ಬೆಂಗಳೂರು: ಪಂಚೆ ಧರಿಸಿದ ಕಾರಣಕ್ಕೆ ರೈತರೊಬ್ಬರಿಗೆ ಮಾಲ್ ಒಂದು ಪ್ರವೇಶ ನಿಷೇಧಿಸಿದ ಘಟನೆ ಬೆನ್ನಲ್ಲೇ ಇದೀಗ, ಅಂತಹದ್ದೇ ಅನುಭವವನ್ನು ಫ್ರಿಡೋ ಸಂಸ್ಥಾಪಕ ಹಾಗೂ ಸಿಇಒ ಗಣೇಶ್ ಸೋನಾವಾನೆ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ಚಪ್ಪಲಿ ಧರಿಸಿದ್ದಕ್ಕಾಗಿ ನನಗೆ ಹಾಗೂ ಏಥರ್ ಸಹ–ಸಂಸ್ಥಾಪಕ ಸ್ವಪ್ನಿಲ್ ಜೈನ್ ಅವರಿಗೆ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಪ್ರವೇಶ ನಿರಾಕರಿಸಲಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಆದರೆ ರೆಸ್ಟೋರೆಂಟ್ ಹೆಸರು, ಸ್ಥಳ ಹಾಗೂ ಯಾವಾಗ ಘಟನೆ ನಡೆದಿತ್ತು ಎನ್ನುವುದರ ಬಗ್ಗೆ ಅವರು ಉಲ್ಲೇಖಿಸಿಲ್ಲ.
‘ನಾನು ಅದನ್ನು ಗೌರವಿಸಿ ಬೇರೊಂದು ರೆಸ್ಟೋರೆಂಟ್‌ಗೆ ತೆರಳಿದೆವು. ಇದನ್ನು ನಾನು ತಾರತಮ್ಯ ಎಂದು ಕರೆಯುತ್ತಿಲ್ಲ, ಘಟನೆಯನ್ನು ಹಂಚಿಕೊಂಡೆ ಅಷ್ಟೇ’ ಎಂದು ಇನ್ನೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅದೊಂದು ಮೂರ್ಖತನದ ನಿರ್ಧಾರ ಎಂದು ಅವತ್ತು ಅನಿಸಿತ್ತು ಎಂದು ಅವರು ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ನಾಗರಾಜ್ ಅವರು ತಮ್ಮ ತಂದೆ ಫಕೀರಪ್ಪ ಅವರಿಗೆ ಸಿನಿಮಾ ತೋರಿಸಲು ಜಿ.ಟಿ ವರ್ಲ್ಡ್ ಮಾಲ್‌ಗೆ ಮಂಗಳವಾರ ಸಂಜೆ ಕರೆದುಕೊಂಡು ಬಂದಿದ್ದರು. ಫಕೀರಪ್ಪ ಅವರು ಪಂಚೆ ಧರಿಸಿ ತಲೆಗೆ ಟವಲ್‌ನಿಂದ ಪೇಟ ಸುತ್ತಿಕೊಂಡಿದ್ದರು. ಮಾಲ್‌ನ ಭದ್ರತಾ ಸಿಬ್ಬಂದಿ, ಪ್ರವೇಶ ದ್ವಾರದಲ್ಲೇ ತಡೆದು ಪ್ರವೇಶ ನಿರಾಕರಿಸಿದರು. ಅಲ್ಲದೇ ಅರ್ಧ ಗಂಟೆಗೂ ಹೆಚ್ಚು ಪ್ರವೇಶ ದ್ವಾರದಲ್ಲೇ ಕಾಯಿಸಿದ್ದರು.
ಅದನ್ನು ನಾಗರಾಜ್ ಪ್ರಶ್ನಿಸಿದಾಗ ‘ನಿಮ್ಮ ತಂದೆ ಪಂಚೆ ಹಾಕಿರುವುದರಿಂದ ಪ್ರವೇಶ ನೀಡುವುದಿಲ್ಲ’ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದರು ಎನ್ನಲಾಗಿದೆ. ಮಾಲ್ ಎದುರೇ ನಿಂತು ನಾಗರಾಜ್ ಅವರು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆಯೇ ಆಕ್ರೋಶ ಹೆಚ್ಚಾಗಿತ್ತು.
ಇದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮಾಲ್ ಕ್ಷಮೆಯನ್ನೂ ಯಾಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.