ADVERTISEMENT

ರಾಮೇಶ್ವರಂ ಕೆಫೆ ಸ್ಫೋಟ: ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 15:47 IST
Last Updated 2 ಮಾರ್ಚ್ 2024, 15:47 IST
<div class="paragraphs"><p>ರಾಮೇಶ್ವರಂ ಕೆಫೆ</p></div>

ರಾಮೇಶ್ವರಂ ಕೆಫೆ

   

ಬೆಂಗಳೂರು: ಇಲ್ಲಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಸ್ಫೋಟದಲ್ಲಿ ಗಾಯಗೊಂಡಿದ್ದವರಿಗೆ ವೈದೇಹಿ ಆಸ್ಪತ್ರೆ ಹಾಗೂ ಬ್ರೂಕ್‌ ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಕೆಲವರು ಚೇತರಿಸಿಕೊಂಡಿದ್ದಾರೆ.

ಗಾಯಗೊಂಡವರಲ್ಲಿ ಶುಕ್ರವಾರ ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಬ್ರೂಕ್‌ ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ದೀಪಾಂಶು ಅವರು ಶನಿವಾರ ಚೇತರಿಸಿಗೊಂಡು, ಮನೆಗೆ ತೆರಳಿದರು. ಅವರ ಕಿವಿಗೆ ಹಾನಿಯಾಗಿತ್ತು. ಸ್ವರ್ಣಾಂಬಾ ಹಾಗೂ ಫಾರೂಕ್ ಅವರಿಗೆ ಅಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಶ್ರೀನಿವಾಸ್ ಹಾಗೂ ಮೋನಿ ಎನ್ನುವವರು ಶುಕ್ರವಾರವೇ ಚೇತರಿಸಿಕೊಂಡಿದ್ದರು. ಸದ್ಯ ಅಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದು, ನಾಗಶ್ರೀ ಎಂಬುವವರಿಗೆ ದೃಷ್ಟಿ ಮರಳುವ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸ್ವರ್ಣಾಂಬಾ ಅವರಿಗೆ ಶುಕ್ರವಾರವೇ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಒದಗಿಸಲಾಗುತ್ತಿದೆ. ಅವರ ಕಿವಿ ಕೆಳಗಿನ ಭಾಗಕ್ಕೆ ಗಾಜಿನ ತುಂಡುಗಳು ಹಾನಿ ಮಾಡಿದ್ದವು. ಅವರಿಗೆ ಮಧುಮೇಹ ಇರುವುದರಿಂದ ಗಾಯಗಳು ಒಣಗಲು ಸಮಯ ಬೇಕಾಗುತ್ತದೆ. ಉಳಿದವರು ಚೇತರಿಸಿಕೊಂಡಿದ್ದಾರೆ’ ಎಂದು ಬ್ರೂಕ್‌ ಫೀಲ್ಡ್ ಆಸ್ಪತ್ರೆಯ ಡಾ. ಪ್ರದೀಪ್ ತಿಳಿಸಿದರು. 

‘ನಾಗಶ್ರೀ ಅವರನ್ನು ಆಸ್ಪತ್ರೆಗೆ ಕರೆತಂದ ಎರಡು ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬಲ ಕಣ್ಣಿನ ಗುಡ್ಡೆಗೆ ಗಂಭೀರ ಹಾನಿಯಾಗಿದ್ದು, ಸ್ಫೋಟದ ದೂಳು ಕೂಡ ಕಣ್ಣಿನ ಒಳಗಡೆ ಸೇರಿದೆ. ಹರಿದ ಕಣ್ಣಿನ ಗುಡ್ಡೆಗೆ ಹೊಲಿಗೆ ಹಾಕಲಾಗಿದೆ. ದೃಷ್ಟಿ ಮರಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕನಿಷ್ಠ ಒಂದು ವಾರ ಅವರಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಇನ್ನುಳಿದ ಮೂವರಿಗೆ ಕಿವಿ ಭಾಗದಲ್ಲಿ ಹಾನಿಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವೈದೇಹಿ ಆಸ್ಪತ್ರೆಯ ಡಾ. ಸೀಮಾ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.