ADVERTISEMENT

Bengaluru Rains | ನೀರು ಇಳಿದಿದೆ.. ಸಮಸ್ಯೆಗಳು ಉಳಿದಿವೆ..!

ಜಲಾವೃತಗೊಂಡಿದ್ದ ಟಾಟಾನಗರ, ಬಾಲಾಜಿ ಬಡಾವಣೆಯ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 0:05 IST
Last Updated 24 ಅಕ್ಟೋಬರ್ 2024, 0:05 IST
<div class="paragraphs"><p>ಮಳೆಯಿಂದ ಪ್ರವಾಹಕ್ಕೊಳಗಾದ ನಗರದ ಟಾಟಾನಗರದ ಕೆಲವೆಡೆ ಪಂಪ್‌ಗಳನ್ನು ಬಳಸಿ ನೀರನ್ನು ಹೊರಹಾಕಲಾಯಿತು </p></div>

ಮಳೆಯಿಂದ ಪ್ರವಾಹಕ್ಕೊಳಗಾದ ನಗರದ ಟಾಟಾನಗರದ ಕೆಲವೆಡೆ ಪಂಪ್‌ಗಳನ್ನು ಬಳಸಿ ನೀರನ್ನು ಹೊರಹಾಕಲಾಯಿತು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಮಳೆ ಬಿಡುವು ಕೊಟ್ಟಿದ್ದು, ರಸ್ತೆಯ ಮೇಲೆ ನಿಂತಿದ್ದ ನೀರು ಇಳಿದಿದೆ. ಮನೆಗಳ ಸಂಪ್‌ಗಳು, ಅಪಾರ್ಟ್‌ಮೆಂಟ್‌ಗಳ ನೆಲ ಮಹಡಿಗೆ ನುಗ್ಗಿದ ಕೊಳಚೆ ಮಿಶ್ರಿತ ಮಳೆ ನೀರನ್ನು ನಿವಾಸಿಗಳು ಹೊರ ಹಾಕುತ್ತಿದ್ದರು‌. ಅಂಗಡಿ ಮಳಿಗೆಗಳವರು ತೋಯ್ದು ಹೋಗಿರುವ ವಸ್ತುಗಳನ್ನು ಬಿಸಿಲಿಗೆ ಹರಡಿ ಒಣಗಿಸುತ್ತಾ, ಅತ್ತ ಅಂಗಡಿಯನ್ನು ಸ್ವಚ್ಛಗೊಳಿಸುತ್ತಿದ್ದರು...!

ADVERTISEMENT

‌ಮಂಗಳವಾರ ಮನೆಗಳಿಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದ್ದ ಕೊಡಿಗೆಹಳ್ಳಿ ವ್ಯಾಪ್ತಿಯ ಟಾಟಾನಗರ, ಬಾಲಾಜಿ ಬಡಾವಣೆ, ಭದ್ರಪ್ಪ ಲೇಔಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಕಂಡು ಬಂದ ದೃಶ್ಯಗಳಿವು.‌

ಭಾರಿ ಮಳೆ ಹಾಗೂ ದೊಡ್ಡಬೊಮ್ಮಸಂದ್ರ ಕೆರೆಯ ಕೋಡಿಬಿದ್ದಿದ್ದರಿಂದ ರಾಜಕಾಲುವೆ ಉಕ್ಕಿ ಹರಿದು, ಹೊಳೆಯಂತಾಗಿದ್ದ ಬಡಾವಣೆಗಳ ಕೆಲ ರಸ್ತೆಗಳಲ್ಲಿ, ನೀರು ಇಳಿದಿದೆ. ಆದರೆ, ಇನ್ನೂ ಕೆಲವೆಡೆ ರಸ್ತೆಗಳ ಬದಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಸುಂದರವಾಗಿದ್ದ ‘ಸತೀಶ್ ಧವನ್’ ಉದ್ಯಾನದ ತುಂಬಾ ಮಳೆ ನೀರು ತುಂಬಿಕೊಂಡಿದೆ.

ಇತ್ತೀಚೆಗಷ್ಟೇ ರಸ್ತೆ ಗುಂಡಿಗಳಿಗೆ ಹಾಕಿದ್ದ ಡಾಂಬರು ಕಿತ್ತು ಹೋಗಿದೆ. ರಾಜಕಾಲುವೆಯಲ್ಲಿ ಮೇಲ್ಮಟ್ಟದಲ್ಲೇ ನೀರು ಹರಿಯುತ್ತಿದ್ದು, ಅದರ ತುಂಬಾ ತ್ಯಾಜ್ಯ ತುಂಬಿಕೊಂಡಿದೆ. ಮತ್ತೆ ಮಳೆ ಬಂದರೆ, ಕಾಲುವೆ ಉಕ್ಕಿ ಹರಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕದಿಂದ ಹೇಳುತ್ತಿದ್ದರು.

ನೀರು ತೆರವು ಕಾರ್ಯ:

ಟಾಟಾನಗರ ಬಡಾವಣೆಯಲ್ಲಿ ಸಂಪ್‌ನಲ್ಲಿ ತುಂಬಿಕೊಂಡಿದ್ದ ಮಳೆ ನೀರು ಮಿಶ್ರಿತ ಕೊಳಚೆ ನೀರನ್ನು ನಿವಾಸಿಗಳು ಹೊರ ಹಾಕಿ, ಟ್ಯಾಂಕರ್ ನೀರು ತರಿಸಿ ತುಂಬಿಸುತ್ತಿದ್ದರು. ‘ಸಂಪ್‌ಗೆ ಟ್ಯಾಂಕರ್ ನೀರಿಗೆ ಕೊಳಚೆ ನೀರು ಬೆರೆತಿತ್ತು. ಅದನ್ನು ಹೊರ ಹಾಕಿಸಿ, ಆಲಂ ಹಾಕಿದ್ದೇವೆ’ ಎಂದು ಟಾಟಾ ನಗರದ ನಿವಾಸಿ ಲಕ್ಷ್ಮಿ ಹೇಳಿದರು.

ಇನ್ನೂ ಹಲವು ಅಪಾರ್ಟ್‌ಮೆಂಟ್‌ಗಳ ನೆಲ ಮಹಡಿಯಲ್ಲಿ ಇನ್ನೂ ಮಳೆ ನೀರು ತುಂಬಿದೆ. ಜನರೇಟರ್‌ ನೆರವಿನೊಂದಿಗೆ ನೀರನ್ನು ಹೊರ ಹಾಕುತ್ತಿದ್ದಾರೆ. ‘ನೆಲಮಹಡಿಯಲ್ಲಿದ್ದ ವಾಹನಗಳಿಗೆಲ್ಲ ನೀರು ತುಂಬಿಕೊಂಡಿದೆ. ನೀರು ಪೂರ್ತಿ ಖಾಲಿಯಾದ ಮೇಲೆ, ಅವುಗಳ ಸ್ಥಿತಿ ತಿಳಿಯುತ್ತದೆ’ ಎಂದು ನಿವಾಸಿಯೊಬ್ಬರು ಆತಂಕದಿಂದ ಹೇಳಿದರು.

ಕೆಲವರು ಮನೆಗಳಿಂದ ಮಳೆ ನೀರನ್ನು ರಸ್ತೆಗೆ ಹರಿಸುತ್ತಿದ್ದರೆ, ಇನ್ನೂ ಕೆಲವರು ಸಮೀಪದಲ್ಲಿದ್ದ ನೀರುಗಾಲುವೆಗಳಿಗೆ ಬಿಡುತ್ತಿದ್ದರು. ರಸ್ತೆ ಮೇಲೆ ಹರಿದ ನೀರು, ಕೆಲವು ಕಡೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಕಿರಿದಾದ ಕಾಲುವೆ, ನೀರು ಹರಿಯುವ ಜಾಗದ ಒತ್ತುವರಿ, ರಾಜಕಾಲುವೆಗಳ ಅಸಮರ್ಪಕ ನಿರ್ವಹಣೆಯಿಂದ ನೆರೆ ಸೃಷ್ಟಿಯಾಗುತ್ತಿದೆ. ಸದ್ಯಕ್ಕೆ ಟಾಟಾನಗರ ಮತ್ತು ಸುತ್ತಲಿನ ಬಡಾವಣೆಯಲ್ಲಿ ನೀರು ಇಳಿದಿದೆ. ಸಮಸ್ಯೆಗಳು ಮಾತ್ರ ಇನ್ನೂ ಉಳಿದಿವೆ. ತಕ್ಷಣಕ್ಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟ. ಆದರೆ ಕಾಲಕಾಲಕ್ಕೆ ರಾಜಕಾಲುವೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ, ತಾತ್ಕಾಲಿಕ ಪರಿಹಾರ ಸಿಗಬಹುದು ಎಂಬುದು ನಿವಾಸಿಗಳ ಅಭಿಪ್ರಾಯವಾಗಿದೆ.

ಮಳೆಯಿಂದ ಪ್ರವಾಹಕ್ಕೊಳಗಾದ ನಗರದ ಟಾಟಾನಗರದ ಹಲವೆಡೆ ರಸ್ತೆಗಳು ಹಾಳಾಗಿವೆ ಪ್ರಜಾವಾಣಿ ಚಿತ್ರ

* ಕೆಲವು ರಸ್ತೆಗಳು ಜಲಾವೃತ

* ತುಂಬಿರುವ ರಾಜಕಾಲುವೆಗಳು

* ಮುಂದುವರಿದ ನೀರು ತೆರವು ಕಾರ್ಯ

ಟಾಟಾನಗರದ ರಾಜಕಾಲುವೆಯಲ್ಲಿ ಶೇಖರಣೆಯಾಗಿದ್ದ ತ್ಯಾಜ್ಯ ಪ್ರಜಾವಾಣಿ ಚಿತ್ರ

ಏಕೆ ಹೀಗಾಯ್ತು..?

ದೊಡ್ಡಬೊಮ್ಮಸಂದ್ರ‌ ಕೆರೆ ಹಾಗೂ ಹೆಬ್ಬಾಳ ಕೆರೆಗಳ ನಡುವೆ ಟಾಟಾನಗರ ಬಾಲಾಜಿ ಬಡಾವಣೆಗಳಿವೆ (ಸ್ಥಳೀಯರ ಪ್ರಕಾರ ಕೆರೆ ನೀರು ಹರಿಯುವ ಕಾಲುವೆ ಪಾತ್ರದಲ್ಲಿವೆ). ಬಡಾವಣೆಗಳ ಮಧ್ಯೆ ರಾಜಕಾಲುವೆ ಹರಿಯುತ್ತದೆ. ‘ಮೊನ್ನೆ ದೊಡ್ಡಬೊಮ್ಮಸಂದ್ರ ಕೆರೆ‌ ತುಂಬಿ ಕೋಡಿ ಬಿದ್ದು ಆ ಕೋಡಿ ನೀರು ಹೆಬ್ಬಾಳ‌ ಕೆರೆಯನ್ನು ಸಂಪರ್ಕಿಸುವ ಈ ರಾಜಕಾಲುವೆಯಲ್ಲಿ ಹರಿಯಿತು. ಕೆಲವೆಡೆ ಕಾಲುವೆ ಕಿರಿದಾಗಿದ್ದರಿಂದ ಹರಿವಿನ ಪ್ರಮಾಣವೂ ಹೆಚ್ಚಾಗಿ ರಸ್ತೆಗಳಿಗೆ ಮನೆಗಳಿಗೆ ನೀರು ನುಗ್ಗಿದೆ’ ಎಂಬುದು ಸ್ಥಳೀಯರ ವಿಶ್ಲೇಷಣೆ. ‘ಇದು ಗದ್ದೆಗಳಿದ್ದ ಜಾಗ. ಮೊದಲಿನಿಂದಲೂ ದೊಡ್ಡಬೊಮ್ಮಸಂದ್ರ ಕೆರೆಯ ಕೋಡಿ ನೀರು ಇದೇ ಜಾಗದಲ್ಲೇ ಹರಿಯುತ್ತಿತ್ತು. ಅಲ್ಲಿ ಈಗ ಬಡಾವಣೆಗಳಾಗಿವೆ. ಮಳೆ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೇ ಮನೆಗಳಿಗೆ ನುಗ್ಗುತ್ತಿದೆ. ಇದು ಮಳೆಯಿಂದಷ್ಟೇ ಉಂಟಾದ ಸಮಸ್ಯೆಯಲ್ಲ.

ನಾಲ್ಕೈದು ವರ್ಷಗಳ ಹಿಂದೆ ಹೀಗೆಯೇ ಆಗಿತ್ತು. ಆದರೆ ಇಷ್ಟು ದೊಡ್ಡ ಸಮಸ್ಯೆಯಾಗಿರಲಿಲ್ಲ’ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್ ಸಮಸ್ಯೆಯ ಮೂಲವನ್ನು ವಿವರಿಸಿದರು. ‘ಈ ಕೆರೆಗಳ ಜಾಲ ನೂರಾರು ವರ್ಷಗಳಿಂದ ಇದೆ. ಬಡಾವಣೆಗಳು ನಿರ್ಮಾಣವಾಗಿರುವುದು ಮೂರ್ನಾಲ್ಕು ದಶಕಗಳ ಹಿಂದೆ. ಸ್ವಾಭಾವಿಕವಾಗಿ ಹರಿಯುವ ಕೆರೆ ನೀರಿಗೆ ಅಡ್ಡಿಪಡಿಸಿದ್ದರಿಂದ ಹೀಗಾಗಿದೆ. ಕೆರೆಗೆ ನೀರು ಹರಿಯಲು ದಾರಿ ಬಿಡುವುದೊಂದೇ ಈಗಿರುವ ಮಾರ್ಗ' ಎನ್ನುತ್ತಾರೆ ಟಾಟಾ ನಗರದ ನಿವಾಸಿ ಗೋಪಾಲಕೃಷ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.