ಬೆಂಗಳೂರು: ನಗರದಲ್ಲಿ ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಮಧ್ಯಾಹ್ನದ ನಂತರ ಸುರಿದ ಧಾರಾಕಾರ ಮಳೆಯಿಂದ, 1,030 ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಬಹುತೇಕ ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ದಟ್ಟಣೆ ಅಧಿಕವಾಗಿತ್ತು.
ಯಲಹಂಕ ಹಾಗೂ ದಾಸರಹಳ್ಳಿ ವಲಯದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡವು. ಮನೆಗಳಿಗೆ ನೀರು ನುಗ್ಗಿ, ರಾತ್ರಿಯಿಡೀ ನೀರನ್ನು ಹೊರಹಾಕಲು ನಿವಾಸಿಗಳು ಪ್ರಯತ್ನಪಟ್ಟರು. ಬಿಬಿಎಂಪಿ ಸಿಬ್ಬಂದಿ ಸೋಮವಾರ ರಾತ್ರಿಯಿಂದಲೂ ನೀರು ಹೊರಹಾಕುವ ಯತ್ನ ನಡೆಸುತ್ತಿದ್ದಾರೆ. ಮಂಗಳವಾರ ತಡರಾತ್ರಿಯವರೆಗೂ ಹಲವು ಬಡಾವಣೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿರಲಿಲ್ಲ.
ಮಳೆನೀರು ತುಂಬಿದ್ದ ಮನೆಗಳ ನಿವಾಸಿಗಳಿಗೆ ತಿಂಡಿ, ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದ ಬಿಬಿಎಂಪಿ ಸಿಬ್ಬಂದಿ, ಅವರನ್ನು ಅಲ್ಲಿಂದ ಬೇರೆ ಸ್ಥಳಗಳಿಗೆ ಸ್ಥಳಾರಂತರಿಸಲು ದೋಣಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಉಪಯೋಗಿಸಿದರು. ಕೆಲವರು ಸಂಬಂಧಿಕರ ಮನೆಗೆ ತೆರಳಿದರೆ, ಹಲವರು ಪಾಲಿಕೆ ವ್ಯವಸ್ಥೆ ಮಾಡಿದ್ದ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಕೆಲವರು ಮನೆ ಬಿಟ್ಟು ಬಾರದೆ, ನೀರಿ ಮಧ್ಯೆಯೇ ವಾಸಿಸುತ್ತಿದ್ದಾರೆ.
ಬಳ್ಳಾರಿ ರಸ್ತೆ, ಹೆಬ್ಬಾಳ ಜಂಕ್ಷನ್, ದೇವಸಂದ್ರ ಜಂಕ್ಷನ್, ಯಶವಂತಪುರ ಮೆಟ್ರೊ ನಿಲ್ದಾಣ, ಆಡುಗೋಡಿ ಜಂಕ್ಷನ್, ಆನೆಪಾಳ್ಯ ಜಂಕ್ಷನ್, ಎಂ.ಎಸ್. ಪಾಳ್ಯದಿಂದ ಯಲಹಂಕ, ದೊಡ್ಡಬೆಟ್ಟಹಳ್ಳಿ ಜಂಕ್ಷನ್, ಬಿಇಎಲ್ ವೃತ್ತ, ವಾಟಾಳ್ ನಾಗರಾಜ್ ರಸ್ತೆಯಿಂದ ಮೆಜೆಸ್ಟಿಕ್, ಸಾಗರ್ ಜಂಕ್ಷನ್‌ನಿಂದ ಡೇರಿ ವೃತ್ತ, ಮಂತ್ರಿ ಮಾಲ್‌ನಿಂದ ಮಲ್ಲೇಶ್ವರ, ಬಿ. ನಾರಾಯಣಪುರದಿಂದ ಟಿನ್ ಫ್ಯಾಕ್ಟರಿ, ಪ್ರಸನ್ನ ಜಂಕ್ಷನ್‌ನಿಂದ ಬಸವ ಮಂಟಪ, ಚಿಕ್ಕಪೇಟೆ ಮೆಟ್ರೊ ನಿಲ್ದಾಣದಿಂದ ಚಿಕ್ಕಪೇಟೆ, ನಾಯಂಡಹಳ್ಳಿ ಜಂಕ್ಷನ್ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡು ತಾಸುಗಟ್ಟಲೆ ವಾಹನ ದಟ್ಟಣೆ ಉಂಟಾಗಿತ್ತು.
ತುರ್ತು ಕ್ರಮಕ್ಕೆ ಸೂಚನೆ
ಯಲಹಂಕ ವಲಯ ವ್ಯಾಪ್ತಿಯಲ್ಲಿ ಜಲಾವೃತಗೊಂಡ ಪ್ರದೇಶಗಳಲ್ಲಿ ತುರ್ತು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಸಚಿವ ಕೃಷ್ಟ ಬೈರೇಗೌಡ ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್. ಉಮಾಶಂಕರ್ ಅವರೊಂದಿಗೆ ಜಲಾವೃತಗೊಂಡಿರುವ ಟಾಟಾ ನಗರಕ್ಕೆ ಅವರು ಭೇಟಿ ನೀಡಿ ಪರಿಶೀಲಿಸಿದರು. ಯಲಹಂಕ ವಲಯ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿರುವ ಕಾರಣ ಹೆಚ್ಚುವರಿಯಾಗಿ ಮೇಲ್ವಿಚಾರಣೆಗಾಗಿ ಪಾಲಿಕೆ ಇತರೆ ವಲಯಗಳ ಐಎಎಸ್ ಕೆಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಒಬ್ಬೊಬ್ಬ ಅಧಿಕಾರಿಗಳಿಗೆ ಒಂದೊಂದು ಜವಾಬ್ದಾರಿಯನ್ನು ನೀಡಿ ಸ್ಥಳೀಯ ನಿವಾಸಿಗಳಿಗೆ ಕೂಡಲೆ ಸ್ಪಂದಿಸುವ ಕೆಲಸ ಮಾಡಬೇಕು. ಜೊತೆಗೆ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನಿಡಿದರು. ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ವಲಯ ಆಯುಕ್ತ ಕರೀಗೌಡ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಉಪ ಆಯುಕ್ತೆ ಪಲ್ಲವಿ ಉಪಸ್ಥಿತರಿದ್ದರು.
ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಮಳೆ!
ಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ 220ರವರೆಗೆ 24.1 ಸೆಂ.ಮೀಟರ್ ಮಳೆಯಾಗಿದೆ. ವಾಡಿಕೆಯಂತೆ 11.8 ಸೆಂ.ಮೀಟರ್ ಮಳೆಯಾಗುತ್ತಿತ್ತು. 1901ರಿಂದ 2024ರ ಅವಧಿಯಲ್ಲಿ ಅ.1ರಿಂದ 22ರವರೆಗೆ 2005ರಲ್ಲಿ 29.1 ಸೆಂ.ಮೀ ಮಳೆಯಾಗಿದ್ದು ಈವರೆಗಿನ ದಾಖಲೆ. 1943ರಲ್ಲಿ 28.7 ಸೆಂ.ಮೀ 1970ರಲ್ಲಿ 25.3 ಸೆಂ.ಮೀ ಮಳೆಯಾಗಿತ್ತು. ಇದರ ನಂತರ 2024ರಲ್ಲಿ ಅತಿಹೆಚ್ಚು ಮಳೆಯಾಗಿದ್ದು ನಾಲ್ಕನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.