ADVERTISEMENT

Bengaluru Rains | ಮನೆಗಳಿಗೆ ನುಗ್ಗಿದ ಮಳೆ ನೀರು; ಸಂತ್ರಸ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 23:48 IST
Last Updated 23 ಅಕ್ಟೋಬರ್ 2024, 23:48 IST
ಬಿಳೇಕಹಳ್ಳಿಯ ಅನುಗ್ರಹ ಬಡಾವಣೆಯಲ್ಲಿ ನಾಲ್ಕು ಅಡಿಗೂ ಹೆಚ್ಚು ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು.
ಬಿಳೇಕಹಳ್ಳಿಯ ಅನುಗ್ರಹ ಬಡಾವಣೆಯಲ್ಲಿ ನಾಲ್ಕು ಅಡಿಗೂ ಹೆಚ್ಚು ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು.   

ಬೊಮ್ಮನಹಳ್ಳಿ: ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಬೊಮ್ಮನಹಳ್ಳಿ ಪ್ರದೇಶದ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದರು.

ಮಂಗಮ್ಮನಪಾಳ್ಯ, ಬಿಳೇಕಹಳ್ಳಿ ಪ್ರದೇಶದ ಅನುಗ್ರಹ ಬಡಾವಣೆ ಎರಡನೇ ಹಂತ, ಕೋಡಿಚಿಕ್ಕನಹಳ್ಳಿಯ ಕೆಲ ಭಾಗಗಳಲ್ಲಿ ರಸ್ತೆಗಳು ಹೊಳೆಯಂತಾದವು. ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು, ನೀರು ಹೊರಹಾಕುವಲ್ಲಿ ನಿರತರಾದರು. ಅನುಗ್ರಹ ಬಡಾವಣೆಯ ಕಾವೇರಿಯಮ್ಮ ದೇವಸ್ಥಾನಕ್ಕೆ ಕೊಳಚೆ ನೀರು ನುಗ್ಗಿತ್ತು. ಭಾರಿ ಮಳೆಯಿಂದಾಗಿ ಚೇಂಬರ್‌ಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ರೋಗ ಹರಡುವ ಭೀತಿ ಎದುರಾಗಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿರು.

ಬಿಳೇಕಹಳ್ಳಿ ಮತ್ತು ಬಿಟಿಎಂ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತು, ಕೆಲ ಸಮಯ ಸಂಪರ್ಕ ಕಡಿತವಾಗಿತ್ತು. ಇದರಿಂದ ಜನ ಸಂಚಾರಕ್ಕೆ ಅಡಚಣೆಯಾಗಿತ್ತು. ಡಾಂಬರು ಕಾಣದ ಮಂಗಮ್ಮನಪಾಳ್ಯದ ರಸ್ತೆಗಳಲ್ಲಿ ನಿಂತ ಕೊಳಚೆ ನೀರು ಮನೆಗಳಿಗೆ ನುಗ್ಗಿ ಜನ ತೊಂದರೆ ಅನುಭವಿಸಿದರು. ನೀರಿನ ಸಂಪ್‌ಗಳಿಗೆ ಕೊಳಚೆ ನೀರು ಸೇರಿದ್ದರಿಂದ, ಜನ ಕುಡಿಯುವ ನೀರಿಗೆ ಪರದಾಡಿದರು.

ADVERTISEMENT

ʼಮಂಗಮ್ಮನಪಾಳ್ಯ ತಗ್ಗುಪ್ರದೇಶದಲ್ಲಿದ್ದು, ನೀರು ಮನೆಗಳಿಗೆ ನುಗ್ಗಿದೆ. ಕೆಲವೆಡೆ ರಸ್ತೆಯಲ್ಲಿ ನಾಲ್ಕು ಅಡಿ ನೀರು ನಿಂತಿದೆ. ಪ್ರತಿ ಮಳೆಯಲ್ಲೂ ನಮ್ಮ ಪ್ರದೇಶ ಮುಳುಗಡೆ ಆಗುವುದು ಅಧಿಕಾರಿಗಳಿಗೆ ಗೊತ್ತಿದೆ. ಆದಾಗ್ಯೂ ಯಾವುದೇ ಕ್ರಮಕೈಗೊಂಡಿಲ್ಲ, ಬಿಬಿಎಂಪಿ ಕೂಡಲೇ ಸ್ಪಂದಿಸದೇ ಇದ್ದಲ್ಲಿ ಹೊಸೂರು ರಸ್ತೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆʼ ಎಂದು ಮಂಗಮ್ಮನಪಾಳ್ಯ ನಿವಾಸಿ ಸಯ್ಯದ್‌ ನಜೀರ್‌ ಆಕ್ರೋಶ ವ್ಯಕ್ತಪಡಿಸಿದರು.

ಎಂದಿನಂತೆ ಸಿಲ್ಕ್‌ ಬೋರ್ಡ್‌ ಬಳಿ ಅಪಾರ ಪ್ರಮಾಣದ ನೀರು ನಿಂತ ಪರಿಣಾಮ, ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಪರದಾಡಿದರು. ಹೆಚ್‌ಎಸ್‌ಆರ್‌ ಬಡಾವಣೆಯ ಹಲವು ರಸ್ತೆಗಳು ಹೊಳೆಯಂತಾಗಿ, ಸಂಚಾರಕ್ಕೆ ತೊಂದರೆ ಆಗಿದೆ.

ʼನನ್ನನ್ನೂ ಒಳಗೊಂಡಂತೆ ಎಲ್ಲ ಅಧಿಕಾರಿಗಳು ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿದ್ದೇವೆ. ಹೆಚ್ಚು ನೀರು ನಿಲ್ಲುವ ಕಡೆ ಪಪಿಂಗ್‌ ಮಾಡುವ ವ್ಯವಸ್ಥೆ ಮಾಡಿದ್ದೇವೆ. ತೊಂದರೆ ಆದಲ್ಲಿ ಸಹಾಯವಾಣಿ 080 – 25732447 ನಂಬರ್‌ಗೆ ಕರೆ ಮಾಡಬಹುದುʼ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಅಜಿತ್‌ ತಿಳಿಸಿದರು.

ಬಿಳೇಕಹಳ್ಳಿಯ ಕಾವೇರಿಯಮ್ಮ‌ ದೇವಸ್ಥಾನದ ಒಳಗೆ ಕೊಳಚೆ ನೀರು ನುಗ್ಗಿರುವುದು.

* ಜೋರು‌ ಮಳೆ; ಹೊಳೆಯಂತಾದ ರಸ್ತೆಗಳು

* ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ನೀರು

* ಕೊಳಚೆ ನೀರು, ದುರ್ವಾಸನೆ, ರೋಗ ಹರಡುವ ಭೀತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.