರು ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.