ADVERTISEMENT

Bengaluru Rains | ಬಿಡುವು ನೀಡಿದ ಮಳೆ; ಬಡಾವಣೆಗಳಿಂದ ನೀರು ತೆರವು

ಯಲಹಂಕ, ಹೊರಮಾವು ವಿಭಾಗದ ಬಿಬಿಎಂಪಿ ಸಿಬ್ಬಂದಿಯಿಂದ ಹಗಲು–ರಾತ್ರಿ ತೆರವು ಕಾರ್ಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 0:22 IST
Last Updated 18 ಅಕ್ಟೋಬರ್ 2024, 0:22 IST
ಯಲಹಂಕದ ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ತುಂಬಿದ್ದ ಮಳೆನೀರನ್ನು ಹೊರ ಹಾಕಲಾಗಿದ್ದು, ರಸ್ತೆ ಬದಿ ಒಂದಷ್ಟು ನೀರು ನಿಂತಿದೆ
ಯಲಹಂಕದ ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ತುಂಬಿದ್ದ ಮಳೆನೀರನ್ನು ಹೊರ ಹಾಕಲಾಗಿದ್ದು, ರಸ್ತೆ ಬದಿ ಒಂದಷ್ಟು ನೀರು ನಿಂತಿದೆ   

ಬೆಂಗಳೂರು: ನಗರದಲ್ಲಿ ಮೂರು ದಿನ ಸುರಿದ ಮಳೆ, ಗುರುವಾರ ಬಿಡುವು ನೀಡಿತ್ತು. ಜಲಾವೃತ ಪ್ರದೇಶಗಳಿಂದ ನೀರು ಹೊರಹಾಕುವಲ್ಲಿ ಬಿಬಿಎಂಪಿ ಸಿಬ್ಬಂದಿ ಯಶಸ್ವಿಯಾದರು.

ಸೋಮವಾರ ತಡರಾತ್ರಿಯಿಂದ ಮಂಗಳವಾರ ರಾತ್ರಿಯವರೆಗೆ ನಿರಂತರ ಸುರಿದ ಮಳೆ, ಬುಧವಾರ ತುಂತುರು ಹನಿಯಾಗಿತ್ತು. ಗುರುವಾರ ಬೆಳಿಗ್ಗೆಯಿಂದ ಮಳೆ ಇರಲಿಲ್ಲ. ಯಲಹಂಕ, ಮಹದೇವಪುರ ವಲಯಗಳಲ್ಲಿ ಅಪಾರ್ಟ್‌ಮೆಂಟ್‌ ಮತ್ತು ಬಡಾವಣೆಗಳಲ್ಲಿ ತುಂಬಿದ್ದ ನೀರನ್ನು ಮಧ್ಯಾಹ್ನದ ವೇಳೆಗೆ ಬಿಬಿಎಂಪಿ ಸಿಬ್ಬಂದಿ ಪಂಪ್‌ಗಳ ಮೂಲಕ ಹೊರಹಾಕಿದರು.

ಮಹದೇವಪುರ ವಲಯದ ಹೊರಮಾವು ಉಪ ವಿಭಾಗದಲ್ಲಿರುವ ಸಾಯಿಬಾಬಾ ಲೇಔಟ್ ಹಾಗೂ ವಡ್ಡರಪಾಳ್ಯದಲ್ಲಿ 180ಕ್ಕೂ ಹೆಚ್ಚು ಮನೆಗಳಿವೆ. ರಾಜಕಾಲುವೆಯಲ್ಲಿ ಮಳೆ ನೀರಿನ ಹರಿವಿನ ಮಟ್ಟ ಹೆಚ್ಚಾಗಿ, ನೀರು ಹಿಮ್ಮುಖವಾಗಿ ಚಲಿಸಿತ್ತು. ಇದರಿಂದ ರಾಜಕಾಲುವೆಯ ಎರಡೂ ಬದಿಯ ಬಡಾವಣೆಗಳಲ್ಲಿ ನೀರು ತುಂಬಿತ್ತು. ಎರಡು ದಿನದಿಂದ ನೀರು ಹೊರ ಹಾಕಿದ್ದ ಬಿಬಿಎಂಪಿ ಸಿಬ್ಬಂದಿ, ಗುರುವಾರ ಸಂಜೆ ಪೂರ್ಣವಾಗಿ ತೆರವುಗೊಳಿಸಿದರು.

ADVERTISEMENT

‘ಒಂಬತ್ತು ರಸ್ತೆಗಳಲ್ಲಿ ನೀರು ತುಂಬಿತ್ತು. ಅದರಲ್ಲಿ ಐದು ರಸ್ತೆಗಳಲ್ಲಿನ ನೀರನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಇನ್ನುಳಿದ ನಾಲ್ಕು ರಸ್ತೆಗಳಲ್ಲಿ ಅಗ್ನಿಶಾಮಕ ದಳದೊಂದಿಗೆ ಪಾಲಿಕೆ ಸಿಬ್ಬಂದಿ ಪಂಪ್‌ಗಳ ಮೂಲಕ ನೀರನ್ನು ಹೊರ ಹಾಕುತ್ತಿದೆ. ಶುಕ್ರವಾರದ ವೇಳೆಗೆ ಪೂರ್ಣವಾಗಿ ನೀರು ಹೊರಹರಿಸಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ನಿವಾಸಿಗಳಿಗೆ ಪಾಲಿಕೆ ವತಿಯಿಂದ ಕುಡಿಯುವ ನೀರು, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ನೀರು ನುಗ್ಗಿರುವ ಮನೆಗಳ ನಿವಾಸಿಗಳಿಗೆ ತಂಗಲು ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾಯಿಬಾಬಾ ಲೇಔಟ್‌ ಸಮಸ್ಯೆಯನ್ನು ಪೂರ್ಣವಾಗಿ ಪರಿಹರಿಸಲು ಅಧಿಕಾರಿಗಳು, ಸಿಬ್ಬಂದಿ ಸ್ಥಳದಲ್ಲಿಯೇ ಇದ್ದಾರೆ. ನೀರು ನುಗ್ಗಿರುವ ಮನೆಗಳ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು ಎಂದಿದ್ದಾರೆ.

ಕೇಂದ್ರೀಯ ವಿಹಾರ್: ಯಲಹಂಕ ವಲಯದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಲ್ಲಿ ನಿಂತಿದ್ದ ನೀರನ್ನು ಹೊರ ಹಾಕಲಾಗಿದೆ.

ಬುಧವಾರ ಈ ಅಪಾರ್ಟ್‌ಮೆಂಟ್‌ನವರು ಟ್ರ್ಯಾಕ್ಟರ್‌ನಲ್ಲಿ ಸಂಚರಿಸಬೇಕಾಗಿತ್ತು. ಗುರುವಾರ ಮಧ್ಯಾಹ್ನದ ವೇಳೆಗೆ ನೀರು ಹೊರಹಾಕಲಾಗಿದ್ದು, ರಸ್ತೆಯ ಕೆಲವು ಭಾಗಗಳಲ್ಲಿ ಒಂದಷ್ಟು ನೀರು ನಿಂತಿದೆ.

ಫಾತಿಮಾ ಲೇಔಟ್ ಹಾಗೂ ಇನ್ನಿತರ ಕಡೆ ನೀರು ನುಗ್ಗಿರುವ ಮನೆಗಳ ಸಮೀಕ್ಷೆ ನಡೆಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಹೊರಮಾವು ಸಮೀಪದ ಸಾಯಿಬಾಬಾ ಬಡಾವಣೆಯಲ್ಲಿ ತುಂಬಿದ್ದ ನೀರನ್ನು ಅಗ್ನಿಶಾಮಕ ದಳದೊಂದಿಗೆ ಬಿಬಿಎಂಪಿ ಸಿಬ್ಬಂದಿ ಹೊರ ಹಾಕಿದ್ದಾರೆ

ರಾಜಕಾಲುವೆ ತೆರವಾಗಿಲ್ಲ ಸ್ವಚ್ಛವೂ ಆಗಿಲ್ಲ!

‘ರಾಜಕಾಲುವೆಯನ್ನು ಸ್ವಚ್ಛಗೊಳಿಸಿಲ್ಲ ಒತ್ತುವರಿಯೂ ತೆರವಾಗಿಲ್ಲ. ಆದ್ದರಿಂದ ಪ್ರತಿ ವರ್ಷವೂ ಮಳೆಗಾಲದಲ್ಲಿ ಬಡಾವಣೆ ಮನೆಗಳಿಗೆ ನೀರು ನುಗ್ಗುತ್ತಿದೆ’ ಎಂದು ಯಲಹಂಕ ಹಾಗೂ ಮಹದೇವಪುರ ವಲಯದ ನಿವಾಸಿಗಳು ದೂರುತ್ತಿದ್ದಾರೆ. ‘ಮನೆಗಳಿಗೆ ನೀರು ನುಗ್ಗಿರುವುದು ಇದೇ ಹೊಸತಲ್ಲ. ನಾಲ್ಕಾರು ವರ್ಷಗಳಿಂದ ನೀರು ನುಗ್ಗುತ್ತಿದೆ. ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡದಿರುವುದು ಹಾಗೂ ಸ್ವಚ್ಛಗೊಳಿಸದಿರುವುದೇ ಇದಕ್ಕೆ ಕಾರಣ’ ಎಂದು ಯಲಹಂಕದ ಸುರೇಶ್‌ ಆರೋಪಿಸಿದರು. ‘ನಗರದಲ್ಲಿ 184 ಕಿ.ಮೀ ಉದ್ದದ ರಾಜಕಾಲುವೆಯಲ್ಲಿರುವ ಹೂಳನ್ನು ತೆಗೆಯಲಾಗಿದೆ ಎಂದು ಹೇಳಿ ಬಿಲ್‌ ಪಾವತಿ ಮಾಡಿಸಿಕೊಂಡಿದ್ದಾರೆ. ಇಷ್ಟೆಲ್ಲ ಕೋಟ್ಯಂತರ ರೂಪಾಯಿಗಳ ಕೆಲಸವಾಗಿದ್ದರೂ ಏಕೆ ನೀರು ಬಡಾವಣೆಗಳಿಗೆ ಹರಿಯುತ್ತಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಅಮರೇಶ್‌ ಪ್ರಶ್ನಿಸಿದರು. ‘2016–17ರಲ್ಲಿ ₹800 ಕೋಟಿ 2017–18ರಲ್ಲಿ ₹300 ಕೋಟಿ 2019–20ರಲ್ಲಿ ₹1100 ಕೋಟಿ ರಾಜಕಾಲುವೆಯಲ್ಲಿನ ಹೂಳು ತೆಗೆಯಲು ವೆಚ್ಚ ಮಾಡಲಾಗಿದೆ. 212 ಕಿ.ಮೀ ರಾಜಕಾಲುವೆ ಅಭಿವೃದ್ಧಿಗೆ ₹1217 ಕೋಟಿ ಹಾಗೂ ಕೋರಮಂಗಲ ಕಣಿವೆಗೆ (ಕೆ–100) ₹170 ಕೋಟಿ ಸೇರಿದಂತೆ ರಾಜಕಾಲುವೆಗಾಗಿ ₹3615 ಕೋಟಿ ವೆಚ್ಚ ಮಾಡಲಾಗಿದ್ದರೂ ಮಳೆ ನೀರು ಹರಿಯುತ್ತಿಲ್ಲ’ ಎಂದು ದೂರಿದರು. ಈ ಬಗ್ಗೆ ಪ್ರತಿಕ್ರಿಯೆಗಾಗಿ ಬೃಹತ್‌ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆ ಹೊಂದಿರುವ ಪ್ರಧಾನ ಎಂಜಿನಿಯರ್ ಬಿ.ಎಸ್‌. ಪ್ರಹ್ಲಾದ್‌ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

‘ಡಿಸಿಎಂ ಸೂಚನೆಗೂ ಬೆಲೆ ಇಲ್ಲ’

‘ಕಳೆದ ವರ್ಷ ಮಳೆ ಬಂದು ಬಡಾವಣೆ ಮನೆಗಳಿಗೆ ನೀರು ನುಗ್ಗಿದಾಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಶೀಘ್ರ ಶಾಶ್ವತ ಪರಿಹಾರ ಒದಗಿಸುವುದಾಗಿ ಹೇಳಿದ್ದರು. ರಾಜಕಾಲುವೆಗಳ ಒತ್ತುವರಿ ತೆರವು ಮಾಡಿ ಅಭಿವೃದ್ಧಿ ಮಾಡುವುದಾಗಿಯೂ ತಿಳಿಸಿದ್ದರು. ಆದರೆ ಈವರೆಗೆ ಅಂತಹ ಯಾವುದೇ ಕೆಲಸವಾಗಿಲ್ಲ. ಹೀಗಾಗಿ ನಾವು ಮಳೆ ಬಂದಾಗ ಸಂಕಷ್ಟ ಎದುರಿಸುತ್ತಲೇ ಇದ್ದೇವೆ’ ಎಂದು ಯಲಹಂಕದ ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್‌ನ ರಾಜೇಶ್‌ ಹೇಳಿದರು. ‘ಉಪ ಮುಖ್ಯಮಂತ್ರಿಯವರು ನಮ್ಮ ಮುಂದೆಯೇ ಮುಖ್ಯ ಆಯುಕ್ತರು ರಾಜಕಾಲುವೆ ವಿಭಾಗದ ಎಂಜಿನಿಯರ್‌ಗಳಿಗೆ ಒತ್ತುವರಿ ತೆರವು ಮಾಡಲು ಸೂಚಿದ್ದರು. ಆದರೆ ಒಂದು ವರ್ಷವಾದರೂ ಎಂಜಿನಿಯರ್‌ಗಳು ಸಬೂಬು ನೀಡಿ ಯಾವುದೇ ಕೆಲಸ ಮಾಡಿಲ್ಲ. ಡಿಸಿಎಂ ಸೂಚನೆಗೂ ಬೆಲೆ ಇಲ್ಲದಂತಾಗಿದೆ’ ಎಂದು ಯಲಹಂಕದ ರಾಜಶೇಖರ್‌ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.