ಬೆಂಗಳೂರು: ಮಳೆಯಿಂದ ಉಂಟಾಗುವ ಸಂಕಷ್ಟಗಳ ನಿಯಂತ್ರಣಕ್ಕೆ ಬೆಂಗಳೂರು ನಗರ ಇನ್ನೂ ಸಜ್ಜಾಗಿಲ್ಲ ಎಂಬುದನ್ನು ಭಾನುವಾರ ಮುಕ್ಕಾಲು ಗಂಟೆ ಸುರಿದ ಮಳೆ ಬಹಿರಂಗಗೊಳಿಸಿದೆ.
ಅತಿಹೆಚ್ಚು ಮಳೆಯಿಂದ ‘ಪೂರ್ವ ಬೆಂಗಳೂರು ಮುಳುಗಿದ’ ಸಂದರ್ಭದಲ್ಲಿ ಮುಖ್ಯಮಂತ್ರಿಯಾದಿಯಾಗಿ ಸಚಿವರು, ಶಾಸಕರು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಲ್ಲ.
ರಸ್ತೆಗಳ ಚರಂಡಿ, ಶೋಲ್ಡರ್ ಡ್ರೈನ್ ಸ್ವಚ್ಛತೆ, ರಾಜಕಾಲುವೆ ಒತ್ತುವರಿ ತೆರವು, ಕಾಲುವೆಗಳ ಹೂಳು ತೆಗೆದು, ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸುವ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಫೆಬ್ರುವರಿಯಿಂದ ಈವರೆಗೆ ರಾಜಕಾಲುವೆ ತೆರವಿನ ಒಂದು ಕಾರ್ಯಾಚರಣೆಯೂ ನಡೆದಿಲ್ಲ ಎಂಬುದನ್ನು ಬಿಬಿಎಂಪಿ ಅಂಕಿ–ಅಂಶವೇ ಹೇಳುತ್ತದೆ. ಇನ್ನು, ₹1,500 ಕೋಟಿ ವೆಚ್ಚದ ಹೂಳು ತೆರವು ಹಾಗೂ ಕಾಂಕ್ರೀಟ್ ಗೋಡೆಗಳ ನಿರ್ಮಾಣ ಕಾರ್ಯ ಇನ್ನೂ ಪ್ರಗತಿಯಲ್ಲೇ ಇದೆ ಎಂಬುದನ್ನು ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ನಗರದ ಇತರೆ ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿರುವ ನೀರು ತೋರಿಸುತ್ತಿದೆ.
ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ನಾಗರಿಕರಿಗೆ ಯಾವುದೇ ಸಂಕಷ್ಟ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೀಡಿದ್ದ ಭರವಸೆ ಸುಳ್ಳಾಗಿದೆ. ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಸೇರಿದಂತೆ ವಿಭಾಗದ ಎಲ್ಲ ಸಿಬ್ಬಂದಿಗೂ ಚುನಾವಣೆ ಕಾರ್ಯದಿಂದ ಮುಕ್ತಗೊಳಿಸಲಾಗಿತ್ತು. ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಗಳಾಗಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನೂ 784 ಸ್ಥಳಗಳಲ್ಲಿ ರಾಜಕಾಲುವೆ ಒತ್ತುವರಿ ಹಾಗೆಯೇ ಉಳಿದಿದೆ. ಮಹದೇವಪುರ ವಲಯದಲ್ಲಿ ಕಳೆದ ಬಾರಿ ಅತಿಹೆಚ್ಚು ಮಳೆಯಿಂದ ಸಾಕಷ್ಟು ಹಾನಿಯಾಗಿತ್ತು. ಈ ವಲಯದಲ್ಲೇ ಇನ್ನೂ 305 ಸ್ಥಳಗಳಲ್ಲಿ ಒತ್ತುವರಿ ಹಾಗೆಯೇ ಉಳಿದಿದೆ. ದಾಸರಹಳ್ಳಿ ವಲಯದಲ್ಲಿ 124, ಬೊಮ್ಮನಹಳ್ಳಿಯಲ್ಲಿ 86, ಯಲಹಂಕದಲ್ಲಿ 79, ಪೂರ್ವ ವಲಯದಲ್ಲಿ 103 ಸ್ಥಳಗಳಲ್ಲಿ ರಾಜಕಾಲುವೆ ಒತ್ತುವರಿ ಉಳಿದಿದೆ ಎಂಬುದು ಬಿಬಿಎಂಪಿಯ ಇತ್ತೀಚಿನ ಅಂಕಿ–ಅಂಶಗಳಲ್ಲಿದೆ.
ರಾಜಕಾಲುವೆ ಮರು ನಿರ್ಮಾಣಕ್ಕೆ ರಾಜ್ಯ ಸರ್ಕಾರ ವಿಶೇಷವಾಗಿ ಸುಮಾರು ₹1,750 ಕೋಟಿ ಬಿಡುಗಡೆ ಮಾಡಿದೆ. ಅತ್ಯಂತ ಅಗತ್ಯವಾದ ಕಡೆ ಮಳೆಗಾಲದಲ್ಲಿ ತೊಂದರೆಯಾಗುವುದನ್ನು ತಪ್ಪಿಸಲು ₹1,500 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ ಎಂದು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಹೇಳುತ್ತಿದ್ದಾರೆ. ಆದರೆ, ಅದು ವಾಸ್ತವದಲ್ಲಿ ಕಾಣುತ್ತಿಲ್ಲ ಎಂದು ಮಹದೇವಪುರದ ಜಗದೀಶ್ ರೆಡ್ಡಿ ದೂರುತ್ತಾರೆ.
‘ಚುನಾವಣೆ ಕಾರ್ಯದಿಂದ ರಾಜಕಾಲುವೆ ಒತ್ತುವರಿ ತೆರವು, ಮರು ನಿರ್ಮಾಣ ಯೋಜನೆ ಪ್ರಗತಿ ಪರಿಶೀಲನೆ ಮಾಡಿಲ್ಲ’ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳುತ್ತಾರೆ.
ಸರ್ಕಾರದ ಅನುಮತಿಗೆ ಕಾದಿರುವ ತೂಬು ನಿರ್ಮಾಣ
ಅಮೃತ ನಗರೋತ್ಥಾನ ಯೋಜನೆಯಲ್ಲಿ 148 ಕೆರೆಗಳಿಗೆ ‘ಸ್ಲೂಯಿಸ್ ಗೇಟ್’ (ತೂಬು) ಅಳವಡಿಸುವ ಯೋಜನೆಗೆ ರಾಜ್ಯ ಸರ್ಕಾರ ಕಳೆದ ನವೆಂಬರ್‌ನಲ್ಲಿ ಅನುಮೋದನೆ ನೀಡಿದ್ದರೂ ಕಾಮಗಾರಿ ಆರಂಭಿಸಲು ಇನ್ನೂ ಅನುಮತಿ ಸಿಕ್ಕಿಲ್ಲ. 102 ಕೆರೆಗಳಿಗೆ ‘ಸ್ಲೂಯಿಸ್ ಗೇಟ್’ ನಿರ್ಮಿಸಲು ₹36.85 ಕೋಟಿ ವೆಚ್ಚ ಮಾಡಲು ಸಮ್ಮತಿಸಿದ್ದರು. ಟೆಂಡರ್ ಪ್ರಕ್ರಿಯೆ ಮುಗಿದು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು. ಈವರೆಗೂ ಸಮ್ಮತಿ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯೂ ಕೆರೆಗಳಿಂದ ಹರಿಯುವ ನೀರಿನ ಗತಿಯನ್ನು ತಗ್ಗಿಸುವುದು ಸಾಧ್ಯವಾಗುವುದಿಲ್ಲ. ‘10 ಕೆರೆಗಳಲ್ಲಿ ತೂಬು ಅಳವಡಿಸುವ ಕಾರ್ಯ ಹಿಂದೆಯೇ ಆರಂಭವಾಗಿತ್ತು. ಅದು ನಡೆಯುತ್ತಿದೆ. ಆದರೆ 102 ಕೆರೆಗಳಲ್ಲಿ ತೂಬು ಅಳವಡಿಸುವ ಕಾರ್ಯಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕ ಮೇಲೆ ಕಾರ್ಯಾದೇಶ ನೀಡಬೇಕಾಗುತ್ತದೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ತಿಳಿಸಿದರು.
ರಾಜಕಾಲುವೆ ಒತ್ತುವರಿ ಅಂಕಿ–ಅಂಶ 2951 ಒಟ್ಟು ಒತ್ತುವರಿ ಪ್ರಕರಣ 784 ಒಟ್ಟು ತೆರವು ಬಾಕಿ 118 ನ್ಯಾಯಾಲಯದಲ್ಲಿರುವ ಪ್ರಕರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.